ದಿನಗೂಲಿ, ನೇಕಾರಿಕೆ ಮಾಡಿಕೊಂಡಿದ್ದ ಪ್ರೇಮ್, ನಟನಾಗಿದ್ದು ಜೀವನದ ಸಂಕಷ್ಟದ ಸಮಯದಲ್ಲಿ

|

Updated on: May 06, 2023 | 11:36 PM

Weekend With Ramesh: ಹತ್ತನೆ ತರಗತಿಗೆ ಶಿಕ್ಷಣ ಮೊಟಕುಗೊಳಿಸಿ, ಕೂಲ್​ಡ್ರಿಂಕ್ಸ್ ಕಂಪೆನಿಯಲ್ಲಿ ಕೂಲಿ ಮಾಡಿ, ಕುಲಕಸುಬು ನೇಕಾರಿಕೆ ಮಾಡಿಕೊಂಡಿದ್ದ ಪ್ರೇಮ್ ನಟನಾಗಿದ್ದ ಬಹಳ ಅನಿವಾರ್ಯದ, ಸಂಕಷ್ಟದ ಸಮಯದಲ್ಲಿ.

ದಿನಗೂಲಿ, ನೇಕಾರಿಕೆ ಮಾಡಿಕೊಂಡಿದ್ದ ಪ್ರೇಮ್, ನಟನಾಗಿದ್ದು ಜೀವನದ ಸಂಕಷ್ಟದ ಸಮಯದಲ್ಲಿ
ಲವ್ಲಿ ಸ್ಟಾರ್ ಪ್ರೇಮ್
Follow us on

ಪ್ರೇಮ್ (Prem) ಇಂದು ಲವ್ಲಿ ಸ್ಟಾರ್ (Lovely Star Prem) ಆಗಿ ಹೆಸರುವಾಸಿ. ಎಷ್ಟೋ ಜನ ಹೆಂಗೆಳೆಯರ ಹೃದಯ ಕದ್ದ ಚೋರ ಅವರು. ನೋಡಲು ಡೀಸೆಂಟ್ ಆಗಿ ಬಹು ಅಂದವಾಗಿ ಕಾಣುವ ಪ್ರೇಮ್ ನಟರಾಗಿದ್ದು ಮಾತ್ರ ತೀರ ಆಕಸ್ಮಿಕ. ಕೇವಲ ಹತ್ತನೆ ತರಗತಿ ವರೆಗೆ ಮಾತ್ರವೇ ಓದಿ, ಕೂಲ್​ಡ್ರಿಂಕ್ಸ್ ಕಂಪೆನಿಯಲ್ಲಿ ಕೂಲಿ ಮಾಡಿ, ಮನೆಯವರ ಕಷ್ಟಕ್ಕೆ ಹೆಗಲು ಕೊಡಲು ಶಿಕ್ಷಣ ನಿಲ್ಲಿಸಿ ಕುಲಕಸುಬು ನೇಕಾರಿಕೆ ಮಾಡಿಕೊಂಡಿದ್ದ ಪ್ರೇಮ್​ರನ್ನು ನಟನೆ ಅರಸಿ ಬಂದಿದ್ದು ಬಹಳ ಸಂಕಷ್ಟದ ಸಮಯದಲ್ಲಿ. ವೀಕೆಂಡ್ ವಿತ್ ರಮೇಶ್​ಗೆ (Weekend With Ramesh) ಈ ವಾರದ ಅತಿಥಿಯಾಗಿ ಬಂದಿದ್ದ ಪ್ರೇಮ್, ತಾವು ನಟನಾ ಲೋಕಕ್ಕೆ ಬಂದ ಅನಿವಾರ್ಯ ಸಂದರ್ಭವನ್ನು ಭಾವುಕವಾಗಿ ವಿವರಿಸಿದ್ದಾರೆ.

ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ನೇಕಾರಿಕೆ ಮಾಡಿಕೊಂಡು, ಫ್ಯಾಕ್ಟರಿಯಲ್ಲಿ ದಿನ-ರಾತ್ರಿಗಳನ್ನು ಕಳೆಯುತ್ತಿದ್ದ ಪ್ರೇಮ್​ ಅಚಾನಕ್ಕಾಗಿ ಪ್ರೀತಿಸಿದ ಹುಡುಗಿಯನ್ನು ಮದುವೆ ಆಗಬೇಕಾಗಿ ಬರುತ್ತದೆ. ಪ್ರೇಮ್ ಮದುವೆ ಆದಾಗ ಅವರಿಗೆ ಇರಲು ಮನೆಯೂ ಇರುವುದಿಲ್ಲ. ಆಗ ಅವರ ಅತ್ತೆಯವರೇ ಪ್ರೇಮ್​ಗೆ ತಮ್ಮ ಮನೆಯಲ್ಲಿ ಇರಲು ಅವಕಾಶ ಕೊಡುತ್ತಾರೆ. ಸರಿ ನೇಕಾರಿಕೆ ಮುಂದುವರೆಸಿಕೊಂಡಿದ್ದ ಪ್ರೇಮ್​ಗೆ ಆಘಾತ ಕೊಡುವುದು ರೇಷ್ಮೆ ಮಾರುಕಟ್ಟೆ. ಹಠಾತ್ತನೆ ರೇಷ್ಮೆಗೆ ಬೇಡಿಕೆ ಕುಸಿದು ಉದ್ದಿಮೆಯಲ್ಲಿ ಭಾರಿ ನಷ್ಟ ಶುರುವಾಗುತ್ತವೆ. ಸಾಲಗಳನ್ನು ಮಾಡಿಕೊಳ್ಳುತ್ತಾರೆ. ಬಾಡಿಗೆ ಫ್ಯಾಕ್ಟರಿಯನ್ನು ಮುಚ್ಚಬೇಕಾಗುತ್ತದೆ.

ತೀರಾ ಸಂಕಷ್ಟದಲ್ಲಿದ್ದ ಪ್ರೇಮ್​ರ ಗೆಳೆಯನಿಗೆ ಗೆಳೆಯನಾಗಿದ್ದ ಗೋವಿಂದ್ ಎಂಬುವರು ಟಿ.ಎನ್.ಸೀತಾರಾಂ ಅವರಿಗೆ ಕಾರು ಡ್ರೈವರ್ ಆಗಿ ಕೆಲಸ ಮಾಡುತ್ತಿರುತ್ತಾರೆ. ಅವರು, ‘ನೀನು ನೋಡಲು ಚೆನ್ನಾಗಿದ್ದೀಯ. ಧಾರಾವಾಹಿಯಲ್ಲಿ ಎಕ್​ಸ್ಟ್ರಾ ಆಗಿ ಕೆಲಸ ಮಾಡು ದಿನಕ್ಕೆ ಮುನ್ನೂರು ರುಪಾಯಿ ಕೊಡುತ್ತಾರೆ’ ಎನ್ನುತ್ತಾರೆ. ಅವರೇ ಪ್ರೇಮ್ ಅನ್ನು ಕರೆದುಕೊಂಡು ಹೋಗಿ ಮನ್ವಂತರ ಧಾರಾವಾಹಿ ಚಿತ್ರೀಕರಣದ ತಯಾರಿಯಲ್ಲಿದ್ದ ಟಿಎನ್ ಸೀತಾರಾಮ್​ಗೆ ಪರಿಚಯಿಸಿ, ಧಾರಾವಾಹಿಯಲ್ಲಿ ಎಕ್​ಸ್ಟ್ರಾ ಆಗಿ ಸೇರಿಸಿಕೊಳ್ಳಿ ಎಂದಿದ್ದಾರೆ. ಆದರೆ ಸೀತಾರಾಮ್ ಅವರು, ‘ನೋಡಲು ಹುಡುಗ ಚೆನ್ನಾಗಿದ್ದಾನೆ, ಸುನಿಲ್ ರಾವ್ ಗೆಳೆಯನ ಪಾತ್ರಕ್ಕೆ ಸೇರಿಸಿಕೊಳ್ಳೋಣ’ ಎಂದು ಪಾತ್ರ ನೀಡಿದ್ದಾರೆ. ಆ ಬಳಿಕ ಪ್ರೇಮ್​ರ ಡೈಲಾಗ್ ಡೆಲಿವರಿ ನೋಡಿ ಅವರ ಪಾತ್ರಕ್ಕೆ ಇನ್ನಷ್ಟು ಪ್ರಾಮುಖ್ಯತೆ ನೀಡಿದ್ದಾರೆ.

ಹೀಗಿರುವಾಗ, ಪ್ರೇಮ್​ಗೆ ಬೇರೆ ಧಾರಾವಾಹಿಗಳ ಅವಕಾಶವೂ ಬಂದವಂತೆ. ದಿನಕ್ಕೆ 1000 ನೀಡುವುದಾಗಿಯೂ ಕೆಲವರು ಹೇಳುತ್ತಾರೆ. ಧಾರಾವಾಹಿ ಯೋಚನೆಯಲ್ಲಿದ್ದ ಪ್ರೇಮ್​ ಒಮ್ಮೆ ಪೇಪರ್ ಓದುವಾಗ ಪ್ರಾಣ ಸಿನಿಮಾಕ್ಕೆ ಹೊಸ ನಟರನ್ನು ಹುಡುಕುತ್ತಿರುವ ಜಾಹೀರಾತು ಕಣ್ಣಿಗೆ ಬಿದ್ದಿದೆ. ಅದರಲ್ಲಿಯೂ ಉಪೇಂದ್ರ ಆ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿರುವುದು ಪ್ರೇಮ್ ಗಮನ ಸೆಳೆಯುತ್ತದೆ. ಕೂಡಲೇ ತಮ್ಮ ಗೆಳೆಯರನ್ನು ಸೇರಿಸಿಕೊಂಡು ಅವರ ಬಟ್ಟೆಗಳನ್ನು ಸಾಲವಾಗಿ ಪಡೆದು ಮಂಚೇನಳ್ಳಿ ಡ್ಯಾಮ್​ಗೆ ತೆರಳಿ ತಮಗೆ ತೋಚಿದಂತೆ ಫೋಟೊಶೂಟ್ ಮಾಡಿಸಿ ಅದನ್ನು ನೇರವಾಗಿ ನಿರ್ಮಾಪಕರಿಗೆ ಕೊಡಲು ಅವರ ಮನೆಗೆ ತೆರಳುತ್ತಾರೆ.

ಆದರೆ ನಿರ್ಮಾಪಕರು ಮನೆ ಬೀಗ ಹಾಕಿರುತ್ತದೆ, ಇದನ್ನು ಕಂಡು ಕಾಂಪೌಂಡ್ ಮನೆಯಲ್ಲಿ ಯಾರಾದರೂ ಇದ್ದಾರೋ ಇಲ್ಲವೋ ಎಂದು ಪರಿಶೀಲಿಸಲು ಕಿಟಕಿಯಲ್ಲಿ ಇಣುಕಿ ನೋಡುವಾಗ, ಇದನ್ನು ಕಂಡು ಎದುರು ಮನೆಯ ವ್ಯಕ್ತಿಯೊಬ್ಬರು ಪೊಲೀಸರಿಗೆ ಫೋನ್ ಮಾಡಿಬಿಟ್ಟಿದ್ದರಂತೆ. ಅಂತೆಯೇ ಪೊಲೀಸರು ಬಂದು ಪ್ರೇಮ್ ಹಾಗೂ ಅವರ ಗೆಳೆಯರನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಪ್ರೇಮ್ ಪೊಲೀಸರಿಗೆ ಹಾಗೂ ಅವರ ಬಗ್ಗೆ ದೂರು ನೀಡಿದ ಎದುರು ಮನೆಯವರಿಗೆ ತಾವು ಬಂದ ವಿಷಯ ಮನವರಿಕೆ ಮಾಡಿದ ಮೇಲೆ ಪೊಲೀಸರು ಬಿಟ್ಟರಂತೆ. ಆಗ ಪ್ರೇಮ್ ಅದೇ ಅಂಕಲ್​ಗೆ ತಮ್ಮ ಫೊಟೊ ನೀಡಿ ಅದನ್ನು ನಿರ್ಮಾಪಕರಿಗೆ ತಲುಪಿಸುವಂತೆ ಮನವಿ ಮಾಡಿದ್ದಾರೆ.

ಆ ಬಳಿಕ ಚಿತ್ರತಂಡದಿಂದ ಪ್ರೇಮ್​ಗೆ ಕರೆ ಬಂದು ಆಡಿಷನ್​ಗೆ ಕರೆದಿದ್ದಾರೆ. ಅಂತೆಯೇ ಪ್ರೇಮ್ ಹೋಗಿ ಅಟೆಂಡ್ ಮಾಡಿ, ಉದ್ದುದ್ದ ಸಂಭಾಷಣೆಗಳನ್ನು ನೀರು ಕುಡಿದಂತೆ ಹೇಳಿ ನಿರ್ದೇಶಕ ಪ್ರಕಾಶ್ ಅನ್ನು ಇಂಪ್ರೆಸ್ ಮಾಡಿದ್ದಾರೆ. ಆದರೆ ಅದೇ ಸಮಯಕ್ಕೆ ಜನಪ್ರಿಯ ನಿರ್ಮಾಪಕರೊಬ್ಬರು, ತಮ್ಮ ಮಗನನ್ನು ಹೀರೋ ಮಾಡಿದರೆ ಹಣ ಸಹಾಯ ಮಾಡುವುದಾಗಿ ನಿರ್ಮಾಪಕರಿಗೆ ಹೇಳಿದ್ದಾರೆ. ಇದರಿಂದ ಪ್ರೇಮ್​ಗೆ ನಾಯಕ ಪಾತ್ರ ಕೈತಪ್ಪುವ ಭೀತಿ ಎದುರಾಗಿತ್ತಂತೆ. ಆದರೆ ತಾವು ಮಾಡಿದರೆ ನಾಯಕನ ಪಾತ್ರವನ್ನೇ ಮಾಡುವುದು ನಾಯಕನ ಗೆಳೆಯನ ಪಾತ್ರ ಮಾಡುವುದಿಲ್ಲ ಎಂದು ನಿಶ್ಚಯಿಸಿ ತಿಳಿಸಿದರಂತೆ. ನಿರ್ಮಾಪಕರು ಹಾಗೂ ನಿರ್ದೇಶಕರು ಮಾತನಾಡಿಕೊಂಡು, ಪ್ರೇಮ್​ರ ಪ್ರತಿಭೆಯಲ್ಲಿ ನಂಬಿಕೆ ಇರಿಸಿ ಅವರನ್ನು ನಾಯಕನ್ನಾಗಿ ಮುಂದುವರೆಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ