
ಕನ್ನಡದ ಪ್ರಮುಖ ಮನರಂಜನಾ ವಾಹಿನಿಯಾದ ‘ಉದಯ ಟಿವಿ’ (Udaya Tv) ತನ್ನ ಪ್ರೇಕ್ಷಕರಿಗೆ ದಸರಾ ಹಬ್ಬದ ಪ್ರಯುಕ್ತ ‘ಧ್ರುವ ದಸರಾ’ (Dhruva Dasara) ಕಾರ್ಯಕ್ರಮದ ಮೂಲಕ ಮನರಂಜನೆ ನೀಡಲಿದೆ. ಸೆ.27ರಂದು ಸಂಜೆ 6 ಗಂಟೆಗೆ ಇದು ಪ್ರಸಾರವಾಗಲಿದೆ. ಭರ್ಜರಿ ಸೆಟ್ನಲ್ಲಿ ಚಿತ್ರರಂಗದ ಪ್ರಮುಖ ತಾರೆಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಈ ಕಾರ್ಯಕ್ರಮ ಚಿತ್ರೀಕರಣಗೊಂಡಿದೆ. ಈ ವೇದಿಕೆಯಲ್ಲಿ ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ (Dhruva Sarja) ಅವರ ಸಿನಿಮಾ ಪಯಣ ಮತ್ತು ವೈಯಕ್ತಿಕ ಜೀವನದ ಹಲವು ಸಂಗತಿಗಳನ್ನು ತೆರೆದಿಡಲಾಗಿದೆ.
ಹಲವು ವಿಶೇಷ ವ್ಯಕ್ತಿಗಳು ಈ ವೇದಿಕೆಗೆ ಆಗಮಿಸಿದ್ದು ಸ್ವತಃ ಧ್ರುವ ಸರ್ಜಾ ಅವರಿಗೂ ಅಚ್ಚರಿ ಮೂಡಿಸಿತು. ಧ್ರುವ ಜೊತೆ ಕಳೆದ ಅಪರೂಪದ ವಿಷಯಗಳನ್ನು ಎಲ್ಲರೂ ಹಂಚಿಕೊಂಡರು. ಬಹಳಷ್ಟು ಕುತೂಹಲಕರ ಘಟನೆಗಳು, ಭಾವನಾತ್ಮಕ ವಿಷಯಗಳು ಎದುರಾದವು. ಕಿಕ್ಕಿರಿದು ನೆರೆದಿದ್ದ ಅಭಿಮಾನಿಗಳ ಜೈಕಾರದ ನಡುವೆ, ‘ಕೆಡಿ’ ಸಿನಿಮಾದ ಹಾಡಿನೊಂದಿಗೆ ಧ್ರುವ ಅವರು ಎಂಟ್ರಿ ನೀಡಿದರು. ಇನ್ಮುಂದೆ ಪ್ರತಿವರ್ಷ ಕನಿಷ್ಠ ಎರಡು ಸಿನಿಮಾಗಳಲ್ಲಿ ನಟಿಸುವುದಾಗಿ ಈ ವೇಳೆ ಧ್ರುವ ಸರ್ಜಾ ಹೇಳಿದರು.
ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಅವರು ಆಕಸ್ಮಿಕವಾಗಿ ವೇದಿಕೆಗೆ ಆಗಮಿಸಿದರು. ಆಗ ಅಣ್ಣನನ್ನು ನೆನೆದು ಧ್ರುವ ಭಾವುಕರಾದರು. ಧ್ರುವ ಸರ್ಜಾ ಪತ್ನಿ ಪ್ರೇರಣಾ ಕೂಡ ವೇದಿಕೆಗೆ ಬಂದು ಆಶ್ಚರ್ಯವನ್ನುಂಟುಮಾಡಿದರು. ಇದೇ ಸಂದರ್ಭದಲ್ಲಿ ತಮ್ಮ ಹಾಗೂ ಧ್ರುವ ನಡುವಿನ ಲವ್ ಸ್ಟೋರಿಯನ್ನು ಅವರು ಮೆಲುಕು ಹಾಕಿದರು. ಕೇಕ್ ಕತ್ತರಿಸಿ ಮುಂಗಡವಾಗಿ ಧ್ರುವ ಸರ್ಜಾ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಮಕ್ಕಳಾದ ರುದ್ರಾಕ್ಷಿ ಮತ್ತು ಹಯವದನ ಕೂಡ ಇದರಲ್ಲಿ ಭಾಗಿಯಾದರು.
ಅರ್ಜುನ್ ಸರ್ಜಾ ಅವರು ವಿಡಿಯೋ ಮುಖಾಂತರ ಶುಭ ಕೋರಿದರು. ಧ್ರುವ ಸರ್ಜಾ ಅವರಿಗೆ ನಟನೆ ಕಲಿಸಿದ ಗೌರಿ ದತ್ತು ಹಾಗೂ ಮಹಾಂತೇಶ್ ಅವರು ಮಾತನಾಡಿದರು. ನಾಟಕ ಶಾಲೆಗೆ ದೊಡ್ಡ ಪ್ರಮಾಣದ ದೇಣಿಗೆ ನೀಡಿದ್ದನ್ನು ಸ್ಮರಿಸಿದರು. ಕಷ್ಟದ ಸಮಯದಲ್ಲಿ ಧ್ರುವ ಸಹಾಯ ಮಾಡಿದ್ದನ್ನು ಚಂದನ್ ಶೆಟ್ಟಿ ನೆನಪು ಮಾಡಿಕೊಂಡರು. ನಟ ರಾಕೇಶ್ ಅಡಿಗ ಅವರು ಮಾತನಾಡಿ, ಧ್ರುವ ಸರ್ಜಾ ಬಾಲ್ಯದ ತುಂಟಾಟದ ಘಟನೆಗಳನ್ನು ಮೆಲುಕು ಹಾಕಿದರು.
ಹಲವರಿಗೆ ಧ್ರುವ ಸರ್ಜಾ ಅವರು ಸಹಾಯ ಮಾಡಿದ್ದಾರೆ. ಸಹಾಯ ಪಡೆದ ಅನೇಕರು ‘ಧ್ರುವ ದಸರಾ’ ವೇದಿಕೆಯಲ್ಲಿ ಆ ಬಗ್ಗೆ ಮಾತನಾಡಿದರು. ಐಶ್ವರ್ಯಾ ಸಿಂಧೋಗಿ, ಬುಲೆಟ್ ರಕ್ಷಕ್, ಯಶಸ್ವಿನಿ, ಆಸಿಯಾ ಬೇಗಂ, ರಮೋಲಾ, ಧನುಷ್ ಡ್ಯಾನ್ಸ್ ಮಾಡಿ ಗಮನ ಸೆಳೆದರು. ಚಿಲ್ಲರ್ ಮಂಜು, ಮನೋಹರ್ ಕಾಮಿಡಿಯಿಂದ ಎಲ್ಲರನ್ನೂ ನಗಿಸಿದರು. ಚೇತನ್ ಕುಮಾರ್, ಮುರಳಿ ಮಾಸ್ಟರ್, ಡೇವಿಡ್ ಮುಂತಾದವರು ಧ್ರುವ ಜೊತೆಗಿನ ತಮ್ಮ ಒಡನಾಟದ ಬಗ್ಗೆ ಮಾತಾಡಿದರು.
ಇದನ್ನೂ ಓದಿ: ಮಹಾಲಯ ಅಮಾವಾಸ್ಯೆ: ನಟ ಧ್ರುವ ಸರ್ಜಾ ಅವರಿಂದ ವಿಶೇಷ ಪೂಜೆ
‘ಉದಯ ಟಿವಿ’ಯ ಸಿಂಧು ಭೈರವಿ, ಶಾಂತಿನಿವಾಸ, ರಥಸಪ್ತಮಿ ಧಾರಾವಾಹಿಗಳ ಕಲಾವಿದರು ಡ್ಯಾನ್ಸ್ ಮಾಡಿ ರಂಜಿಸಿದರು. ‘ಕಾದಂಬರಿ’ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣ ಮಾಡಿದ್ದ ಶ್ವೇತಾ ಚಂಗಪ್ಪ ಅವರು ಮತ್ತೆ ಹಲವು ವರ್ಷಗಳ ನಂತರ ‘ಉದಯ ಟಿವಿ’ಯ ಧ್ರುವ ದಸರಾ ಕಾರ್ಯಕ್ರಮಕ್ಕೆ ನಿರೂಪಕಿಯಾಗಿದ್ದು ಕೂಡ ವಿಶೇಷವಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.