Vinay Gowda: ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್​ ಆದ ವಿನಯ್​ ಗೌಡ; ಯಾರಿಗೆಲ್ಲ ಕಾದಿದೆ ಸಂಕಷ್ಟ?

|

Updated on: Nov 03, 2023 | 1:09 PM

Bigg Boss Kannada: ವಿನಯ್​ ಗೌಡ ಅವರು ಬಿಗ್​ ಬಾಸ್​ ಮನೆಯಲ್ಲಿ ಹಲವರ ಜೊತೆ ಕಿರಿಕ್​ ಮಾಡಿಕೊಂಡಿದ್ದಾರೆ. ಬಹುತೇಕರೊಂದಿಗೆ ಅವರು ಜಗಳ ಮಾಡಿಕೊಂಡು ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಇದರ ಬೆನ್ನಲ್ಲೇ ಅವರಿಗೆ ಕ್ಯಾಪ್ಟನ್​ ಆಗುವ ಅವಕಾಶ ಸಿಕ್ಕಿದೆ. ಇದರಿಂದಾಗಿ ದೊಡ್ಮನೆಯಲ್ಲಿ ಅವರಿಗೆ ಒಂದಷ್ಟು ಅಧಿಕಾರ ಸಿಕ್ಕಂತಾಗಿದ್ದು, ಬೇರೆಯವರ ಮೇಲೆ ಇದು ಪರಿಣಾಮ ಬೀರಬಹುದು.

Vinay Gowda: ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್​ ಆದ ವಿನಯ್​ ಗೌಡ; ಯಾರಿಗೆಲ್ಲ ಕಾದಿದೆ ಸಂಕಷ್ಟ?
ವಿನಯ್​ ಗೌಡ
Follow us on

ಕಿರುತೆರೆ ನಟ ವಿನಯ್​ ಗೌಡ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada Season 10) ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ರಫ್​ ಆ್ಯಂಡ್​ ಟಫ್​ ಸ್ವಭಾವದಿಂದ ಅವರು ಗುರುತಿಸಿಕೊಂಡಿದ್ದಾರೆ. ಸೀರಿಯಲ್​ಗಳಲ್ಲಿ ಕಾಣಿಸಿಕೊಂಡಾಗ ಅವರ ನಿಜವಾದ ವ್ಯಕ್ತಿತ್ವ ಹೇಗೆ ಎಂಬುದು ಗೊತ್ತಾಗುತ್ತಿರಲಿಲ್ಲ. ಆದರೆ ಬಿಗ್​ ಬಾಸ್​ (BBK 10) ಮನೆಯೊಳಗೆ ಅವರ ಅಸಲಿ ಸ್ವಭಾವ ಬಹಿರಂಗ ಆಗಿದೆ. ಎಲ್ಲರ ಮೇಲೂ ಅವರು ಕೂಗಾಡುತ್ತಾರೆ. ಜೋರು ಧ್ವನಿಯಲ್ಲಿ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೇ ವಿನಯ್​ ಗೌಡ (Vinay Gowda) ಅವರಿಗೆ ಮಾತಿನ ಮೇಲೆ ಹಿಡಿತ ಇಲ್ಲ ಎಂಬ ಆರೋಪ ಕೂಡ ಇದೆ. ಈ ಎಲ್ಲ ಕಾರಣಕ್ಕಾಗಿ ಅವರಿಗೆ ವಿರೋಧ ವ್ಯಕ್ತವಾಗುತ್ತಿದೆ. ಎಲ್ಲ ವಿರೋಧದ ನಡುವೆಯೂ ಅವರು ಕ್ಯಾಪ್ಟನ್​ ಆಗಿದ್ದಾರೆ. ಹಾಗಾಗಿ ಇನ್ನುಳಿದ ಸ್ಪರ್ಧಿಗಳ ಪೈಕಿ ಕೆಲವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ವಿನಯ್​ ಅವರ ಜೊತೆ ಸಂಗೀತಾ ಶೃಂಗೇರಿ ಈಗಾಗಲೇ ಕಿರಿಕ್​ ಮಾಡಿಕೊಂಡಿದ್ದಾರೆ. ಮೊದಲಿನಿಂದಲೂ ಅವರಿಬ್ಬರ ನಡುವೆ ಜಗಳ ಆಗುತ್ತಲೇ ಇದೆ. ಟಾಸ್ಕ್ ವಿಚಾರದಲ್ಲಿ ಅವರಿಬ್ಬರು ಏಕವಚನದಲ್ಲಿ ಬೈಯ್ದುಕೊಂಡಿದ್ದಾರೆ. ಹಾಗಾಗಿ ಸಂಗೀತಾ ಶೃಂಗೇರಿ ಅವರನ್ನು ವಿನಯ್​ ಟಾರ್ಗೆಟ್​ ಮಾಡಬಹುದು. ಅಲ್ಲದೇ, ಇತ್ತೀಚೆಗಿನ ಹಳ್ಳಿ ಟಾಸ್ಕ್​ ವೇಳೆ ನಟಿ ತನಿಷಾ ಕುಪ್ಪಂಡ ಕೂಡ ವಿನಯ್​ ಜೊತೆ ಜಗಳ ಮಾಡಿದ್ದಾರೆ. ಆಗ ಅವರಿಬ್ಬರ ನಡುವೆ ಮಾತಿನ ಚಕಮಕಿ ಆಗಿದೆ. ಆದ್ದರಿಂದ ತನಿಶಾ ಕುಪ್ಪಂಡ ವಿಚಾರದಲ್ಲಿ ವಿನಯ್​ ಅವರು ಕಟ್ಟುನಿಟ್ಟಾಗಿ ನಡೆದುಕೊಳ್ಳುವ ಸಾಧ್ಯತೆ ಇದೆ.

ಡ್ರೋನ್​ ಪ್ರತಾಪ್​ ಅವರನ್ನು ವಿನಯ್​ ಗೌಡ ಅವರು ಈಗಾಗಲೇ ಟಾರ್ಗೆಟ್​ ಮಾಡಿದ್ದಾರೆ. ಪದೇ ಪದೇ ಪ್ರತಾಪ್​ ಅವರನ್ನು ವಿನಯ್​ ಹೀಯಾಳಿಸಿದ್ದಾರೆ. ಇತ್ತೀಚೆಗೆ ನಾಮಿನೇಷನ್​ ಪಾಸ್​ ಪಡೆದುಕೊಂಡಿದ್ದ ಪ್ರತಾಪ್​ ಅವರು ಬಹುತೇಕ ಮಹಿಳಾ ಸದಸ್ಯರನ್ನೇ ಸೇವ್​ ಮಾಡಿದರು. ಇದು ವಿನಯ್ ಅವರಿಗೆ ಹಿಡಿಸಲಿಲ್ಲ. ಹೀಗೆಯೇ ಆಗುತ್ತದೆ ಎಂದು ಅವರು ಮೊದಲೇ ಊಹಿಸಿದ್ದರು. ಪ್ರತಾಪ್​ ಅವರ ಬುದ್ಧಿಯನ್ನು ವಿನಯ್​ ಟೀಕಿಸುತ್ತಲೇ ಬಂದಿದ್ದಾರೆ. ಹಾಗಾಗಿ ಅವರ ಕ್ಯಾಪ್ಟೆನ್ಸಿಯಲ್ಲಿ ಪ್ರತಾಪ್​ಗೆ ಕಷ್ಟ ಆಗಬಹುದು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ವಿನಯ್​ ಗೌಡ ಕಾಲು ಇಟ್ಟಲ್ಲೆಲ್ಲ ಬರೀ ಜಗಳ

ಮೊದಲೇ ಹೇಳಿದಂತೆ ಸಂಗೀತಾ ಶೃಂಗೇರಿ ಮತ್ತು ವಿನಯ್​ ಗೌಡ ನಡುವೆ ವೈರತ್ವ ಮೂಡಿದೆ. ಕಾರ್ತಿಕ್​ ಮಹೇಶ್​ ಅವರು ಸಂಗೀತಾ ಜೊತೆ ಚೆನ್ನಾಗಿದ್ದಾರೆ. ಹಲವು ಸಂದರ್ಭಗಳಲ್ಲಿ ಅವರು ಸಂಗೀತಾಗೆ ಬೆಂಬಲ ನೀಡುತ್ತಿದ್ದಾರೆ. ಈ ಕಾರಣದಿಂದಲೇ ಕಾರ್ತಿಕ್​ ಅವರನ್ನು ಕಂಡರೆ ವಿನಯ್​ಗೆ ಅಸಮಾಧಾನ ಇದೆ. ಅಲ್ಲದೇ ತಮ್ಮ ಎದುರಿಗೆ ಇರುವ ಟಫ್​ ಸ್ಪರ್ಧಿ ಎಂದು ಕಾರ್ತಿಕ್​ರನ್ನು ಅವರು ಪರಿಗಣಿಸುತ್ತಾರೆ. ಆದ್ದರಿಂದ ಕಾರ್ತಿಕ್​ ಅವರಿಗೂ ಈ ವಾರದ ಚಟುವಟಿಕೆಗಳು ಸ್ಪಲ್ಪ ಟಫ್​ ಆಗಬಹುದು. ಮೊದಲು ತಪ್ಪು ಮಾಡಿ, ಮನಬಂದಂತೆ ಮಾತನಾಡಿ, ನಂತರ ಕ್ಷಮೆ ಕೇಳುವುದನ್ನು ವಿನಯ್​ ರೂಢಿಸಿಕೊಂಡಿದ್ದಾರೆ. ಈಗ ಅವರ ಕೈಗೆ ಕ್ಯಾಪ್ಟೆನ್ಸಿ ಸಿಕ್ಕಿರುವುದರಿಂದ ಅವರ ಈ ವರ್ತನೆ ಇನ್ನಷ್ಟು ಹೆಚ್ಚಾದರೂ ಅಚ್ಚರಿ ಏನಿಲ್ಲ. ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಈ ಶೋ ಪ್ರಸಾರ ಆಗುತ್ತಿದೆ. ಜಿಯೋ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.