ನಟ ರಜನಿಕಾಂತ್ ಮೂರ್ತಿಗೆ ಪೂಜೆ ಮಾಡಿ ನವರಾತ್ರಿ ಆಚರಿಸುತ್ತಿರುವ ಅಭಿಮಾನಿ
ದಕ್ಷಿಣ ಭಾರತದಲ್ಲಿ ಸಿನಿಮಾ ಕಲಾವಿದರನ್ನು ದೇವರ ರೀತಿ ಆರಾಧಿಸುವ ಅಭಿಮಾನಿಗಳು ಸಾಕಷ್ಟು ಮಂದಿ ಇದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಸಲುವಾಗಿ ಅಭಿಮಾನಿಯೊಬ್ಬರು ಮಧುರೈನಲ್ಲಿ ದೇವಸ್ಥಾನವನ್ನೇ ಕಟ್ಟಿದ್ದಾರೆ. ಆ ದೇವಸ್ಥಾನದಲ್ಲಿ ರಜನಿಕಾಂತ್ ಫೋಟೋ ಹಾಗೂ ಮೂರ್ತಿಗೆ ಪೂಜೆ ಮಾಡುವ ಮೂಲಕ ನವರಾತ್ರಿ ಹಬ್ಬ ಆಚರಿಸಲಾಗುತ್ತಿದೆ.

ಕಾಲಿವುಡ್ ನಟ ರಜನಿಕಾಂತ್ (Rajinikanth) ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಅವರನ್ನು ದೇವರಂತೆ ಕಾಣುವ ಅಭಿಮಾನಿಗಳ ಕೂಡ ಇದ್ದಾರೆ. ಅದಕ್ಕೆ ಈಗಾಗಲೇ ಹಲವು ಉದಾಹರಣೆಗಳು ಸಿಕ್ಕಿವೆ. ರಜನಿಕಾಂತ್ ಹೆಸರಲ್ಲಿ ದೇವಸ್ಥಾನಗಳನ್ನು ಕಟ್ಟಿದವರು ಇದ್ದಾರೆ. ಇಲ್ಲೋರ್ವ ಕಟ್ಟಾ ಅಭಿಮಾನಿ ರಜನಿಕಾಂತ್ ಮೂರ್ತಿಯನ್ನೇ ಇಟ್ಟು ನವರಾತ್ರಿ (Navratri) ಆಚರಿಸುತ್ತಿದ್ದಾರೆ. ನಿಜವಾಗಿಯೂ ದೇವರಿಗೆ ಪೂಜೆ ಮಾಡುವ ರೀತಿಯಲ್ಲೇ ರಜನಿಕಾಂತ್ ಮೂರ್ತಿಗೆ ಪೂಜೆ, ಆರತಿ ಮಾಡಿ ಹಬ್ಬ ಆಚರಿಸಲಾಗುತ್ತಿದೆ.
ಈ ಅಭಿಮಾನಿಯ ವಿಡಿಯೋ ವೈರಲ್ ಆಗಿದೆ. ನವರಾತ್ರಿಯ ಎಲ್ಲ ದಿನಗಳಲ್ಲೂ ರಜನಿಕಾಂತ್ ಅವರ ಫೋಟೋ ಹಾಗೂ ಮೂರ್ತಿಗಳಿಗೆ ಪೂಜೆ ಮಾಡಲಾಗುತ್ತಿದೆ. ಇಷ್ಟೆಲ್ಲ ಅಭಿಮಾನದಿಂದ ರಜನಿಗಾಗಿ ದೇವಸ್ಥಾನ ಕಟ್ಟಲಾಗಿದೆ. ಅದರಲ್ಲಿಯೇ ಈ ಪೂಜೆ ನಡೆಯುತ್ತಿದೆ. ರಜನಿಕಾಂತ್ ಅವರ ಮೂರ್ತಿ ಜೊತೆ ಹಲವಾರು ಪೋಸ್ಟರ್ಗಳನ್ನು ಇಡಲಾಗಿದೆ. ರಜನಿಕಾಂತ್ ಅವರು ಶಿವ, ಕೃಷ್ಣ ಮುಂತಾದ ದೇವರ ವೇಷದಲ್ಲಿ ಇರುವ ಪೋಸ್ಟರ್ಗಳು ರಾರಾಜಿಸುತ್ತಿವೆ.
ಅಂದಹಾಗೆ, ಈ ಅಭಿಮಾನಿ ಇರುವುದು ತಮಿಳುನಾಡಿನ ಮಧುರೈನಲ್ಲಿ. ಇವರ ಅಭಿಮಾನ ಕಂಡು ಜನರಿಗೆ ಅಚ್ಚರಿ ಆಗಿದೆ. ರಜನಿಕಾಂತ್ ಮೂರ್ತಿ ಹಾಗೂ ಫೋಟೋಗಳಿಗೆ ಪೂಜೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ತಮ್ಮ ಪಾಲಿಗೆ ರಜನಿಕಾಂತ್ ಅವರೇ ದೈವ ಎಂದು ಅಭಿಮಾನಿ ಹೇಳಿದ್ದಾರೆ. ಈ ರೀತಿಯಾಗಿ ತುಂಬ ಶ್ರದ್ಧೆಯಿಂದ ಅವರು ನವರಾತ್ರಿ ಆಚರಿಸುತ್ತಿದ್ದಾರೆ.
#WATCH | Madurai, Tamil Nadu | Ahead of Navaratri starting on 22 September, a superfan of superstar Rajinikanth has set up a kolu featuring over 230 representations of the superstar’s iconic characters at the Rajini temple. (19.09) pic.twitter.com/pVWsps8zQ4
— ANI (@ANI) September 20, 2025
‘ಈ ವರ್ಷ ನವರಾತ್ರಿ ಸಲುವಾಗಿ ನಾವು ರಜನಿ ದೇವಸ್ಥಾನದಲ್ಲಿ ವಿಶೇಷ ಮೂರ್ತಿ ಇರಿಸಿದ್ದೇವೆ. 15 ಹಂತಗಳಲ್ಲಿ ಆಚರಣೆ ಇರಲಿದೆ. ಮೊದಲ 10 ಹಂತಗಳಲ್ಲಿ ರಜನಿಕಾಂತ್ ಅವರ ಅತ್ಯುತ್ತಮ ಫೋಟೋಗಳನ್ನು ಇರಿಸಿ ಪೂಜೆ ಮಾಡಲಾಗುವುದು. ನಾವು ರಜನಿಕಾಂತ್ ಅವರನ್ನು ದೈವದ ರೀತಿ ಕಾಣುತ್ತೇವೆ. ಹಾಗಾಗಿ ಶಿವ ಮತ್ತು ಕೃಷ್ಣನ ವೇಷದಲ್ಲಿ ಅವರಿರುವ ಗೊಂಬೆಗಳನ್ನು ಇರಿಸಿದ್ದೇವೆ’ ಎಂದು ಅಭಿಮಾನಿ ಹೇಳಿದ್ದಾರೆ.
ಇದನ್ನೂ ಓದಿ: ರಜನಿಕಾಂತ್ ಉದಾಹರಣೆ ನೀಡಿ ಅಮಿತಾಭ್ ಬಚ್ಚನ್ಗೆ ಪಾಠ ಮಾಡಿದ ನೆಟ್ಟಿಗರು
ರಜನಿಕಾಂತ್ ಅವರಿಗೆ ಈಗ 74 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಕೂಡ ಅವರು ಸಿಕ್ಕಾಪಟ್ಟೆ ಬೇಡಿಕೆ ಹೊಂದಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ವರ್ಷ ಅವರು ನಟಿಸಿದ ‘ಕೂಲಿ’ ಸಿನಿಮಾ ಬಿಡುಗಡೆ ಆಯಿತು. ಈಗ ‘ಜೈಲರ್ 2’ ಸಿನಿಮಾದ ಕೆಲಸಗಳು ನಡೆಯುತ್ತಿವೆ. ಈ ಸಿನಿಮಾದ ಮೇಲೆ ಅಭಿಮಾನಿಗಳಿಗೆ ತುಂಬ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




