ದಕ್ಷಿಣ ಭಾರತಕ್ಕೂ ಕಾಲಿಟ್ಟ ‘ಬಿಗ್ ಬಾಸ್ ಒಟಿಟಿ’; ಕನ್ನಡಿಗರಲ್ಲೂ ಹೆಚ್ಚಿತು ಕುತೂಹಲ
Bigg Boss OTT: ಈ ಕಾರ್ಯಕ್ರಮ ಟಿವಿಯಲ್ಲಿ ಪ್ರಸಾರ ಆಗುವುದಿಲ್ಲ. ಆಟದ ವೈಖರಿ ಇನ್ನಷ್ಟು ಭಿನ್ನವಾಗಿ ಇರುತ್ತದೆ. ಸ್ಪರ್ಧಿಗಳಿಗೆ ಕೊಂಚ ಬೋಲ್ಡ್ ಆದಂತಹ ಟಾಸ್ಕ್ಗಳನ್ನು ನೀಡಲಾಗುತ್ತದೆ.
ಬಿಗ್ ಬಾಸ್ (Bigg Boss) ರಿಲಿಯಾಟಿ ಶೋಗೆ ಅದರದ್ದೇ ಆದ ಪ್ರೇಕ್ಷಕರ ವರ್ಗ ಇದೆ. ಹಿಂದಿ, ತೆಲುಗು, ಕನ್ನಡ, ಮಲಯಾಳಂ, ತಮಿಳು ಮುಂತಾದ ಭಾಷೆಯಲ್ಲಿ ಈ ಕಾರ್ಯಕ್ರಮ ಯಶಸ್ವಿ ಆಗಿದೆ. ಹಲವು ಸೀಸನ್ಗಳಲ್ಲಿ ನಡೆದುಕೊಂಡು ಬಂದಿರುವ ಈ ಶೋನಿಂದಾಗಿ ಸ್ಟಾರ್ ಆದವರ ಸಂಖ್ಯೆ ದೊಡ್ಡದಿದೆ. ಈ ವರ್ಷದಿಂದ ಹಿಂದಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಒಂದಷ್ಟು ಬದಲಾವಣೆಗಳು ಆದವು. ಇದೇ ಮೊದಲ ಬಾರಿಗೆ ‘ಬಿಗ್ ಬಾಸ್ ಒಟಿಟಿ’ (Bigg Boss OTT) ಎಂಬ ಕಾನ್ಸೆಪ್ಟ್ ಪರಿಚಯಿಸಲಾಯಿತು. ಅದೀಗ ದಕ್ಷಿಣ ಭಾರತಕ್ಕೂ ಕಾಲಿಟ್ಟಿದೆ. ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರು ‘ತೆಲುಗು ಬಿಗ್ ಬಾಸ್ ಒಟಿಟಿ’ (Bigg Boss Telugu OTT) ನಡೆಸಿಕೊಡಲಿದ್ದಾರೆ. ಹಾಗಾದರೆ ಕನ್ನಡದಲ್ಲಿ ಈ ವರ್ಷನ್ ಶುರುವಾಗುವುದು ಯಾವಾಗ ಎಂಬ ಕೌತುಕ ಕೂಡ ನಿರ್ಮಾಣ ಆಗಿದೆ.
ಮೊದಲ ಲಾಕ್ಡೌನ್ ಬಳಿಕ ಮನರಂಜನಾ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳಾದವು. ಚಿತ್ರಮಂದಿರಗಳಿಗಿಂತಲೂ ಹೆಚ್ಚಾಗಿ ಒಟಿಟಿ ಪ್ಲಾಟ್ಫಾರ್ಮ್ ಮೂಲಕ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಿತು. ನೆಟ್ಫ್ಲಿಕ್ಸ್, ಅಮೇಜಾನ್ ಪ್ರೈಂ ವಿಡಿಯೋ, ಜೀ5, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮುಂತಾದ ಒಟಿಟಿ ವೇದಿಕೆಗಳ ವ್ಯವಹಾರ ವೃದ್ಧಿಸಿತು. ಹಲವು ಸ್ಟಾರ್ ನಟರ ಸಿನಿಮಾಗಳು ಕೂಡ ನೇರವಾಗಿ ಒಟಿಟಿ ಮೂಲಕ ಬಿಡುಗಡೆಯಾಗಿ ಒಳ್ಳೆಯ ಲಾಭ ಮಾಡಿಕೊಂಡ ಉದಾಹರಣೆ ಇದೆ. ಅದೇ ರೀತಿ ಬಿಗ್ ಬಾಸ್ ರಿಯಾಲಿಟಿ ಶೋ ಕೂಡ ಒಟಿಟಿ ಪ್ಲಾಟ್ಫಾರ್ಮ್ ಮೇಲೆ ಕಣ್ಣಿಟ್ಟಿತು.
ಕರಣ್ ಜೋಹರ್ ಅವರು ‘ಹಿಂದಿ ಬಿಗ್ ಬಾಸ್ ಒಟಿಟಿ’ ಮೊದಲ ಸೀಸನ್ ನಡೆಸಿಕೊಟ್ಟರು. ಈಗ ನಾಗಾರ್ಜುನ ಅವರು ತೆಲುಗಿನಲ್ಲೇ ಶುರು ಮಾಡಲು ಸಜ್ಜಾಗಿದ್ದಾರೆ. ಈ ಕಾರ್ಯಕ್ರಮ ಟಿವಿಯಲ್ಲಿ ಪ್ರಸಾರ ಆಗುವುದಿಲ್ಲ. ಹಾಗಾಗಿ ಆಟದ ವೈಖರಿ ಇನ್ನಷ್ಟು ಭಿನ್ನವಾಗಿ ಇರುತ್ತದೆ. ಸ್ಪರ್ಧಿಗಳು ಹೆಚ್ಚು ಮುಚ್ಚುಮರೆ ಇಲ್ಲದೆ ನಡೆದುಕೊಳ್ಳುತ್ತಾರೆ. ಕೊಂಚ ಬೋಲ್ಡ್ ಆದ ಟಾಸ್ಕ್ಗಳು ಇರುತ್ತವೆ. ಈ ಎಲ್ಲ ಕಾರಣಗಳಿಂದಾಗಿ ಒಟಿಟಿ ಪ್ರೇಕ್ಷಕರನ್ನು ‘ತೆಲುಗು ಬಿಗ್ ಬಾಸ್ ಒಟಿಟಿ’ ಕಾರ್ಯಕ್ರಮ ಸೆಳೆದುಕೊಳ್ಳುವ ನಿರೀಕ್ಷೆ ಇದೆ.
ಇದರಲ್ಲಿ ಯಾರೆಲ್ಲ ಭಾಗವಹಿಸುತ್ತಾರೆ? ಯಾವಾಗಿಂದ ಶೋ ಆರಂಭ ಆಗಲಿದೆ ಎಂಬಿತ್ಯಾದಿ ಮಾಹಿತಿ ಇನ್ನಷ್ಟೇ ಲಭ್ಯ ಆಗಬೇಕಿದೆ. ಒಮಿಕ್ರಾನ್ ಹರಡುವ ಭೀತಿ ಇರುವುದರಿಂದ ದೊಡ್ಡ ಮಟ್ಟದಲ್ಲಿ ರಿಯಾಲಿಟಿ ಶೋ ಆಯೋಜನೆ ಮಾಡುವುದು ಕಷ್ಟ ಕೂಡ ಹೌದು. ಹಾಗಾಗಿ ಮುಂದೇನಾಗುತ್ತದೆ ಎಂಬ ಪ್ರಶ್ನೆ ಎಲ್ಲ ಮನದಲ್ಲೂ ಮೂಡಿದೆ.
ಇದನ್ನೂ ಓದಿ:
ರಮೋಲಾ ‘ಕನ್ನಡತಿ’ ಧಾರಾವಾಹಿ ತೊರೆದಿದ್ದೇಕೆ? ಸಾನಿಯಾ ಪಾತ್ರ ಮಾಡೋರು ಯಾರು? ಇಲ್ಲಿದೆ ಉತ್ತರ
‘ಮುಸ್ಲಿಂ ಹುಡುಗನನ್ನು ಮದುವೆ ಆಗಲ್ಲ’: ಬಲವಾದ ಕಾರಣ ನೀಡಿದ ಮುಸ್ಲಿಂ ನಟಿ ಉರ್ಫಿ ಜಾವೇದ್