ನೋಡನೋಡುತ್ತಿದ್ದಂತೆಯೇ ‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ರಿಯಾಲಿಟಿ ಶೋ ಕೊನೆಯ ಹಂತವನ್ನು ತಲುಪಿದೆ. ಜನವರಿ 27 ಮತ್ತು 28ರಂದು ಫಿನಾಲೆ ಸಂಚಿಕೆ ಪ್ರಸಾರ ಆಗಲಿದೆ. ಈಗಾಗಲೇ ಸಂಗೀತಾ ಶೃಂಗೇರಿ, ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಅವರು ಫಿನಾಲೆಗೆ ಎಂಟ್ರಿ ನೀಡಿದ್ದಾರೆ. ತುಕಾಲಿ ಸಂತೋಷ್ (Tukali Santosh) ಅವರು ಫಿನಾಲೆಗೆ ಪ್ರವೇಶ ಪಡೆದಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಆ ಬಗ್ಗೆ ಕೊನೇ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ. ಈ ಸಂಚಿಕೆಯಲ್ಲಿ ವಿನಯ್ ಗೌಡ (Vinay Gowda) ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ತುಕಾಲಿ ಸಂತೋಷ್ ಅವರನ್ನು ಕೆಲವರು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಕೆಲವರು ಏನೇನೋ ತಂತ್ರಗಾರಿಕೆ ಮಾಡಿದರೂ ಕೂಡ ಫಿನಾಲೆಗೆ ಬರಲು ಸಾಧ್ಯವಾಗಲಿಲ್ಲ. ಅವರೆಲ್ಲರಿಗಿಂತಲೂ ಮುಂಚೆ ತುಕಾಲಿ ಸಂತೋಷ್ ಅವರು ಫಿನಾಲೆಗೆ ಎಂಟ್ರಿ ಪಡೆದಿದ್ದಾರೆ. ಆ ಬಗ್ಗೆ ಸುದೀಪ್ ಒಂದು ಪ್ರಶ್ನೆ ಕೇಳಿದ್ದಾರೆ. ‘ನೀವೆಲ್ಲ ಬಹಳ ಒದ್ದಾಡಿಕೊಂಡು, ಕಿತ್ತಾಡಿಕೊಂಡು ಇರುವಾಗ ತುಕಾಲಿ ಸಂತೋಷ್ ಅವರು ಮೆತ್ತಗೆ ಫಿನಾಲೆ ತಲುಪಿದರು. ಅವರೇ ಫಿನಾಲೆಯಲ್ಲಿ ಗೆದ್ದರೆ ವಿನಯ್ ಗೌಡ ಪ್ರತಿಕ್ರಿಯೆ ಏನಾಗಿರುತ್ತದೆ’ ಎಂದು ಸುದೀಪ್ ಕೇಳಿದ್ದಾರೆ.
ಇದನ್ನೂ ಓದಿ: ಫಿನಾಲೆ ತಲುಪಿದ ವರ್ತೂರು ಸಂತೋಷ್; ಟ್ರೋಫಿಗಾಗಿ ಸಂಗೀತಾ, ತುಕಾಲಿ ಜತೆ ಪೈಪೋಟಿ
‘ನಾನು ಏನೂ ಮಾತನಾಡದೇ, ಸೀದಾ ಹಿಮಾಲಯಕ್ಕೆ ಹೋಗಿ ದೀಕ್ಷೆ ತೆಗೆದುಕೊಳ್ಳುತ್ತೇವೆ ಸರ್’ ಎಂದು ವಿನಯ್ ಗೌಡ ಅವರು ಸುದೀಪ್ ಎದುರು ಪ್ರತಿಜ್ಞೆ ಮಾಡಿದ್ದಾರೆ. ಈ ಮಾತು ಕೇಳಿ ಸುದೀಪ್ ಅವರಿಗೆ ಅಚ್ಚರಿ ಆಗಿದೆ. ‘ಆ ಬೀನ್ ಬ್ಯಾಗ್ ಬಗ್ಗೆ ಬಹಳ ಜೋಪಾನವಾಗಿರಿ’ ಎಂದು ಸುದೀಪ್ ಹೇಳಿದ್ದಾರೆ. ಫಿನಾಲೆಯಲ್ಲಿ ಯಾರು ಗೆಲ್ಲಬಹುದು ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ‘ತಂದೆಯ ಹೆಸರು ದುರುಪಯೋಗ ಮಾಡಿಕೊಳ್ಳಬೇಡಿ’: ಬುಲೆಟ್ ಪ್ರಕಾಶ್ ಮಗ ರಕ್ಷಕ್ಗೆ ಸುದೀಪ್ ಎಚ್ಚರಿಕೆ
ಸಂಗೀತಾ ಶೃಂಗೇರಿ, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಅವರು ಫಿನಾಲೆ ತಲುಪಿದ್ದಾರೆ. ಕಾಮಿಡಿ ಮಾಡುವ ಮೂಲಕ ತುಕಾಲಿ ಸಂತೋಷ್ ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ನಗಿಸುತ್ತಾ ಬಂದಿದ್ದಾರೆ. ಅವರಿಂದಾಗಿ ಪ್ರೇಕ್ಷಕರಿಗೆ ಮನರಂಜನೆ ಸಿಕ್ಕಿದೆ. ವರ್ತೂರು ಸಂತೋಷ್ ಜೊತೆ ಅವರಿಗೆ ಹೆಚ್ಚು ಸ್ನೇಹ ಬೆಳೆದಿದೆ. ಫಿನಾಲೆಯಲ್ಲಿ ಸುದೀಪ್ ಅಕ್ಕ-ಪಕ್ಕ ನಿಲ್ಲುವವರು ತಾವಿಬ್ಬರೇ ಆಗಿರಬೇಕು ಎಂದು ತುಕಾಲಿ ಸಂತೋಷ್ ಆಸೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ