ಈ ಬಾರಿ ಬಿಗ್ ಬಾಸ್ ಮನೆಗೆ ಬರ್ತಾರಾ ಅಂಡರ್ಟೇಕರ್, ಮೈಕ್ ಟೈಸನ್?
ಹಿಂದಿ ‘ಬಿಗ್ ಬಾಸ್’ ಹೊಸ ಆವೃತ್ತಿಗೆ ಯಾರೆಲ್ಲ ಬರಲಿದ್ದಾರೆ ಎಂಬ ಬಗ್ಗೆ ಚರ್ಚೆ ಜೋರಾಗಿದೆ. ಅಂಡರ್ಟೇಕರ್, ಮೈಕ್ ಟೈಸನ್ ಮುಂತಾದ ಘಟಾನುಘಟಿಗಳ ಹೆಸರುಗಳು ಕೇಳಿಬರುತ್ತಿವೆ. ವಿದೇಶದಲ್ಲಿನ ವೀಕ್ಷಕರನ್ನೂ ಸೆಳೆಯಲು ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅಂಡರ್ಟೇಕರ್, ಮೈಕ್ ಟೈಸನ್ ಹೆಸರು ಕೇಳಿ ವೀಕ್ಷಕರಿಗೆ ಥ್ರಿಲ್ ಆಗಿದೆ.

ಹಿಂದಿಯಲ್ಲಿ ಬಿಗ್ ಬಾಸ್ (Bigg Boss) ಶೋ ಸಖತ್ ಫೇಮಸ್ ಆಗಿದೆ. ಈಗಾಗಲೇ 18 ಸೀಸನ್ಗಳು ಯಶಸ್ವಿಯಾಗಿ ಮುಗಿದಿವೆ. 19ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಹೌದು, ‘ಬಿಗ್ ಬಾಸ್ 19’ (Bigg Boss 19) ರಿಯಾಲಿಟಿ ಶೋ ಆಗಸ್ಟ್ 24ರಂದು ಪ್ರಸಾರ ಆರಂಭಿಸಲಿದೆ. ಸಲ್ಮಾನ್ ಖಾನ್ ಅವರು ನಿರೂಪಣೆ ಮಾಡಲು ಸಜ್ಜಾಗಿದ್ದಾರೆ. ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಡುವ ಸ್ಪರ್ಧಿಗಳು ಯಾರು ಎಂಬ ಕೌತುಕ ವೀಕ್ಷಕರ ಮನದಲ್ಲಿ ಇದೆ. ಈಗಾಗಲೇ ಒಂದಷ್ಟು ಹೆಸರುಗಳು ಕೇಳಿಬರಲು ಆರಂಭಿಸಿವೆ. ಅಚ್ಚರಿ ಏನೆಂದರೆ, ಡಬ್ಲ್ಯುಡಬ್ಲ್ಯುಇ ಖ್ಯಾತಿಯ ಅಂಡರ್ಟೇಕರ್ (Undertaker) ಕೂಡ ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತದೆ.
ಡಬ್ಲ್ಯುಡಬ್ಲ್ಯುಇ ವೀಕ್ಷಿಸುವ ಎಲ್ಲರಿಗೂ ಅಂಡರ್ಟೇಕರ್ ಬಗ್ಗೆ ಚೆನ್ನಾಗಿ ಗೊತ್ತು. 30ಕ್ಕೂ ಅಧಿಕ ವರ್ಷಗಳ ಕಾಲ ಅವರು ಪ್ರೊಫೆಷನಲ್ ರಸ್ಲಿಂಗ್ನಲ್ಲಿ ತೊಡಗಿಕೊಂಡಿದ್ದರು. 2020ರಲ್ಲಿ ನಿವೃತ್ತಿ ಘೋಷಿಸಿದರು. ಡಬ್ಲ್ಯುಡಬ್ಲ್ಯುಇ ಅಖಾಡದಲ್ಲಿ ಅಂಡರ್ಟೇಕರ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಹಾಗಾಗಿ ಅವರಿಗೆ ವಿಶ್ವಾದ್ಯಂತ ಖ್ಯಾತಿ ಸಿಕ್ಕಿದೆ.
ಅಂಡರ್ಟೇಕರ್ ಅವರನ್ನು ‘ಬಿಗ್ ಬಾಸ್ 19’ ಶೋಗೆ ಕರೆಸಲು ಪ್ರಯತ್ನ ನಡೆಯುತ್ತಿದೆ. ವರದಿಗಳ ಪ್ರಕಾರ, ಅಂಡರ್ಟೇಕರ್ ಜೊತೆ ಬಿಗ್ ಬಾಸ್ ಆಯೋಜಕರು ಮಾತುಕತೆ ನಡೆಸಿದ್ದಾರೆ. ಅವರು ನೇರ ಸ್ಪರ್ಧಿಯಾಗಿ ಬರುವುದಿಲ್ಲ. ಬದಲಿಗೆ, ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾರೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಸೆಲೆಬ್ರಿಟಿಗಳನ್ನು ಬಿಗ್ ಬಾಸ್ ಮನೆಗೆ ಕರೆಸಲು ಪ್ಲ್ಯಾನ್ ಮಾಡಲಾಗುತ್ತಿದೆ. ಬಾಕ್ಸಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಮೆರಿಕದ ಮೈಕ್ ಟೈಸನ್ ಅವರನ್ನು ದೊಡ್ಮನೆಗೆ ಕರೆತರುವ ಪ್ರಯತ್ನ ಕೂಡ ಜಾರಿಯಲ್ಲಿದೆ ಎನ್ನಲಾಗಿದೆ. ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಸಿನಿಮಾದಲ್ಲಿ ಮೈಕ್ ಟೈಸನ್ ನಟಿಸಿದ್ದರು.
ಇದನ್ನೂ ಓದಿ: ಈ ಬಾರಿ ಬಿಗ್ ಬಾಸ್ ಥೀಮ್ ಏನು? ಟ್ರೇಲರ್ ಮೂಲಕ ಬಯಲಾಯ್ತು ವಿಷಯ
ಪ್ರತಿ ಸೀಸನ್ನಲ್ಲೂ ಬಿಗ್ ಬಾಸ್ ವೀಕ್ಷಕರಿಗೆ ಹೊಸತನ ಸಿಗುತ್ತದೆ. ಈ ಬಾರಿಯೂ ಒಂದಷ್ಟು ಹೊಸ ವಿಚಾರಗಳನ್ನು ಪರಿಚಯಿಸಲು ತೀರ್ಮಾನಿಸಲಾಗಿದೆ. ‘ಈ ಬಾರಿ ಮನೆಯವರದ್ದೇ ಸರ್ಕಾರ’ ಎಂದು ಹೊಸ ಪ್ರೋಮೋದಲ್ಲಿ ಸಲ್ಮಾನ್ ಖಾನ್ ಹೇಳಿದ್ದಾರೆ. ಆ ಕಾರಣದಿಂದಲೂ ವೀಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಕಲರ್ಸ್ ಟಿವಿ ಮತ್ತು ಜಿಯೋ ಹಾಟ್ ಸ್ಟಾರ್ ಮೂಲಕ ಬಿಗ್ ಬಾಸ್ ಪ್ರಸಾರ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




