ತೆಲುಗು ಚಿತ್ರರಂಗದಲ್ಲಿ (Tollywood) ಮಾತ್ರವೇ ಅಲ್ಲದೆ ರಾಜಕೀಯ ರಂಗದಲ್ಲಿ (Politics), ಸಾಮಾಜಿಕ ರಂಗದಲ್ಲಿ ತಮ್ಮ ಕ್ರಾಂತಿ ಗೀತೆಗಳ ಚಾಟಿ ಬೀಸುತ್ತಿದ್ದ ಕ್ರಾಂತಿಕಾರಿ ಕವಿ, ಗಾಯಕ ಗದ್ದರ್ (Gaddar) ಇಂದು (ಆಗಸ್ಟ್ 06) ನಿಧನರಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದಲೂ ಹೃದಯ ಸಮಸ್ಯೆಗೆ ಗದ್ದರ್ ಗುರಿಯಾಗಿದ್ದರು, ಜುಲೈ 20 ರಂದು ಅನಾರೋಗ್ಯದಿಂದ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಗದ್ದರ್ಗೆ ಆಪರೇಷನ್ ಆಗಿತ್ತು. ಆ ನಂತರ ಗದ್ದರ್ ಚೇತರಿಸಿಕೊಳ್ಳಲಿಲ್ಲ. ಅಂತಿಮವಾಗಿ ಇಂದು ಕೊನೆ ಉಸಿರೆಳೆದಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.
ಬಡವರ, ದಲಿತರ, ಥುಳಿತಕ್ಕೆ ಒಳಗಾದವರ ಪರವಾಗಿ ಹಾಡುಗಳನ್ನು ಕಟ್ಟಿ, ಸರ್ಕಾರಗಳನ್ನು, ಥುಳಿಯುವವರನ್ನು ಕಠಿಣವಾಗಿ ಪದಗಳ ಮೂಲಕ ತಿವಿಯುತ್ತಿದ್ದ, ಸದಾ ಪ್ರತಿಪಕ್ಷವೇ ಆಗಿದ್ದ ಗದ್ದರ್ ಅವರನ್ನು ‘ಪ್ರಜಾ ಯುದ್ಧ ನೌಕೆ’ ಎಂದು ತೆಲುಗು ಮಾಧ್ಯಮಗಳು ಎಂದೇ ಕರೆಯುತ್ತಿದ್ದವು. ಸಾಮಾಜಿಕ ಹೋರಾಟಗಳಲ್ಲಿ ಬಹಳ ಸಕ್ರಿಯರಾಗಿದ್ದ ಗದ್ದರ್ ಹಲವು ಹೋರಾಟಗಳಿಗೆ ಶಕ್ತಿ ತುಂಬುವ ಕಾರ್ಯ ಮಾಡಿದ್ದರು, ತೆಲುಗು ರಾಜ್ಯಗಳು ಮಾತ್ರವೇ ಅಲ್ಲದೆ ದೇಶದ ವಿವಿಧ ರಾಜ್ಯಗಳಿಗೆ ತೆರಳಿ ಹಾಡು ಹಾಡಿ, ನಾಟಕಗಳನ್ನು ಮಾಡಿ ಗಮನ ಸೆಳೆದಿದ್ದರು.
ಅವಿಭಜಿತ ಆಂಧ್ರ ಪ್ರದೇಶದ ಮೆದರ್ ಜಿಲ್ಲೆ, ತೂಪರಾನ ಗ್ರಾಮದಲ್ಲಿ 1949 ರಲ್ಲಿ ದಲಿತ ಕುಟುಂಬದಲ್ಲಿ ಜನಿಸಿದ ಗದ್ದರ್ ಅವರ ಮೂಲ ಹೆಸರು ಗುಮ್ಮಡಿ ವಿಠಲ್ ರಾವ್. ಬಡತನದ ಬಾಲ್ಯ ಕಳೆದ ಗದ್ದರ್ ನಿಜಾಮಾಬಾದ್ನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮುಗಿಸಿ ಬ್ಯಾಂಕ್ ಒಂದರ ಉದ್ಯೋಗಿಯಾಗಿ ನೇಮಕಾತಿ ಪಡೆದರು. ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡೆ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದ ಗದ್ದರ್, ತೆಲುಗಿನ ಕೆಲವು ಕ್ರಾಂತಿಕಾರಿ ಸಿನಿಮಾಗಳಲ್ಲಿ ನಟಿಸಿದರು, ಹಾಡು ಸಹ ಹಾಡಿದರು. ಬ್ಯಾಂಕ್ ಉದ್ಯೋಗಕ್ಕೆ ರಾಜೀನಾಮೆ ನೀಡಿ ತಮ್ಮನ್ನು ತಾವು ಸಂಪೂರ್ಣವಾಗಿ ಸಾಮಾಜಿಕ ಹೋರಾಟಗಳಿಗೆ ಅರ್ಪಿಸಿಕೊಂಡಿದ್ದರು.
ನಟ ಮೆಗಾಸ್ಟಾರ್ ಚಿರಂಜೀವಿ ಸಹ ಗದ್ದರ್ ಕುರಿತಾಗಿ ಟ್ವೀಟ್ ಮಾಡಿದ್ದು, ”ಧ್ವನಿ ಇಲ್ಲದವರ ಪರ ದನಿಯಾಗಿದ್ದ ಪ್ರಜಾಗಾಯಕ. ಪ್ರಜಾ ಯುದ್ಧಮನೌಕೆ ಗದ್ದರಣ್ಣನಿಗೆ ಲಾಲ್ ಸಲಾಂ. ಸರಳವಾಗಿ ಬದುಕುತ್ತಲೇ ತಮ್ಮ ಪ್ರಭಾವಶಾಲಿ ಮಾತು ಹಾಗೂ ಹಾಡುಗಳನ್ನು ಬಳಸಿ ದಶಕಗಳಿಂದಲೂ ಪ್ರಜೆಗಳಲ್ಲಿ ಸ್ಪೂರ್ತಿ ತುಂಬುವ ಕಾರ್ಯವನ್ನು ಗದ್ದರ್ ಮಾಡಿದ್ದಾರೆ. ಇಂಥಹಾ ಗದ್ದರ್ ಇನ್ನಿಲ್ಲ ಎಂಬುದು ನನಗೆ ತೀವ್ರ ವಿಷಾದ ತಂದಿದೆ. ಗದ್ದರ್ ಕೊರತೆ ಪ್ರಜಾ ಸಾಹಿತ್ಯದಲ್ಲಿ ಇನ್ನು ಮುಂದೆ ಸದಾ ಕಾಣಲಿದೆ. ಆದರೆ ಅವರ ಹಾಡುಗಳಲ್ಲಿ, ಹೋರಾಟಗಳಲ್ಲಿ ಅವರ ಧ್ವನಿಯೇ ಇನ್ನು ಮುಂದೆ ಕೇಳುತ್ತದೆ. ಅವರ ಕುಟುಂಬ ಸದಸ್ಯರಿಗೆ, ಅವರ ಲಕ್ಷಾಂತರ ಅಭಿಮಾನಿಗಳಿಗೆ ನನ್ನ ಸಂತಾಪಗಳು” ಎಂದಿದ್ದಾರೆ.
ಗದ್ದರ್ ನಿಧನದ ಬಗ್ಗೆ ಎರಡು ತೆಲುಗು ರಾಜ್ಯಗಳ ಗಣ್ಯರು ಶೋಕವನ್ನು ವ್ಯಕ್ತಪಡಿಸಿದ್ದಾರೆ. ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸಂತಾಪ ವ್ಯಕ್ತಪಡಿಸಿ ಮಾಡಿರುವ ಟ್ವೀಟ್ನಲ್ಲಿ ಗದ್ದಲ ವರನ್ನು ‘ಜನಗಾಯಕ’ ಎಂದು ‘ಜನ ಯುದ್ಧನೌಕೆ’ ಎಂದೂ ಬಣ್ಣಿಸಿದ್ದಾರೆ. ಇನ್ನೂ ಹಲವು ಮಂದಿ ಗಣ್ಯರು ಗದ್ದರ್ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:39 pm, Sun, 6 August 23