ಒಂದು ಕೋಟಿ ರೂಪಾಯಿ ದಾನ ನೀಡಿದ ವಿಜಯ್: ಯಾರಿಗೆ? ಏಕೆ?
Thalapathy Vijay: ನಟ ದಳಪತಿ ವಿಜಯ್ ಇತ್ತೀಚೆಗಷ್ಟೆ ರಾಜಕೀಯ ಪ್ರವೇಶ ಮಾಡಿದ್ದಾರೆ. ಇದರ ಬೆನ್ನಲ್ಲೆ ಸಂಘವೊಂದಕ್ಕೆ ಒಂದು ಕೋಟಿ ರೂಪಾಯಿ ಹಣ ದಾನ ಮಾಡಿದ್ದಾರೆ.
ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ರಾಜಕೀಯಕ್ಕೆ ಎಂಟ್ರಿ ನೀಡಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ವಿಜಯ್ ಕಣಕ್ಕೆ ಇಳಿಸಲಿದ್ದಾರೆ. ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ವಿಜಯ್ ರಾಜಕೀಯ ಪ್ರವೇಶ ಮಾಡಿರುವುದು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಎಬ್ಬಿಸಿದೆ. ರಾಜಕೀಯ ಲೆಕ್ಕಾಚಾರಗಳನ್ನು ಹೊಸದಾಗಿ ಬರೆಯುವಂತೆ ಮಾಡಿದೆ. ರಾಜಕೀಯ ಪ್ರವೇಶ ಮಾಡಿರುವ ವಿಜಯ್, ಚಿತ್ರರಂಗದಿಂದ ಸಂಬಂಧ ಕಡಿದುಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ವಿಜಯ್, ಚಿತ್ರರಂಗದೊಟ್ಟಿಗೆ ಸಂಬಂಧ ಹಾಗೆ ಉಳಿಸಿಕೊಳ್ಳಲು ದೊಡ್ಡ ಹೆಜ್ಜೆಯೊಂದನ್ನು ಇರಿಸಿದ್ದಾರೆ.
ತಮಿಳುನಾಡಿನ ನಡಿಗರ್ ಸಂಘಂ (ಕಲಾವಿದರ ಸಂಘ) ಹೊಸ ಐಶಾರಾಮಿ ಕಟ್ಟಡವೊಂದನ್ನು ನಿರ್ಮಾಣ ಮಾಡುತ್ತಿದೆ. ಈ ಕಟ್ಟಡ ನಿರ್ಮಾಣಕ್ಕೆ ಬರೋಬ್ಬರಿ ಒಂದು ಕೋಟಿ ರೂಪಾಯಿ ದೇಣಿಗೆಯನ್ನು ನಟ ವಿಜಯ್ ನೀಡಿದ್ದಾರೆ. ಸಂಘದ ಅಧ್ಯಕ್ಷರಾಗಿರುವ ನಟ, ನಿರ್ಮಾಪಕ ವಿಶಾಲ್, ವಿಜಯ್ ಮಾಡಿರುವ ಸಹಾಯಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವಿಶಾಲ್, ‘ಥ್ಯಾಂಕ್ ಯು ಎನ್ನುವುದು ಕೇವಲ ಎರಡು ಸಣ್ಣ ಪದವಾದರೂ ಸಹ, ಹೃದಯದಿಂದ ಸಹಾಯ ಮಾಡಿದ ವ್ಯಕ್ತಿಗೆ ಇದು ಬಹಳ ದೊಡ್ಡದು. ನಾನು ಈ ಮಾತುಗಳನ್ನು ಹೇಳುತ್ತಿರುವುದು ನನ್ನ ಮೆಚ್ಚಿನ ನಟ ಹಾಗೂ ಅದ್ಭುತವಾದ ವ್ಯಕ್ತಿ ದಳಪತಿ ವಿಜಯ್ ಅವರ ಬಗ್ಗೆ. ನನ್ನ ಸಹೋದರ ದಳಪತಿ ವಿಜಯ್ ಅವರು ಎಸ್ಐಎಎ (ನಡಿಗರ್ ಸಂಘಂ)ನ ನೂತನ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ಆರ್ಥಿಕ ಸಹಾಯ ನೀಡಿದ್ದಾರೆ’ ಎಂದಿದ್ದಾರೆ.
ಇದನ್ನೂ ಓದಿ:ಸಿಎಎ ಸ್ವೀಕಾರಾರ್ಹವಲ್ಲ ತಮಿಳುನಾಡಿನಲ್ಲಿ ಜಾರಿಯಾಗದಂತೆ ನೋಡಿಕೊಳ್ಳಬೇಕು: ದಳಪತಿ ವಿಜಯ್
‘ನಿಮ್ಮ ಸಹಾಕಯ, ಬೆಂಬಲ ಇಲ್ಲದೆ ಆ ಹೊಸ ಕಟ್ಟಡ ಪರಿಪೂರ್ಣವಾಗುವುದಿಲ್ಲ ಎಂಬುದು ನಮಗೆ ಮೊದಲಿನಿಂದಲೂ ಅರಿವಿತ್ತು. ಈಗ ನೀವು ನಿಮ್ಮ ಸಹಾಯದಿಂದ ನಮಗೆ ಇಂಧನ ತುಂಬಿದ್ದೀರಿ, ಅಂದುಕೊಂಡ ಕೆಲಸವನ್ನು ಆದಷ್ಟು ಶೀಘ್ರವಾಗಿ ಮುಗಿಸುವ ಹುಮ್ಮಸ್ಸು ತುಂಬಿದ್ದೀರಿ’ ಎಂದು ವಿಶಾಲ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ವಿಜಯ್ ಜೊತೆಗಿನ ತಮ್ಮ ಚಿತ್ರವನ್ನು ಸಹ ವಿಶಾಲ್ ಹಂಚಿಕೊಂಡಿದ್ದಾರೆ.
ವಿಜಯ್ ಇತ್ತೀಚೆಗಷ್ಟೆ ರಾಜಕೀಯ ಪ್ರವೇಶ ಮಾಡಿದ್ದಾರೆ. ತಮಿಳಗ ವೆಟ್ರಿ ಕಳಗಮ್ ಹೆಸರಿನ ರಾಜಕೀಯ ಪಕ್ಷ ಸ್ಥಾಪಿಸಿದ್ದು, ರಾಜ್ಯ ಪ್ರವಾಸ ಮಾಡಿ ಪಕ್ಷದ ಬಲವರ್ಧನೆಯ ಯೋಜನೆ ಹಾಕಿಕೊಂಡಿದ್ದಾರೆ. ಇತ್ತೀಚೆಗಷ್ಟೆ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿಜಯ್, ಸಿಎಎಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಿಎಎಯನ್ನು ತಮಿಳುನಾಡು ಒಪ್ಪಿಕೊಳ್ಳಬಾರದು ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:38 am, Wed, 13 March 24