
2025ರ ಸೂಪರ್ ಹಿಟ್ ಸಿನಿಮಾಗಳ ಸಾಲಿನಲ್ಲಿ ‘ಕೂಲಿ’ ಚಿತ್ರ (Coolie Movie) ಕೂಡ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆದ ಈ ಸಿನಿಮಾಗೆ ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಈ ಸಿನಿಮಾ ಅಬ್ಬರಿಸಿತ್ತು. ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಮಾಯಿ ಮಾಡಿತು. ಈ ಸೂಪರ್ ಹಿಟ್ ಸಿನಿಮಾ ಈಗ ಕಿರುತೆರೆಗೆ ಎಂಟ್ರಿ ಕೊಡುತ್ತಿದೆ. ಹೌದು, ಟಿವಿಯಲ್ಲಿ ‘ಕೂಲಿ’ ಸಿನಿಮಾ ಪ್ರಸಾರಕ್ಕೆ ದಿನಾಂಕ ನಿಗದಿ ಆಗಿದೆ. ಉದಯ ಟಿವಿಯಲ್ಲಿ (Udaya Tv) ಈ ಸಿನಿಮಾ ಪ್ರಸಾರ ಆಗಲಿದೆ.
ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಂಡವರು ಈಗ ಕಿರುತೆರೆಯಲ್ಲಿ ‘ಕೂಲಿ’ ಸಿನಿಮಾ ನೋಡಿ ಎಂಜಾಯ್ ಮಾಡಬಹುದು. ಅಕ್ಟೋಬರ್ 19ರಂದು ಸಂಜೆ 6 ಗಂಟೆಗೆ ಉದಯ ಟಿವಿಯಲ್ಲಿ ‘ಕೂಲಿ’ ಚಿತ್ರದ ಕನ್ನಡ ವರ್ಷನ್ ಪ್ರಸಾರ ಆಗಲಿದೆ. ಮೂಲ ತಮಿಳಿನ ಈ ಸಿನಿಮಾದಲ್ಲಿ ಕನ್ನಡದ ಕಲಾವಿದರಾದ ಉಪೇಂದ್ರ ಹಾಗೂ ರಚಿತಾ ರಾಮ್ ಅವರು ಕೂಡ ಅಭಿನಯಿಸಿದ್ದಾರೆ.
‘ಕೂಲಿ’ ಸಿನಿಮಾದಲ್ಲಿ ಬಹುತಾರಾಗಣ ಇದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆದ್ದರಿಂದ ರಜನಿಕಾಂತ್ ಅವರ ಜೊತೆ ಬೇರೆ ಬೇರೆ ಭಾಷೆಯ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ನಟಿಸಿದ್ದಾರೆ. ಬಾಲಿವುಡ್ ನಟ ಆಮಿರ್ ಖಾನ್, ಟಾಲಿವುಡ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ, ಮಲಯಾಳಂ ಚಿತ್ರರಂಗದ ಸೌಬಿನ್ ಶಾಹಿರ್ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆ ಮೂಲಕ ‘ಕೂಲಿ’ ಭಾರಿ ನಿರೀಕ್ಷೆ ಮೂಡಿಸಿತ್ತು.
ಶ್ರುತಿ ಹಾಸನ್, ಸತ್ಯರಾಜ್ ಕೂಡ ‘ಕೂಲಿ’ ಸಿನಿಮಾದಲ್ಲಿ ಇದ್ದಾರೆ. ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ರಜನಿಕಾಂತ್ ಮತ್ತು ಲೋಕೇಶ್ ಕನಗರಾಜ್ ಅವರ ಕಾಂಬಿನೇಷನ್ ಆದ್ದರಿಂದ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ವಿಶೇಷ ಕ್ರೇಜ್ ಸೃಷ್ಟಿ ಆಗಿತ್ತು. ಹಾಡುಗಳು ಸೂಪರ್ ಹಿಟ್ ಆದವು. ರಜನಿಕಾಂತ್ ಅವರ ಅಭಿಮಾನಿಗಳಿಂದ ಈ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದಿದೆ.
ಇದನ್ನೂ ಓದಿ: ನಟ ರಜನಿಕಾಂತ್ ಮೂರ್ತಿಗೆ ಪೂಜೆ ಮಾಡಿ ನವರಾತ್ರಿ ಆಚರಿಸುತ್ತಿರುವ ಅಭಿಮಾನಿ
‘ಸನ್ ಪಿಕ್ಚರ್ಸ್’ ಮೂಲಕ ಕಲಾನಿಧಿ ಮಾರನ್ ಅವರು ‘ಕೂಲಿ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ 330 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ವಿದೇಶದ ಗಳಿಕೆಯನ್ನೂ ಸೇರಿಸಿದರೆ 500 ಕೋಟಿ ರೂಪಾಯಿಗೂ ಅಧಿಕ ಆಗಲಿದೆ. ಈಗ ಕಿರುತೆರೆಯಲ್ಲಿ ನೋಡುವ ಅವಕಾಶವನ್ನು ಉದಯ ಟಿವಿ ನೀಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.