ಅನೇಕ ಭಾಷೆಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಯಶಸ್ವಿ ಆಗಿದೆ. ಹಿಂದಿ, ಕನ್ನಡದ ಬಳಿಕ ಇತರೆ ಭಾಷೆಯ ಕಿರುತೆರೆ ವಾಹಿನಿಗಳಲ್ಲೂ ಈ ರಿಯಾಲಿಟಿ ಶೋ ಜನಪ್ರಿಯತೆ ಪಡೆದುಕೊಂಡಿದೆ. ತಮಿಳಿನಲ್ಲಿ ಕಮಲ್ ಹಾಸನ್ ಅವರು ಬಿಗ್ ಬಾಸ್ ನಿರೂಪಕನಾಗಿ ಜನಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಈಗ ತಮಿಳು ಬಿಗ್ ಬಾಸ್ 5ನೇ ಸೀಸನ್ (Tamil Bigg Boss 5) ಮುಕ್ತಾಯ ಆಗಿದೆ. ಕೊವಿಡ್ ಆತಂಕದ ನಡುವೆಯೂ ಯಶಸ್ವಿಯಾಗಿ ಈ ಸೀಸನ್ ಪೂರ್ಣಗೊಂಡಿದೆ. ಈ ಬಾರಿಯ ವಿನ್ನರ್ ಆಗಿ ರಾಜು ಜಯಮೋಹನ್ ಹೊರಹೊಮ್ಮಿದ್ದಾರೆ. ಜ.16ರ ಭಾನುವಾರ ರಾತ್ರಿ ಬಿಗ್ ಬಾಸ್ ಫಿನಾಲೆ ಅದ್ದೂರಿಯಾಗಿ ನಡೆಯಿತು. ಕಮಲ್ ಹಾಸನ್ (Kamal Haasan) ಅವರು ತುಂಬ ಲವಲವಿಕೆಯಿಂದ ಶೋ ನಡೆಸಿಕೊಟ್ಟರು. ಐವರು ಫೈನಲಿಸ್ಟ್ಗಳ ಪೈಕಿ ಅತಿ ಹೆಚ್ಚು ವೋಟ್ ಪಡೆಯುವ ಮೂಲಕ ರಾಜು ಜಯಮೋಹನ್ (Raju Jeyamohan) ಅವರು ಬಿಗ್ ಬಾಸ್ ವಿನ್ನರ್ ಪಟ್ಟಕ್ಕೆ ಏರಿದರು. ಆ ಮೂಲಕ ಬಿಗ್ ಬಾಸ್ ತಮಿಳು 5ನೇ ಸೀಸನ್ಗೆ ತೆರೆ ಎಳೆಯಲಾಗಿದೆ.
ಎಂದಿನಂತೆ ಈ ಬಾರಿಯ ಫಿನಾಲೆಯಲ್ಲೂ ಸಖತ್ ಹಣಾಹಣಿ ಏರ್ಪಟ್ಟಿತ್ತು. ರಾಜು ಜಯಮೋಹನ್ ಜೊತೆಗೆ ಪ್ರಿಯಾಂಕಾ ದೇಶಪಾಂಡೆ, ಪಾವನಿ ರೆಡ್ಡಿ, ನಿರೂಪ್ ನಂದಕುಮಾರ್ ಹಾಗೂ ಆಮಿರ್ ಅವರು ಅಂತಿಮ ಘಟ್ಟಕ್ಕೆ ಬಂದಿದ್ದರು. ಎಲ್ಲರ ನಡುವೆ ಟಫ್ ಸ್ಪರ್ಧೆ ಏರ್ಪಟ್ಟಿತ್ತು. ಫಿನಾಲೆ ವೇದಿಕೆ ಮೇಲೆ ರಂಗುರಂಗಿನ ಕಾರ್ಯಕ್ರಮಗಳು ಕೂಡ ನಡೆದವು. ಭರ್ಜರಿ ಮನರಂಜನೆ ನೀಡುವುದರ ಜೊತೆ ಕಮಲ್ ಹಾಸನ್ ಅವರು ವಿನ್ನರ್ ಹೆಸರು ಘೋಷಿಸಿದರು. ಪ್ರಿಯಾಂಕಾ ದೇಶಪಾಂಡೆ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿದಿರುವ ರಾಜು ಜಯಮೋಹನ್ ಅವರಿಗೆ 50 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಈ ಸೀಸನ್ನ 2ನೇ ಸ್ಪರ್ಧಿಯಾಗಿ ರಾಜು ಜಯಮೋಹನ್ ಅವರು ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ತಮ್ಮ ಪ್ರತಿಭೆಯ ಮೂಲಕ ಎಲ್ಲರನ್ನೂ ಸೆಳೆದುಕೊಳ್ಳುವಲ್ಲಿ ಅವರು ಯಶಸ್ವಿಯಾದರು. ಸ್ಟ್ಯಾಂಡಪ್ ಕಾಮಿಡಿಯನ್ ಆದ ಅವರಿಗೆ ಬಹುಬೇಗ ಜನಾಕರ್ಷಣೆ ಸಿಕ್ಕಿತು. ಮಿಮಿಕ್ರಿ ಕಲೆಯಿಂದ ಹಾಗೂ ಪಂಚಿಂಗ್ ಡೈಲಾಗ್ಗಳಿಂದ ಅವರು ಎಲ್ಲರನ್ನೂ ರಂಜಿಸುತ್ತಿದ್ದರು.
ಈ ಸೀಸನ್ನಲ್ಲಿ 5 ಬಾರಿ ರಾಜು ಜಯಮೋಹನ್ ಅವರು ನಾಮಿನೇಟ್ ಆಗಿದ್ದರು. ಆದರೂ ಕೂಡ ಜನರ ವೋಟ್ ಪಡೆಯುವ ಮೂಲಕ ಅವರು ಸೇವ್ ಆಗುತ್ತಲೇ ಬಂದರು. ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಬೆಂಬಲ ಸೂಚಿಸಿದ್ದರು. ಅಂತಿಮವಾಗಿ ಅವರಿಗೆ ವೀಕ್ಷಕರು ವಿಜಯದ ಮಾಲೆ ಹಾಕಿದ್ದಾರೆ. ಆದಷ್ಟು ಬೇಗ ಬಿಗ್ ಬಾಸ್ ತಮಿಳು 6ನೇ ಸೀಸನ್ ಆರಂಭಿಸುವುದಾಗಿ ಕಮಲ್ ಹಾಸನ್ ಹೇಳಿದ್ದಾರೆ. ಕಿರುತೆರೆಯಲ್ಲಿ ನಟಿಸಿರುವ ರಾಜು ಜಯಮೋಹನ್ ಅವರಿಗೆ ಈಗ ಸಿನಿಮಾ ಆಫರ್ಗಳು ಬರಲು ಆರಂಭಿಸಿವೆ.
ಇದನ್ನೂ ಓದಿ:
ಬಿಗ್ ಬಾಸ್ನಲ್ಲಿ ಹೆದರಿಸೋಕೆ ಹೋಗುತ್ತಿದ್ದ ಶುಭಾ ಪೂಂಜಾ ಕೈಯಲ್ಲಿ ಈಗ ಹಾರರ್ ಸಿನಿಮಾ
ದಕ್ಷಿಣ ಭಾರತಕ್ಕೂ ಕಾಲಿಟ್ಟ ‘ಬಿಗ್ ಬಾಸ್ ಒಟಿಟಿ’; ಕನ್ನಡಿಗರಲ್ಲೂ ಹೆಚ್ಚಿತು ಕುತೂಹಲ