ಬಿಗ್​​ಬಾಸ್ ವಿರುದ್ಧ ಪ್ರತಿಭಟನೆ, ಶೋ ನಿಲ್ಲಿಸುವಂತೆ ಒತ್ತಾಯ

Bigg Boss Tamil: ಹಲವು ಭಾಷೆಗಳಲ್ಲಿ ಬಿಗ್​​ಬಾಸ್ ಶೋ ಅತ್ಯುತ್ತಮ ಟಿಆರ್​​ಪಿ ಅನ್ನೇ ಗಳಿಸುತ್ತಿದೆ. ಸಲ್ಮಾನ್ ಖಾನ್, ಸುದೀಪ್, ಮೋಹನ್​​ಲಾಲ್, ವಿಜಯ್ ಸೇತುಪತಿ, ನಾಗಾರ್ಜುನ ಇನ್ನೂ ಕೆಲವು ಖ್ಯಾತ ನಾಮ ನಟರುಗಳು ಶೋನ ನಿರೂಪಣೆ ಮಾಡುತ್ತಿದ್ದಾರೆ. ಯಶಸ್ಸಿನ ಜೊತೆಗೆ ಕೆಲ ವಿವಾದಗಳು ಸಹ ಬಿಗ್​​ಬಾಸ್ ಶೋ ಅನ್ನು ಸುತ್ತಿಕೊಂಡಿವೆ. ಆಗಾಗ್ಗೆ ಶೋನ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಲೇ ಇರುತ್ತವೆ. ಇದೀಗ ರಾಜಕೀಯ ಪಕ್ಷವೊಂದು ಬಿಗ್​​ಬಾಸ್ ಶೋ ವಿರುದ್ಧ ಪ್ರತಿಭಟನೆ ನಡೆಸಿದೆ.

ಬಿಗ್​​ಬಾಸ್ ವಿರುದ್ಧ ಪ್ರತಿಭಟನೆ, ಶೋ ನಿಲ್ಲಿಸುವಂತೆ ಒತ್ತಾಯ
Bigg Boss Tamil

Updated on: Nov 11, 2025 | 6:02 PM

ಬಿಗ್​​ಬಾಸ್ (Bigg Boss) ರಿಯಾಲಿಟಿ ಶೋ, ಭಾರತದ ಬಲು ಜನಪ್ರಿಯ ರಿಯಾಲಿಟಿ ಶೋ. ಭಾರತದ ಹಲವು ಭಾಷೆಗಳಲ್ಲಿ ಬಿಗ್​​ಬಾಸ್ ಶೋ ಪ್ರಸಾರ ಆಗುತ್ತಿದೆ. ಹಲವು ಭಾಷೆಗಳಲ್ಲಿ ಬಿಗ್​​ಬಾಸ್ ಶೋ ಅತ್ಯುತ್ತಮ ಟಿಆರ್​​ಪಿ ಅನ್ನೇ ಗಳಿಸುತ್ತಿದೆ. ಸಲ್ಮಾನ್ ಖಾನ್, ಸುದೀಪ್, ಮೋಹನ್​​ಲಾಲ್, ವಿಜಯ್ ಸೇತುಪತಿ, ನಾಗಾರ್ಜುನ ಇನ್ನೂ ಕೆಲವು ಖ್ಯಾತ ನಾಮ ನಟರುಗಳು ಶೋನ ನಿರೂಪಣೆ ಮಾಡುತ್ತಿದ್ದಾರೆ. ಯಶಸ್ಸಿನ ಜೊತೆಗೆ ಕೆಲ ವಿವಾದಗಳು ಸಹ ಬಿಗ್​​ಬಾಸ್ ಶೋ ಅನ್ನು ಸುತ್ತಿಕೊಂಡಿವೆ. ಆಗಾಗ್ಗೆ ಶೋನ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಲೇ ಇರುತ್ತವೆ. ಇದೀಗ ರಾಜಕೀಯ ಪಕ್ಷವೊಂದು ಬಿಗ್​​ಬಾಸ್ ಶೋ ವಿರುದ್ಧ ಪ್ರತಿಭಟನೆ ನಡೆಸಿದೆ.

ಕನ್ನಡದಲ್ಲಿ ಪ್ರಸ್ತುತ ಬಿಗ್​​ಬಾಸ್ ಶೋ ನಡೆಯುತ್ತಿದೆ. ಇದರ ಜೊತೆಗೆ ನೆರೆಯ ತಮಿಳುನಾಡಿನಲ್ಲೂ ತಮಿಳು ಬಿಗ್​​ಬಾಸ್ ಶೋ ನಡೆಯುತ್ತಿದೆ. ಇದೀಗ ತಮಿಳು ಬಿಗ್​ಬಾಸ್ ಶೋ ಬಂದ್ ಮಾಡುವಂತೆ ಒತ್ತಾಯಿಸಿ ರಾಜಕೀಯ ಪಕ್ಷವಾದ ಟಿವಿಕೆ (ತಮಿಳಗ ವಳ್ಮುರಿಮೈ ಕಚ್ಚಿ) ಪ್ರತಿಭಟನೆ ನಡೆಸಿದೆ. ತಮಿಳುನಾಡಿನ ಆಡಳಿತ ಪಕ್ಷವಾದ ಡಿಎಂಕೆಯ ಮಿತ್ರ ಪಕ್ಷವಾಗಿದೆ ಈ ಟಿವಿಕೆ.

ಬಿಗ್​​ಬಾಸ್ ಶೋ, ತಮಿಳುನಾಡಿನ ಸಂಸ್ಕೃತಿ, ಸಂಪ್ರದಾಯಗಳನ್ನು ಹಾಳುಗೆಡವುತ್ತಿದೆ. ಈ ಶೋನಲ್ಲಿ ಕೌಟುಂಬಿಕ ಅಲ್ಲದ ದೃಶ್ಯಗಳನ್ನು, ಸಂಭಾಷಣೆಗಳನ್ನು ತೋರಿಸಲಾಗುತ್ತಿದೆ’ ಎಂದು ಆರೋಪಿಸಿ ಟಿವಿಕೆ ಸದಸ್ಯರು, ಮುಖಂಡರುಗಳು ಚೆನ್ನೈನಲ್ಲಿ, ತಮಿಳು ಬಿಗ್​ಬಾಸ್ ಶೋ ಸೆಟ್​ ಇರುವ ವೆಲ್ಸ್ ಫಿಲಂ ಸಿಟಿ ಬಳಿ ಪ್ರತಿಭಟನೆ ನಡೆಸಿದ್ದು, ನೂರಾರು ಸಂಖ್ಯೆಯಲ್ಲಿ ಪೊಲೀಸರು, ಸೆಟ್​​ನ ಬಳಿ ಹಾಜರಿದ್ದು, ರಕ್ಷಣೆ ಒದಗಿಸಿದ್ದಾರೆ.

ಇದನ್ನೂ ಓದಿ:ಬಿಗ್​​ಬಾಸ್ ಗೆದ್ದ ಟಿವಿ ನಟಿ ಅನುಮೋಲ್, ಸಿಕ್ಕ ಬಹುಮಾನವೆಷ್ಟು?

ಟಿವಿಕೆ ಪಕ್ಷದ ಮುಖಂಡ, ಶಾಸಕರೂ ಆಗಿರುವ ವೇಲುಮುರುಗನ್ ಮಾತನಾಡಿ, ‘ಬಿಗ್​​ಬಾಸ್​​ನಲ್ಲಿ ಅಶ್ಲೀಲ ಸಂಭಾಷಣೆಗಳು, ಕೆಟ್ಟ ಆಂಗಿಕ ಅಭಿನಯ, ಮುತ್ತು ನೀಡುವ ದೃಶ್ಯಗಳು, ಬೆಡ್​ರೂಂ ದೃಶ್ಯಗಳನ್ನು ಪ್ರಸಾರ ಮಾಡಲಾಗುತ್ತಿದೆ. ಶೋನ ಆಯೋಕರು, ತಮಿಳು ಸಂಸ್ಕೃತಿ, ಸಂಪ್ರದಾಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಈ ಶೋ ಎಲ್ಲ ವರ್ಗದ ಪ್ರೇಕ್ಷಕರಿಗೆ ಮಾಡಿದ್ದಲ್ಲ, ಇದು ಕೇವಲ ‘ವಯಸ್ಕರು ಮಾತ್ರ’ ಕಂಟೆಂಟ್ ಅನ್ನು ಹೊಂದಿದೆ. ಕೇವಲ ಹಣಕ್ಕಾಗಿ ಮಾಡಲಾಗುತ್ತಿರುವ ಶೋ ಇದಾಗಿದೆ’ ಎಂದಿದ್ದಾರೆ.

‘ಶೋನಲ್ಲಿ ಲೈಂಗಿಕತೆ ದೃಶ್ಯವನ್ನು ತೋರಿಸುವುದನ್ನು ಹೊರತುಪಡಿಸಿ ಇನ್ನೆಲ್ಲವನ್ನೂ ತೋರಿಸಲಾಗುತ್ತಿದೆ. ಅಷ್ಟು ಕಳಪೆ ದರ್ಜೆಯ ಕಂಟೆಂಟ್ ಅನ್ನು ಪ್ರಸಾರ ಮಾಡಲಾಗುತ್ತಿದೆ. ವಿಜಯ್ ಟಿವಿ, ಇಷ್ಟು ಕಳಪೆ ದರ್ಜೆಯ, ಅಶ್ಲೀಲವಾದ ಶೋ ಅನ್ನು ಪ್ರಸಾರ ಮಾಡಿ ಹಣ ಗಳಿಸಿಕೊಳ್ಳುವ ಅವಶ್ಯಕತೆ ಏನಿದೆ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

‘ನಾನು ಈ ಬಗ್ಗೆ ಈಗಾಗಲೇ ವಿಧಾನಸಭೆ ಅಧ್ಯಕ್ಷ ಅಪ್ಪನ್ ಅವರಿಗೆ ಪತ್ರ ಬರೆದಿದ್ದು, ಶೋ ಮೇಲೆ ನಿಷೇಧ ಹೇರಬೇಕು ಎಂದು ಮನವಿ ಮಾಡಿದ್ದೇನೆ. ಒಂದೊಮ್ಮೆ ಸ್ಪೀಕರ್ ಅವರು ಈ ವಿಷಯದ ಚರ್ಚೆಗೆ ಅವಕಾಶ ಕೊಡಲಿಲ್ಲವೆಂದರೆ, ಅಥವಾ ಸಿಎಂ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರು ಈ ಶೋ ಅನ್ನು ನಿಷೇಧಿಸಲಿಲ್ಲವೆಂದರೆ ನಾವುಗಳು ಇನ್ನೂ ದೊಡ್ಡ ಪ್ರತಿಭಟನೆಯನ್ನು ಶೋ ವಿರುದ್ಧ ಮಾಡಲಿದ್ದೇವೆ’ ಎಂದು ವೇಲುಮುರುಗನ್ ಎಚ್ಚರಿಕೆ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ