ಊಟಕ್ಕೆ ಬಂದವರನ್ನು ಜೈಲಿಗೆ ಕಳಿಸುವ ಟಾಲಿವುಡ್ ನಟ ಧರ್ಮ ಮಹೇಶ್: ಏನಿದು ಕಥೆ?

ತೆಲುಗಿನ ನಟ ಧರ್ಮ ಮಹೇಶ್ ಅವರು ಬೆಂಗಳೂರಿನ ಜನರಿಗೆ ಜೈಲೂಟ ತಿನಿಸುತ್ತಿದ್ದಾರೆ. ಇಷ್ಟು ದಿನ ಗುಂಟೂರು, ಹೈದರಾಬಾದ್​​ನಲ್ಲಿ ಈ ಕೆಲಸ ಮಾಡುತ್ತಿದ್ದ ಅವರೀಗ ಬೆಂಗಳೂರಿಗೆ ಕಾಲಿಟ್ಟಿದ್ದಾರೆ. ಹಾಗಾದರೆ ಏನಿದು ಜೈಲೂಟ? ಅದಕ್ಕೂ ಧರ್ಮ ಮಹೇಶ್ ಅವರಿಗೆ ಏನು ಸಂಬಂಧ? ಇಲ್ಲಿದೆ ವಿವರ..

ಊಟಕ್ಕೆ ಬಂದವರನ್ನು ಜೈಲಿಗೆ ಕಳಿಸುವ ಟಾಲಿವುಡ್ ನಟ ಧರ್ಮ ಮಹೇಶ್: ಏನಿದು ಕಥೆ?
Jismat Jail Mandi Launch

Updated on: Feb 12, 2026 | 8:23 PM

ತೆಲುಗು ಚಿತ್ರರಂಗದ ನಟ ಧರ್ಮ ಮಹೇಶ್ (Dharma Mahesh) ಅವರು ‘ಸಿಂಧೂರಂ’, ‘ಡ್ರಿಂಕರ್ ಸಾಯಿ’ ಮುಂತಾದ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಸಿನಿಮಾದ ಜೊತೆಗೆ ಉದ್ಯಮದಲ್ಲೂ ಅವರು ಆಸಕ್ತಿ ಹೊಂದಿದ್ದಾರೆ. ‘ಜಿಸ್ಮತ್’ ಹೆಸರಿನ ರೆಸ್ಟೋರೆಂಟ್ (Restaurant) ನಡೆಸುವ ಅವರು ಹೊಸ ರೀತಿಯ ಪ್ರಯೋಗದ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಬೆಂಗಳೂರಿನಲ್ಲಿ ಕೂಡ ಧರ್ಮ ಮಹೇಶ್ ಒಡೆತನದ ‘ಜಿಸ್ಮತ್ ಜೈಲ್ ಮಂಡಿ’ (Jismat Jail Mandi) ರೆಸ್ಟೋರೆಂಟ್ ಇದೆ. ಇಲ್ಲಿಗೆ ಬಂದವರು ಜೈಲಿಗೆ ಹೋಗುವುದು ಗ್ಯಾರಂಟಿ!

ಅಸಲಿ ವಿಷಯ ಏನೆಂದರೆ, ಧರ್ಮ ಮಹೇಶ್ ಅವರು ನಡೆಸುತ್ತಿರುವ ಈ ರೆಸ್ಟೋರೆಂಟ್ ಥೀಮ್ ಈ ರೀತಿ ಆಗಿದೆ. ಸಂಪೂರ್ಣ ಜೈಲಿನ ರೀತಿಯಲ್ಲಿ ಈ ರೆಸ್ಟೋರೆಂಟ್ ವಿನ್ಯಾಸಗೊಂಡಿದೆ. ಇಲ್ಲಿಗೆ ಊಟಕ್ಕೆ ಬಂದವರನ್ನು ಜೈಲಿನ ಸೆಲ್​​ನಲ್ಲಿ ಕೂರಿಸಿ ಬಗೆಬಗೆಯ ನಾನ್-ವೆಜ್ ಊಟ ಬಡಿಸಲಾಗುತ್ತದೆ. ರೆಸ್ಟೋರೆಂಟ್ ಸಿಬ್ಬಂದಿ ಕೂಡ ಕೈದಿಗಳ ರೀತಿಯಲ್ಲಿ ಡ್ರೆಸ್ ಮಾಡಿಕೊಂಡಿರುತ್ತಾರೆ!

ಇಂಥ ವಿಭಿನ್ನ ಥೀಮ್ ಪರಿಚಯಿಸಿದ ಕಾರಣಕ್ಕೆ ನಟ ಧರ್ಮ ಮಹೇಶ್ ಅವರ ‘ಜಿಸ್ಮತ್ ಜೈಲ್ ಮಂಡಿ’ ಬೆಂಗಳೂರಿಗರ ಗಮನ ಸೆಳೆಯುತ್ತಿದೆ. ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ‘ಜಿಸ್ಮತ್ ಜೈಲ್ ಮಂಡಿ’ ಹೊಸ ಖಾತೆ ಇತ್ತೀಚೆಗೆ ಆರಂಭ ಆಯಿತು. ಈ ಸಂಭ್ರಮದಲ್ಲಿ ಧರ್ಮ ಮಹೇಶ್ ಭಾಗಿ ಆಗಿದ್ದರು.

ಈ ಮೊದಲು ಗುಂಟೂರು ಮತ್ತು ಹೈದರಾಬಾದ್​​ನಲ್ಲಿ ಮಾತ್ರ ‘ಜಿಸ್ಮತ್ ಜೈಲ್ ಮಂಡಿ’ ಇತ್ತು. ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮಾತ್ರವಲ್ಲದೇ ಬೇರೆ ರಾಜ್ಯಗಳ ಜನರಿಗೆ ಜೈಲೂಟದ ರುಚಿ ತೋರಿಸುವ ಸಲುವಾಗಿ ಧರ್ಮ ಮಹೇಶ್ ಅವರು ಬೇರೆ ಬೇರೆ ನಗರಗಳಲ್ಲಿ ಖಾತೆ ಆರಂಭಿಸುತ್ತಿದ್ದಾರೆ. ಅದರ ಮೊದಲ ಹೆಜ್ಜೆ ಎಂಬಂತೆ ಬೆಂಗಳೂರಿನಲ್ಲಿ ಶುರು ಮಾಡಿದ್ದಾರೆ.

ಇದನ್ನೂ ಓದಿ: ಈ ರೆಸ್ಟೋರೆಂಟ್​​ಗೆ ಹೋದರೆ ನಿಮ್ಮ ಮೊಬೈಲ್ ಬುಟ್ಟಿಗೆ ಹಾಕಬೇಕು!

ಧರ್ಮ ಮಹೇಶ್ ಅವರಿಗೆ ಬೆಂಗಳೂರಿನ ಬಗ್ಗೆ ವಿಶೇಷ ಪ್ರೀತಿ ಇದೆ. ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ನನ್ನ ಹೃದಯದಲ್ಲಿ ಈ ಊರಿಗೆ ವಿಶೇಷ ಸ್ಥಾನ ಇದೆ. 8ನೇ ತರಗತಿಯಲ್ಲಿ ಓದುತ್ತಿದ್ದಾಗ ನಾನು ನೋಡಿದ ಮೊದಲ ಮೆಟ್ರೋಪಾಲಿಟನ್ ಸಿಟಿ ಎಂದರೆ ಅದು ಬೆಂಗಳೂರು. ಆ ನೆನಪು ನನ್ನ ಮನಸ್ಸಿನಲ್ಲಿ ಹಸಿರಾಗಿದೆ’ ಎಂದು ಧರ್ಮ ಮಹೇಶ್ ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us