ತಮಿಳು ಚಿತ್ರರಂಗದ (Kollywood) ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ರಾಜಕೀಯ ಪ್ರವೇಶಿಸುತ್ತಾರೆ ಎಂಬ ಸುದ್ದಿ ಈಗಾಗಲೇ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ವಿಜಯ್ಗೆ ಅತಿ ದೊಡ್ಡ ಅಭಿಮಾನಿ ಬಳಗ ತಮಿಳುನಾಡಿನಲ್ಲಿದೆ. ಒಂದೊಮ್ಮೆ ಅವರು ರಾಜಕೀಯ ಪ್ರವೇಶಿಸಿದರೆ ತಮಿಳುನಾಡಿನ ಪ್ರಸ್ತುತ ಪಕ್ಷ ರಾಜಕೀಯದ ಚಿತ್ರಣ ಬದಲಾಗಲಿದೆ. ವಿಜಯ್ ಸಹ ಪೂರ್ವತಯಾರಿಯೊಟ್ಟಿಗೆ ರಾಜಕೀಯಕ್ಕೆ ಪ್ರವೇಶಿಸಲು ಸಿದ್ಧರಾಗಿದ್ದು ಕೆಲವೇ ದಿನಗಳಲ್ಲಿ ಘೋಷಣೆ ಹೊರಬೀಳಲಿದೆ.
ರಾಜಕೀಯ ಪ್ರವೇಶದ ಕುರಿತಾಗಿ ವಿಜಯ್, ತಮ್ಮ ಅಭಿಮಾನಿ ಸಂಘಟನೆ ವಿಜಯ್ ಮಕ್ಕಳ್ ಇಯಕ್ಕಂನ ಸದಸ್ಯರೊಟ್ಟಿಗೆ ಜುಲೈ 11 ರಂದು ಸಭೆ ನಡೆಸಿದ್ದು ಹಲವು ವಿಷಯಗಳ ಚರ್ಚೆ ಮಾಡಿದ್ದಾರೆ. ವಿಜಯ್ ಮಕ್ಕಳ್ ಇಯಕ್ಕಂನ ಸದಸ್ಯರಿಗೆ ರಾಜಕೀಯ ಪ್ರವೇಶದ ಬಗ್ಗೆ ಖಾತ್ರಿ ನೀಡಿದ್ದು, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಅವರು ಮಾಡಬೇಕಾದ ಕಾರ್ಯಗಳ ಬಗ್ಗೆ ಕಾರ್ಯಸೂಚಿಯನ್ನು ನೀಡಿದ್ದಾರೆ ಎನ್ನಲಾಗಿದೆ.
ರಾಜಕೀಯ ಪ್ರವೇಶ ಘೋಷಿಸಿದ ಕೂಡಲೇ ರಾಜ್ಯದಾದ್ಯಂತ ಪಾದಯಾತ್ರೆ ಮೂಲಕ ಪ್ರವಾಸ ಮಾಡಲಿದ್ದಾರೆ ಎನ್ನಲಾಗುತ್ತಿದೆ. ತಮಿಳುನಾಡಿನ ಪ್ರತಿ ಜಿಲ್ಲೆಗೂ ಪಾದಯಾತ್ರೆ ಮೂಲಕ ಭೇಟಿ ನೀಡಲು ವಿಜಯ್ ನಿಶ್ಚಯ ಮಾಡಿದ್ದು, ರಾಜಕೀಯ ಪ್ರವೇಶ ಘೋಷಿಸಿದ ನಂತರ ವಿಜಯ್ ಪಾದಯಾತ್ರೆ ಪ್ರಾರಂಭವಾಗಲಿದೆ. ವಿಜಯ್ಗೆ ತಮ್ಮ ಅಭಿಮಾನಿಗಳ ಬಲದ ಜೊತೆಗೆ ರಜನೀಕಾಂತ್ ಹಾಗೂ ಅಜಿತ್ ಕುಮಾರ್ ಅವರ ಬೆಂಬಲವೂ ದೊರೆತಿದ್ದು ಆ ನಟರ ಅಭಿಮಾನಿಗಳು ಸಹ ವಿಜಯ್ಗೆ ಬೆಂಬಲಿಸುವ ದೊಡ್ಡ ಸಾಧ್ಯತೆ ಇದೆ.
ಇದನ್ನೂ ಓದಿ:ರಾಜಕೀಯ ಪ್ರವೇಶದ ಬಗ್ಗೆ ಅಭಿಮಾನಿಗಳೊಟ್ಟಿಗೆ ಚರ್ಚೆ: ಭರ್ಜರಿ ಎಂಟ್ರಿ ಕೊಡಲಿರುವ ವಿಜಯ್
ವಿಜಯ್ ರಾಜಕೀಯ ಪ್ರವೇಶಕ್ಕೆ ಕಾರಣ ಏನೆಂಬ ಬಗ್ಗೆ ಕೆಲವು ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಜಯ್ರ ವಿರುದ್ಧ ಬಿಜೆಪಿ ಮಾಡಿದ್ದ ವೈಯಕ್ತಿಕ ಟೀಕೆ, ಐಟಿ ರೇಡ್ಗಳಿಂದಲೇ ವಿಜಯ್ಗೆ ರಾಜಕೀಯ ಪ್ರವೇಶಿಸಬೇಕೆಂಬ ಕಿಚ್ಚು ಹತ್ತಿತು ಎಂದೂ ಸಹ ಹೇಳಲಾಗುತ್ತಿದೆ. ಆದರೆ ಇದಕ್ಕೆಲ್ಲ ವಿಜಯ್ ಅವರೇ ಉತ್ತರ ನೀಡಬೇಕಾಗಿದೆ.
ಇನ್ನೊಂದೆಡೆ ವಿಜಯ್ರ ರಾಜಕೀಯ ಪ್ರವೇಶದ ಬಗ್ಗೆ ಈಗಾಗಲೇ ಕೆಲವರು ನಕಾರಾತ್ಮಕವಾಗಿಯೂ ಮಾತನಾಡುತ್ತಿದ್ದಾರೆ. ನಿರ್ಮಾಪಕ ಕೆ ರಾಜಾ ಇತ್ತೀಚೆಗೆ ಮಾತನಾಡಿ, ತಮ್ಮ ಸಿನಿಮಾದ ಟಿಕೆಟ್ ಬೆಲೆಯನ್ನೇ ಇಳಿಸಲು ಆಗದ ವಿಜಯ್, ರಾಜಕೀಯಕ್ಕೆ ಬಂದು ಜನರಿಗೆ ಏನು ತಾನೆ ಸಹಾಯ ಮಾಡಿಯಾರು ಎಂದಿದ್ದರು.
ತಮಿಳುನಾಡು ರಾಜಕೀಯದಲ್ಲಿ ಸಿನಿಮಾ ರಂಗಕ್ಕೆ ಸೇರಿದವರು ದೊಡ್ಡ ದೊಡ್ಡ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಸಿನಿಮಾ ರಂಗದಿಂದ ರಾಜಕೀಯ ಪ್ರವೇಶಿಸಿದ ಎಂಜಿಆರ್, ಕರುಣಾನಿಧಿ, ಜಯಲಲಿತಾ ಅವರುಗಳು ಸಿಎಂ ಆಗಿ ಸೇವೆ ಸಲ್ಲಿಸಿದವರೇ. ಈಗಲೂ ಹಲವು ತಮಿಳು ಚಿತ್ರನಟರು ಸಕ್ರಿಯ ರಾಜಕೀಯದಲ್ಲಿದ್ದಾರೆ. ಕಮಲ್ ಹಾಸನ್ ಸಹ ಮಕ್ಕಳ್ ನಿಧಿ ಮಯಂ ಹೆಸರಿನ ಪಕ್ಷ ಸ್ಥಾಪಿಸಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ರಜನೀಕಾಂತ್ ಸಹ ಪಕ್ಷ ಸ್ಥಾಪನೆಗೆ ಯತ್ನಿಸಿ ಆರೋಗ್ಯ ಕಾರಣ ನೀಡಿ ಹಿಂದೆ ಸರಿದಿದ್ದರು. ಈಗ ಅವರೇ ವಿಜಯ್ಗೆ ಬೆಂಬಲ ನೀಡಿದ್ದಾರೆ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ