ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸುವ ಉಗ್ರಂ ಮಂಜು ಅವರು ಬಿಗ್ ಬಾಸ್ ಮನೆಯೊಳಗೆ ಗೌತಮಿ ಜಾದವ್ ಎದುರು ಮೆತ್ತಗಾಗಿದ್ದಾರೆ. ಮೊದಲಿದ್ದ ಆರ್ಭಟ ಕಾಣಿಸುತ್ತಲೇ ಇಲ್ಲ. ಗೌತಮಿ ವಿಚಾರದಲ್ಲಿ ಉಗ್ರಂ ಮಂಜು ಅವರು ತುಂಬ ಬದಲಾಗಿದ್ದಾರೆ ಎಂದರೆ ತಪ್ಪಿಲ್ಲ. ಇಬ್ಬರ ನಡುವೆ ಎಷ್ಟರಮಟ್ಟಿಗೆ ಆಪ್ತತೆ ಬೆಳೆದಿದೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಬುಧವಾರದ (ಜನವರಿ 15) ಸಂಚಿಕೆಯಲ್ಲಿ ಗೌತಮಿ ಬಗ್ಗೆ ಮಾತನಾಡುವಾಗ ಉಗ್ರಂ ಮಂಜು ಅವರು ಭಾವುಕರಾದರು. ಎಲ್ಲರ ಎದುರು ಅವರು ಅತ್ತರು. ನಟಿ ತಾರಾ ಕೂಡ ಈ ವೇಳೆ ಬಿಗ್ ಬಾಸ್ ಮನೆಯಲ್ಲಿ ಇದ್ದರು.
ಸಂಕ್ರಾಂತಿ ವಿಶೇಷ ಸಂಚಿಕೆಯ ಸಲುವಾಗಿ ಹಿರಿಯ ನಟಿ ತಾರಾ ಅವರು ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಬಂದಿದ್ದರು. ಎಲ್ಲರಿಗೂ ಅವರು ಹಬ್ಬದ ಊಟ ಮತ್ತು ಎಳ್ಳು-ಬೆಲ್ಲ ನೀಡಿದರು. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಬೇಕು. ನಮ್ಮ ನಡುವೆ ಇರುವ ಮನಸ್ತಾಪವನ್ನು ಇಲ್ಲಿಯೇ ಸರಿಪಡಿಸಿಕೊಳ್ಳೋಣ ಎಂದು ಹೇಳಿದ ತಾರಾ ಅವರು ಸ್ಪರ್ಧಿಗಳಿಗೆ ಮನದ ಮಾತು ಹಂಚಿಕೊಳ್ಳಲು ಅವಕಾಶ ನೀಡಿದರು.
ಉಗ್ರಂ ಮಂಜು ಅವರು ಎಲ್ಲರ ಎದುರು ನಿಂತು ಗೌತಮಿಯ ಕುರಿತು ಹೇಳಿದರು. ತಮಗೆ ಗೌತಮಿ ಜೊತೆ ಆಪ್ತತೆ ಬೆಳೆಯಲು ಕಾರಣ ಏನು ಎಂಬುದನ್ನು ಕೂಡ ವಿವರಿಸಿದರು. ತಮ್ಮ ಬಗ್ಗೆ ಕಾಳಜಿ ತೋರಿದ್ದರಿಂದ ಈ ರೀತಿ ಸ್ನೇಹ ಬೆಳೆಯಿತು ಎಂದು ಮಂಜು ಹೇಳಿದರು. ‘ತಂಗಿಯರು ಮದುವೆ ಆಗಿ ಹೋದ ಬಳಿಕ ನಾನು ಒಂಟಿಯಾಗಿದ್ದೆ. ಊಟದ ವಿಚಾರದಲ್ಲಿ ಯಾರಾದರೂ ಕಾಳಜಿ ತೋರಿಸಿದರೆ ಎಮೋಷನಲ್ ಆಗುತ್ತೇನೆ’ ಎಂದು ಉಗ್ರಂ ಮಂಜು ಅವರು ಹೇಳಿದರು.
ಇದನ್ನೂ ಓದಿ: ಮತ್ತೆ ಒಂದಾದ ಮಂಜು, ಮೋಕ್ಷಿತಾ, ಗೌತಮಿ; ಇದೇನು ಹೊಸ ಡ್ರಾಮಾ?
ಗೌತಮಿ ಜೊತೆ ಉಗ್ರಂ ಮಂಜು ಕ್ಲೋಸ್ ಆಗಿದ್ದರಿಂದ ಕೆಲವರಿಗೆ ಬೇಸರ ಆಗಿರಬಹುದು. ಸ್ನೇಹದಿಂದಾಗಿ ಗೌತಮಿಯ ಆಟದ ಮೇಲೆ ಕೂಡ ಪರಿಣಾಮ ಬೀರಿರಬಹುದು. ಇದರಿಂದಾಗಿ ಗೌತಮಿ ಅವರ ಕುಟುಂಬಕ್ಕೆ ಹಾಗೂ ಅವರನ್ನು ಇಷ್ಟಪಡುವವರಿಗೆ ನೋವಾಗಿರಬಹುದು. ಹಾಗಾಗಿ ಗೌತಮಿಯ ಕುಟುಂಬದವರಿಗೆ ಉಗ್ರಂ ಮಂಜು ಕ್ಷಮೆ ಕೇಳಿದರು. ಮಂಜು ಅವರು ಭಾವುಕವಾಗಿ ಮಾತನಾಡಿದ್ದರಿಂದ ಗೌತಮಿ ಕೂಡ ಕಣ್ಣೀರು ಹಾಕಿದ್ದಾರೆ. ಇಬ್ಬರೂ ತಮ್ಮ ನಡುವಿನ ಸ್ನೇಹವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಅನೇಕ ಬಾರಿ ಅವರಿಗೆ ಸಾಧ್ಯವಾಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.