ವೀಕೆಂಡ್ ವಿತ್ ರಮೇಶ್ (Weekend With Ramesh) ಐದನೇ ಸೀಸನ್ ಈ ವರೆಗೆ ಹಲವು ಸಾಧಕರನ್ನು ಪರಿಚಯಸಿದೆ. ಸಿನಿಮಾ ಕ್ಷೇತ್ರದ ಸಾಧಕರು ಮಾತ್ರವೇ ಅಲ್ಲದೆ ಇತರೆ ಕ್ಷೇತ್ರದ ಸಾಧಕರನ್ನು ಸಹ ಸಾಧಕರ ಕುರ್ಚಿಯ ಮೇಲೆ ಕೂರಿಸಿ ಅವರ ಜೀವನದ ಪುಟಗಳನ್ನು ತಿರುವಿ ಹಾಕಲಾಗುತ್ತಿದೆ. ಕಳೆದ ವಾರ ಡ್ಯಾನ್ಸ್ ಮಾಸ್ಟರ್ ಚಿನ್ನಿ ಪ್ರಕಾಶ್ ಹಾಗೂ ಥಟ್ ಅಂತ ಹೇಳಿ ಕಾರ್ಯಕ್ರಮದ ಖ್ಯಾತಿಯ ನಾ ಸೋಮೇಶ್ವರ್ ಅವರು ಸಾಧಕರ ಕುರ್ಚಿಯ ಮೇಲೆ ಕೂತಿದ್ದರು. ಈ ಬಾರಿ ಮತ್ತೆ ಸಿನಿಮಾ ರಂಗಕ್ಕೆ ಸಂಬಂಧಿಸಿದ ವ್ಯಕ್ತಿ ಸಾಧಕರ ಕುರ್ಚಿ ಏರಿದ್ದಾರೆ ಅವರೇ ಗೀತ ಸಾಹಿತಿ ವಿ.ನಾಗೇಂದ್ರ ಪ್ರಸಾದ್ (V Nagendra Prasad).
ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದಲೂ ಗೀತ ಸಾಹಿತಿಯಾಗಿ ಗುರುತಿಸಿಕೊಂಡಿರುವ ವಿ ನಾಗೇಂದ್ರ ಪ್ರಸಾದ್ ಅವರು ಈ ವಾರ ವೀಕೆಂಡ್ ವಿತ್ ರಮೇಶ್ ವೇದಿಕೆಗೆ ಸಾಧಕರಾಗಿ ಆಗಮಿಸಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಅವರ ಎಪಿಸೋಡ್ನ ಪ್ರೋಮೋ ಈಗಾಗಲೇ ಪ್ರಸಾರಗೊಂಡಿದ್ದು ‘ನಾನು ಯಾವ ಉದ್ಯೋಗ ಬಯಸಿದ್ದೆನೋ ಅದೇ ಉದ್ಯೋಗ ನನಗೆ ಸಿಕ್ಕಿದ್ದೆ ನನ್ನ ಗೆಲುವು’ ಎಂದಿದ್ದಾರೆ.
ವಿ.ನಾಗೇಂದ್ರ ಪ್ರಸಾದ್ ಅವರ ಎಪಿಸೋಡ್ಗೆ ಸಂಗೀತ ನಿರ್ದೇಶಕ ಹರಿಕೃಷ್ಣ ಸೇರಿದಂತೆ ಇನ್ನು ಹಲವು ಮಂದಿ ಆಗಮಿಸಿದ್ದಾರೆ. ಎಪಿಸೋಡ್ನಲ್ಲಿ ವಿ ನಾಗೇಂದ್ರ ಪ್ರಸಾದ್ ರಚಿಸಿರುವ ಹಲವು ಹಾಡುಗಳನ್ನು ಹಾಡಲಾಗಿದೆ ಮಾತ್ರವಲ್ಲ ಸಾಧಕರ ಕುರ್ಚಿ ಮೇಲೆ ಕುಳಿತು ನಾಗೇಂದ್ರ ಪ್ರಸಾದ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರದ ಕುರಿತಾಗಿ ಹಾಡೊಂದನ್ನು ಕಟ್ಟಿ ಅಲ್ಲಿಯೇ ಗಾಯಕರ ಕೈಯಲ್ಲಿ ಹಾಡಿಸಿದ್ದಾರೆ.
ಎಪಿಸೋಡ್ನ ವಿಶೇಷತೆಯೆಂದರೆ ನಾಗೇಂದ್ರ ಪ್ರಸಾದ್ ಎಪಿಸೋಡ್ನಲ್ಲಿ ಕನ್ನಡದ ಅತ್ಯುತ್ತಮ ಸಂಗೀತಗಾರ, ಗೀತ ಸಾಹಿತಿ ಹಂಸಲೇಖ ಕರೆ ಮಾಡಿದ್ದು, ”ನಾನು ಕುಳಿತುಕೊಳ್ಳಬೇಕಾದ ಸ್ಥಾನದಲ್ಲಿ ನಾಗೇಂದ್ರ ಪ್ರಸಾದ್ ಕುಳಿತುಕೊಳ್ಳಬೇಕು ಎಂಬುದೇ ನನ್ನ ಹಾರೈಕೆ” ಎಂದಿದ್ದಾರೆ. ಗುರುಗಳ ಈ ಮಾತು ನಾಗೇಂದ್ರ ಪ್ರಸಾದ್ ಅವರನ್ನು ಭಾವುಕಗೊಳಿಸಿದೆ. ಅಂದಹಾಗೆ, ವೀಕೆಂಡ್ ವಿತ್ ರಮೇಶ್ ಪ್ರಾರಂಭವಾದಾಗಿನಿಂದಲೂ ಹಂಸಲೇಖ ಅವರನ್ನು ಕರೆಸುವಂತೆ ವೀಕ್ಷಿಕರು ಒತ್ತಾಯಿಸುತ್ತಲೇ ಇದ್ದಾರೆ ಆದರೆ ಈ ವರೆಗೆ ಹಂಸಲೇಖ ವೀಕೆಂಡ್ ವಿತ್ ರಮೇಶ್ಗೆ ಬಂದಿಲ್ಲ.
ಇದನ್ನೂ ಓದಿ:ಬರಿಗೈಯಲ್ಲಿ ಹೋಗಿ ಮದುವೆ ಆಗಿದ್ದ ಸೋಮೇಶ್ವರ; ‘ವೀಕೆಂಡ್ ವಿತ್ ರಮೇಶ್’ ವೇದಿಕೆಯಲ್ಲಿ ಹೊರಬಿತ್ತು ಲವ್ಸ್ಟೋರಿ
ಮಂಡ್ಯ ಜಿಲ್ಲೆಯವರಾದ ನಾಗೇಂದ್ರ ಪ್ರಸಾದ್ ಚಿತ್ರರಂಗಕ್ಕೆ ಬಂದು ಎರಡು ದಶಕಗಳಾಗಿವೆ. 2000 ರಲ್ಲಿ ಮೊದಲ ಬಾರಿಗೆ ಸಿನಿಮಾ ಒಂದಕ್ಕೆ ಗೀತ ರಚನೆ ಮಾಡಿದ್ದರು. ಆ ನಂತರ ಸಾಲು-ಸಾಲಾಗಿ ಕನ್ನಡದ ಅನೇಕ ಹಿಟ್-ಸೂಪರ್ ಸಿನಿಮಾಗಳಿಗೆ ಸೂಪರ್-ಡೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಭಾವುಕ, ಯುಗಳ ಗೀತೆ, ಮಾಸ್ ಹಾಡುಗಳು, ಹೀರೋಗಳಿಗೆ ಇಂಟ್ರೊಡಕ್ಷನ್ ಹಾಡುಗಳು, ಕನ್ನಡದ ಕುರಿತಾದ ಹಾಡುಗಳು ಯಾವುದೇ ಒಂದು ಬಗೆಯ ಹಾಡುಗಳಿಗೆ ಅಂಟಿಕೊಳ್ಳದೆ ಎಲ್ಲ ರೀತಿಯ ಹಾಡುಗಳನ್ನು ಬರೆದ ಖ್ಯಾತಿ ನಾಗೇಂದ್ರ ಪ್ರಸಾದ್ ಅವರದ್ದು.
ಗೀತ ಸಾಹಿತ್ಯ ಮಾತ್ರವೇ ಅಲ್ಲದೆ ಸಂಗೀತ ನಿರ್ದೇಶನ, ಸಂಭಾಷಣೆ ಸೇರಿದಂತೆ ಸಿನಿಮಾದ ಇನ್ನೂ ಕೆಲವು ವಿಭಾಗಗಳಲ್ಲಿ ನಾಗೇಂದ್ರ ಪ್ರಸಾದ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ವಾರ ನಾಗೇಂದ್ರ ಪ್ರಸಾದ್ರ ಜೀವನದ ಹಲವು ಪುಟುಗಳು ವೀಕೆಂಡ್ ವಿತ್ ರಮೇಶ್ನಲ್ಲಿ ತೆರೆದುಕೊಳ್ಳಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:52 pm, Tue, 16 May 23