
ವೈಷ್ಣವಿ ಗೌಡ (Vaishnavi Gowda) ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ‘ನಿಮ್ಮ ಮದುವೆ ಯಾವಾಗ?’ ಎಂದೆಲ್ಲ ಕೇಳುತ್ತಿದ್ದ ಪ್ರಶ್ನೆಗೆ ಅವರ ಕಡೆಯಿಂದ ಉತ್ತರ ಸಿಕ್ಕಿದೆ. ಭಾರತೀಯ ವಾಯುಪಡೆಯಲ್ಲಿ ಕೆಲಸ ಮಾಡುತ್ತಿರುವ ಅನುಕೂಲ್ ಮಿಶ್ರಾ ಜೊತೆ ವೈಷ್ಣವಿ ಗೌಡ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ವೈಷ್ಣವಿ ಮದುವೆ ಆಗುತ್ತಿದ್ದಾರೆ ಎಂದಾಗ ಅವರು ನಟಿಸುತ್ತಿರುವ ‘ಸೀತಾ ರಾಮ’ ಧಾರಾವಾಹಿ ಗತಿ ಏನು ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದ್ದೂ ಇದೆ. ಇದಕ್ಕೆ ಆಪ್ತ ಮೂಲಗಳಿಂದ ಸ್ಪಷ್ಟನೆ ಸಿಕ್ಕಿದೆ.
‘ಸೀತಾ ರಾಮ’ ಧಾರಾವಾಹಿ ಈಗಾಗಲೇ 400ಕ್ಕೂ ಅಧಿಕ ಎಪಿಸೋಡ್ಗಳನ್ನು ಪೂರ್ಣಗೊಳಿಸಿದೆ. ಉಳಿದ ಧಾರಾವಾಹಿಗಳಂತೆ ಈ ಧಾರಾವಾಹಿಯಲ್ಲೂ ಅತ್ತೆ-ಸೊಸೆ ಜಗಳ ಇಲ್ಲವೇ ಇಲ್ಲ ಎಂದೇನೂ ಅಲ್ಲ. ಇದರ ಜೊತೆ ಇನ್ನೂ ಕೆಲವು ವಿಚಾರಗಳನ್ನು ಸೇರಿಸಿ ಧಾರಾವಾಹಿಯನ್ನು ಕಟ್ಟಿಕೊಡಲಾಗುತ್ತಿದೆ. ಈ ಧಾರಾವಾಹಿಯಲ್ಲಿ ವೈಷ್ಣವಿ ಅವರು ಸೀತಾ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ವೈಷ್ಣವಿ ಮದುವೆ ಆದರೂ ಅದು ಧಾರಾವಾಹಿಯ ಮೇಲೆ ಯಾವುದೇ ಪರಿಣಾಮ ಬೀರದು ಎನ್ನಲಾಗಿದೆ.
ಕೆಲವು ಹೀರೋಯಿನ್ಗಳು ಮದುವೆ ಬಳಿಕ ಬಣ್ಣದ ಲೋಕದಿಂದ ದೂರವೇ ಉಳಿದುಕೊಂಡ ಉದಾಹರಣೆ ಇದೆ. ಇದಕ್ಕೆ ಹಿರಿತೆರೆ ಹಾಗೂ ಕಿರುತೆರೆ ಎಂಬ ಬೇಧವಿಲ್ಲ. ವೈಷ್ಣವಿ ಗೌಡ ಕೂಡ ಈಗ ಬಣ್ಣದ ಲೋಕದಿಂದ ದೂರ ಆಗುತ್ತಾರಾ? ‘ಸೀತಾ ರಾಮ’ ಧಾರಾವಾಹಿ ಕೊನೆ ಆಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಆದರೆ, ಆ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ.
ವೈಷ್ಣವಿ ಅವರು ವಿವಾಹದ ಬಳಿಕವೂ ‘ಸೀತಾ ರಾಮ’ ಧಾರಾವಾಹಿಯಲ್ಲಿ ನಟಿಸೋದನ್ನು ಮುಂದುವರಿಸುತ್ತಾರೆ. ಅವರು ಮದುವೆ ಬಳಿಕ ಬಣ್ಣ ಹಚ್ಚುವುದಕ್ಕೆ ಅವರ ಭಾವಿ ಪತಿ ಅನುಕೂಲ್ ಮಿಶ್ರಾ ಕಡೆಯಿಂದ ಯಾವುದೇ ವಿರೋಧ ಇಲ್ಲ. ಹೀಗಾಗಿ, ವೈಷ್ಣವಿ ಮದುವೆ ಬಳಿಕವೂ ‘ಸೀತಾ ರಾಮ’ ಧಾರಾವಾಹಿ ಮುಂದುವರಿಯಲಿದೆ. ಇದನ್ನು ಕೇಳಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: ವೈಷ್ಣವಿ ಗೌಡಗೆ ಈ ಮೊದಲು ಬಂದಿತ್ತು 300 ಮದುವೆ ಆಫರ್; ಅನುಕೂಲ್ನ ಒಪ್ಪಿದ್ದು ಹೇಗೆ?
ಬಣ್ಣದ ಲೋಕದಲ್ಲಿ ತೊಡಗಿಕೊಂಡಿರುವವರು ವಿವಾಹ ಆಗುವಾಗ ಸಾಕಷ್ಟು ಆಲೋಚನೆ ಮಾಡುತ್ತಾರೆ. ಚಿತ್ರರಂಗ/ಧಾರಾವಾಹಿ ರಂಗದಲ್ಲೇ ಇದ್ದವರಾದರೆ ಅವರಿಗೆ ಒಳ-ಹೊರವುಗಳು ಗೊತ್ತಿರುತ್ತವೆ. ಆದರೆ, ಚಿತ್ರರಂಗದ ಹೊರಗಿನವರನ್ನು ಮದುವೆ ಆಗಬೇಕು ಎಂದಾಗ ಸಾಕಷ್ಟು ಆಲೋಚಿಸಬೇಕಾಗುತ್ತದೆ. ಈಗ ವೈಷ್ಣವಿ ಗೌಡ ಅವರು ತಮ್ಮ ವೃತ್ತಿ ಜೀವನಕ್ಕೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಮುಂದಿನ ಆಲೋಚನೆಗಳನ್ನು ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:52 pm, Wed, 16 April 25