ಟಿ.ಎನ್. ಸೀತಾರಾಮ್ (TN Seetharam) ಅವರು ಕಿರುತೆರೆ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ‘ಮಾಯಾಮೃಗ’ (Mayamruga) ಮೊದಲಾದ ಧಾರಾವಾಹಿಗಳನ್ನು ನಿರ್ದೇಶಿಸಿ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿದ್ದಾರೆ. ಈಗ ಅವರ ಗೆಳೆಯ, ನಟ ಯಲಹಂಕ ಬಾಲಾಜಿ ಅವರು ನಿಧನ ಹೊಂದಿದ್ದಾರೆ. ಈ ಬಗ್ಗೆ ಸೀತಾರಾಮ್ ಅವರು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.
ಸೀತಾರಾಮ್ ಅವರು ನಿರ್ದೇಶನ ಮಾಡಿದ ಮೊದಲ ಧಾರಾವಾಹಿ ‘ಮಾಯಾಮೃಗ’. 1998ರಲ್ಲಿ ಈ ಧಾರಾವಾಹಿ ದೂರದರ್ಶನದಲ್ಲಿ ಪ್ರಸಾರ ಕಂಡಿತು. ನಂತರ ‘ಮನ್ವಂತರ’, ‘ಮುಕ್ತ’ ಮೊದಲಾದ ಧಾರಾವಾಹಿಗಳನ್ನು ಅವರು ನಿರ್ದೇಶನ ಮಾಡಿದರು. ‘ಮಗಳು ಜಾನಕಿ’ ಧಾರಾವಾಹಿ ಸದ್ಯಕ್ಕೆ ಅವರ ನಿರ್ದೇಶನದ ಕೊನೆಯ ಧಾರಾವಾಹಿ. ಈ ಧಾರಾವಾಹಿ 2018ರಿಂದ 2020ರವರೆಗೆ ಪ್ರಸಾರ ಕಂಡಿತು. ಸೀತಾರಾಮ್ ನಿರ್ದೇಶನದ ಎಲ್ಲಾ ಧಾರಾವಾಹಿಗಳಲ್ಲಿ ಬಾಲಾಜಿ ನಟಿಸಿದ್ದರು ಅನ್ನೋದು ವಿಶೇಷ. ಈ ಕಾರಣಕ್ಕೆ ಇಬ್ಬರ ನಡುವೆ ಒಳ್ಳೆಯ ಒಡನಾಟ ಬೆಳೆದಿತ್ತು.
ಬಾಲಾಜಿ ನಿಧನದ ಬಗ್ಗೆ ಸೀತಾರಾಮ್ ಅವರು ಭಾವುಕ ಪೋಸ್ಟ್ ಹಾಕಿಕೊಂಡಿದ್ದಾರೆ. ‘ನನ್ನ ಆತ್ಮೀಯ ಗೆಳೆಯ ಯಲಹಂಕ ಬಾಲಾಜಿ ಅಲ್ಪ ಕಾಲದ ಅನಾರೋಗ್ಯದ ನಂತರ ನಿಧನ ಹೊಂದಿದ್ದಾರೆ. ಮಾಯಾಮೃಗದಿಂದ ಮಗಳು ಜಾನಕಿಯವರೆಗೆ ನನ್ನ ಎಲ್ಲಾ ಧಾರಾವಾಹಿಗಳಲ್ಲೂ ಅವರು ನಟಿಸಿದ್ದರು. ಅತ್ಯಂತ ಹೃದಯವಂತ ಗೆಳೆಯ. ಎಲ್ಲ ಕಷ್ಟಗಳಲ್ಲೂ, ಸಂತೋಷಗಳಲ್ಲೂ ಜತೆಗೆ ಇರುತ್ತಿದ್ದ ಮನುಷ್ಯ. ಇಡೀ ಬದುಕಿನುದ್ದಕ್ಕೂ ಕಷ್ಟ ಕಂಡಿದ್ದರೂ ನಗುತ್ತಾ ಬದುಕಿದ ಗೆಳೆಯ. ಬಾಲಾಜಿ ಇನ್ನಿಲ್ಲ ಎಂದು ನೆನೆಸಿಕೊಂಡರೆ ಅಪಾರಸಂಕಟವಾಗುತ್ತದೆ. ತೀವ್ರ ನೋವಿನ ವಿದಾಯ ಬಾಲಾಜಿ’ ಎಂದು ಸೀತಾರಾಮ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಟಿ.ಎನ್. ಸೀತಾರಾಮ್ ಮದುವೆಯಲ್ಲೊಂದು ಅಚ್ಚರಿಯ ಪ್ರಸಂಗ; ಆ ಉಡುಗೊರೆಗೆ ಬೆಲೆ ಕಟ್ಟೋಕಾಗಲ್ಲ
ಸೀತಾರಾಮ್ ಅವರ ಈ ಪೋಸ್ಟ್ಗೆ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ‘ಬಾಲಾಜಿ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಬಾಲಾಜಿ ನಟನೆಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಬಾಲಾಜಿ ಅವರು ರಂಗಭೂಮಿ ಹಿನ್ನೆಲೆಯಿಂದ ಬಂದವರು. ನಂತರ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯರಾದರು.