
ಖ್ಯಾತ ನಟ ದಳಪತಿ ವಿಜಯ್ (Thalapathy Vijay) ಅವರ ಹೊಸ ಸಿನಿಮಾ ಬಗ್ಗೆ ಬ್ಯಾಕ್ ಟು ಬ್ಯಾಕ್ ಅಪ್ಡೇಟ್ ಸಿಗುತ್ತಿದೆ. ಇದು ವಿಜಯ್ ನಟನೆಯ 67ನೇ ಸಿನಿಮಾ. ಹಾಗಾಗಿ ಇಷ್ಟು ದಿನ ತಾತ್ಕಾಲಿಕವಾಗಿ ‘ದಳಪತಿ 67’ ಎಂದು ಕರೆಯಲಾಗುತ್ತಿತ್ತು. ಈಗ ಈ ಚಿತ್ರಕ್ಕೆ ಅಧಿಕೃತವಾಗಿ ಶೀರ್ಷಿಕೆ ಅನಾವರಣ ಮಾಡಲಾಗಿದೆ. ಅದಕ್ಕಾಗಿ ಹೊಸ ಟೀಸರ್ ಹಂಚಿಕೊಳ್ಳಲಾಗಿದ್ದು, ಆ ಮೂಲಕ ಟೈಟಲ್ ಏನೆಂಬುದು ಬಹಿರಂಗ ಆಗಿದೆ. ಈ ಸಿನಿಮಾಗೆ ‘ಲಿಯೋ’ (Leo Movie) ಎಂದು ಹೆಸರು ಇಡಲಾಗಿದೆ. ಸದ್ಯ ಬಿಡುಗಡೆ ಆಗಿರುವ ಟೀಸರ್ ಸಖತ್ ವೈರಲ್ ಆಗುತ್ತಿದೆ. ಈ ಸಿನಿಮಾಗೆ ಲೋಕೇಶ್ ಕನಗರಾಜ್ (Lokesh Kanagaraj) ನಿರ್ದೇಶನ ಮಾಡುತ್ತಿದ್ದಾರೆ. ‘ವಿಕ್ರಮ್’ ಸಿನಿಮಾದ ಭಾರಿ ಗೆಲುವಿನ ಬಳಿಕ ಅವರು ಈ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.
‘ಲಿಯೋ’ ಸಿನಿಮಾದ ಟೀಸರ್ ನೋಡಿದ ಎಲ್ಲರಿಗೂ ‘ವಿಕ್ರಮ್’ ಚಿತ್ರದ ಫೀಲ್ ಸಿಗುತ್ತಿದೆ. ದಳಪತಿ ವಿಜಯ್ ಅವರು ಒಂಟಿ ಮನೆಯಲ್ಲಿ ಚಾಕೊಲೇಟ್ ಮತ್ತು ಖಡ್ಗ ತಯಾರಿಸುತ್ತಿರುವ ದೃಶ್ಯ ಈ ಟೀಸರ್ನಲ್ಲಿ ಹೈಲೈಟ್ ಆಗಿದೆ. ‘ಲಿಯೋ’ ಶೀರ್ಷಿಕೆಗೆ ‘ಬ್ಲಡಿ ಸ್ವೀಟ್’ ಎಂಬ ಟ್ಯಾಗ್ ಲೈನ್ ಇದೆ. ಈ ಎಲ್ಲ ಕಾರಣಗಳಿಂದಾಗಿ ನಿರೀಕ್ಷೆ ಹೆಚ್ಚಾಗಿದೆ. ಇದು ಭರ್ಜರಿ ಸಾಹಸಪ್ರಧಾನ ಸಿನಿಮಾ ಎಂಬುದಕ್ಕೆ ಈ ಟೀಸರ್ ಸಾಕ್ಷಿ ನೀಡುತ್ತಿದೆ.
ಇದನ್ನೂ ಓದಿ: ಯುವ ನಟಿಯ ಜತೆ ದಳಪತಿ ವಿಜಯ್ ಡೇಟಿಂಗ್? ವಿಚ್ಛೇದನ ಸುದ್ದಿ ಹುಟ್ಟಲು ಇದುವೇ ಕಾರಣ
‘ಲಿಯೋ’ ಸಿನಿಮಾದಲ್ಲಿ ವಿಜಯ್ಗೆ ಜೋಡಿಯಾಗಿ ತ್ರಿಷಾ ಕೃಷ್ಣನ್ ನಟಿಸಲಿದ್ದಾರೆ. ಫೆಬ್ರವರಿ 1ರಂದು ಈ ಸಿನಿಮಾಗೆ ಮುಹೂರ್ತ ನೆರವೇರಿತು. ಈ ವೇಳೆ ಚಿತ್ರತಂಡದ ಹಲವರು ಭಾಗಿ ಆಗಿದ್ದರು. ಈ ಸಿನಿಮಾದಲ್ಲಿ ವಿಜಯ್ ಮತ್ತು ತ್ರಿಷಾ ಜೊತೆ ಸಂಜಯ್ ದತ್, ಗೌತಮ್ ವಾಸುದೇವ ಮೆನನ್, ಮಿಸ್ಕಿನ್, ಮನ್ಸೂರ್ ಅಲಿ ಖಾನ್, ಪ್ರಿಯಾ ಆನಂದ್ ಮುಂತಾದವರು ನಟಿಸಲಿದ್ದಾರೆ. ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿಯಲ್ಲಿ ‘ಲಿಯೋ’ ಸಿನಿಮಾ ಮೂಡಿಬರಲಿದೆ.
ಲೋಕೇಶ್ ಕನಗರಾಜ್ ಅವರು ದಳಪತಿ ವಿಜಯ್ ಜೊತೆ ಈ ಹಿಂದೆ ‘ಮಾಸ್ಟರ್’ ಸಿನಿಮಾ ಮಾಡಿದ್ದರು. ಅಲ್ಲದೇ ಅವರು ನಿರ್ದೇಶನ ಮಾಡಿದ್ದ ‘ಕೈದಿ’ ಹಾಗೂ ‘ವಿಕ್ರಮ್’ ಸಿನಿಮಾಗಳ ಕಥೆಗೆ ಲಿಂಕ್ ನೀಡಲಾಗಿತ್ತು. ಈಗ ಆ ಚಿತ್ರಗಳ ಜೊತೆಗೆ ‘ಲಿಯೋ’ ಕಥೆ ಕೂಡ ಕನೆಕ್ಟ್ ಆಗಲಿದೆ ಎಂದು ಪ್ರೇಕ್ಷಕರು ಊಹಿಸುತ್ತಿದ್ದಾರೆ. ಆ ಬಗ್ಗೆ ಚಿತ್ರತಂಡದವರು ಇನ್ನಷ್ಟೇ ಬಾಯಿ ಬಿಡಬೇಕಿದೆ.
‘ಸೆವೆನ್ ಗ್ರೀನ್ ಸ್ಟುಡಿಯೋ’ ಮೂಲಕ ‘ಲಿಯೋ’ ಸಿನಿಮಾ ನಿರ್ಮಾಣ ಆಗುತ್ತಿದೆ. ಈಗಾಗಲೇ ಚಿತ್ರಕ್ಕೆ ಶೂಟಿಂಗ್ ಮಾಡಲಾಗುತ್ತಿದೆ. ಚಿತ್ರೀಕರಣದ ಹಂತದಲ್ಲೇ ಒಟಿಟಿ ಮತ್ತು ಕಿರುತೆರೆ ಪ್ರಸಾರ ಹಕ್ಕುಗಳ ಬಿಸ್ನೆಸ್ ನಡೆಸಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.