‘ತಂಗಲಾನ್’ ಟ್ರೇಲರ್ ಕನ್ನಡದಲ್ಲೂ ಬಂತು; ಕೆಜಿಎಫ್ ಕಥೆಯಲ್ಲಿ ಚಿಯಾನ್ ವಿಕ್ರಮ್ ಅಬ್ಬರ

|

Updated on: Jul 10, 2024 | 10:27 PM

ಚಿಯಾನ್​ ವಿಕ್ರಮ್​ ನಟನೆಯ ‘ತಂಗಲಾನ್’ ಸಿನಿಮಾದಲ್ಲಿ ಕೋಲಾರ ಚಿನ್ನದ ಗಣಿಯ ಕಥೆಯನ್ನು ತೋರಿಸಲಾಗುತ್ತಿದೆ. ಕರುನಾಡಿನ ಕಥೆ ಇರುವ ಈ ಸಿನಿಮಾ ತಮಿಳು, ಕನ್ನಡ, ತೆಲುಗು, ಹಿಂದಿ ಮುಂತಾದ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಈಗ ಟ್ರೇಲರ್​ ಅನಾವರಣ ಮಾಡಲಾಗಿದೆ. ‘ತಂಗಲಾನ್’ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸುವಲ್ಲಿ ಈ ಟ್ರೇಲರ್​ ಯಶಸ್ವಿ ಆಗಿದೆ.

‘ತಂಗಲಾನ್’ ಟ್ರೇಲರ್ ಕನ್ನಡದಲ್ಲೂ ಬಂತು; ಕೆಜಿಎಫ್ ಕಥೆಯಲ್ಲಿ ಚಿಯಾನ್ ವಿಕ್ರಮ್ ಅಬ್ಬರ
ಚಿಯಾನ್​ ವಿಕ್ರಮ್​
Follow us on

ನಟ ಚಿಯಾನ್​ ವಿಕ್ರಮ್​ ಅವರು ಪ್ರತಿ ಸಿನಿಮಾದಲ್ಲೂ ಗೆಟಪ್​ ಬದಲಾಯಿಸಿಕೊಂಡು ಗಮನ ಸೆಳೆಯುತ್ತಾರೆ. ಈಗ ಅವರು ನಟಿಸಿರುವ ‘ತಂಗಲಾನ್​’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಇದರಲ್ಲಿ ಅವರ ಗೆಟಪ್​ ನೋಡಿದರೆ ಸಿನಿಮಾ ಬಗ್ಗೆ ನಿರೀಕ್ಷೆ ಡಬಲ್​ ಆಗುತ್ತದೆ. ಬುಡಕಟ್ಟು ಜನಾಂಗದ ವ್ಯಕ್ತಿಯ ಪಾತ್ರದಲ್ಲಿ ವಿಕ್ರಮ್​ ಅವರು ನಟಿಸಿದ್ದಾರೆ. ಬ್ರಿಟಿಷರ ಕಾಲದ ಕಹಾನಿ ಈ ಸಿನಿಮಾದಲ್ಲಿ ಇದೆ. ತಮಿಳಿನ ಈ ಸಿನಿಮಾ ಕನ್ನಡಕ್ಕೂ ಡಬ್​ ಆಗಿ ಬಿಡುಗಡೆ ಆಗಲಿದೆ. ಕನ್ನಡ ವರ್ಷನ್​ ಟ್ರೇಲರ್​ ಕೂಡ ಬಿಡುಗಡೆ ಆಗಿದೆ. ಪ. ರಂಜಿತ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

‘ತಂಗಲಾನ್​’ ಟ್ರೇಲರ್​ನಲ್ಲಿ ಬೇರೊಂದು ಲೋಕವೇ ಅನಾವರಣ ಆಗಿದೆ. ಆ ನೆಲೆಯಲ್ಲಿ ಬಂಗಾರ ಇದೆ ಎಂಬುದು ಬ್ರಿಟಿಷರಿಗೆ ತಿಳಿಯುತ್ತದೆ. ಬುಡಕಟ್ಟು ಜನರ ಸಹಾಯ ಪಡೆದು ಚಿನ್ನ ತೆಗೆಯಲು ಬ್ರಿಟಿಷರು ಮುಂದಾಗುತ್ತಾರೆ. ಆದರೆ ಅಲ್ಲಿ ಚಿನ್ನ ಹುಡುಕುವುದು ಸಾವಿಗೆ ಸಮ ಎಂಬ ಎಚ್ಚರಿಕೆ ಕೂಡ ಎದುರಾಗುತ್ತದೆ. ಹಾಗಿದ್ದರೂ ಚಿನ್ನದ ಬೇಟೆ ಮುಂದುವರಿಯುತ್ತದೆ. ಆಗ ಎದುರಾಗುವ ಸಂಘರ್ಷ ಭಯಾನಕವಾಗಿರುತ್ತದೆ. ಹೀಗೆ.. ಕಥೆಯ ಎಳೆಯನ್ನು ‘ತಂಗಲಾನ್​’ ಟ್ರೇಲರ್​ನಲ್ಲಿ ಬಿಟ್ಟುಕೊಡಲಾಗಿದೆ.

‘ತಂಗಲಾನ್​’ ಟ್ರೇಲರ್​:

ಕೆ.ಇ. ಜ್ಞಾನವೇಲ್​ ರಾಜಾ ಅವರು ‘ತಂಗಲಾನ್​’ ಸಿನಿಮಾವನ್ನು ನಿರ್ಮಿಸಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಜಿ. ವಿ. ಪ್ರಕಾಶ್​ ಕುಮಾರ್​ ಸಂಗೀತ ನೀಡಿದ್ದಾರೆ. ಮಾಳವಿಕಾ ಮೋಹನನ್ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಪಾರ್ವತಿ ತಿರುವತ್ತು ಕೂಡ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಕನ್ನಡದ ಟ್ರೇಲರ್​ ನೋಡಿ ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸಿನಿಮಾ ಮೇಲಿನ ಕೌತುಕ ಜಾಸ್ತಿ ಆಗಿದೆ.

ಇದನ್ನೂ ಓದಿ: ಕೆಜಿಎಫ್​ನಲ್ಲಿ ಈಗಲೂ ಚಿನ್ನ ಇದೆಯೇ?: ಕೋಲಾರದ ಚಿನ್ನದ ಗಣಿ ಮುಚ್ಚಲು ಏನು ಕಾರಣ..?

ಚಿಯಾನ್​ ವಿಕ್ರಮ್​ ಅವರ ವೃತ್ತಿಜೀವನದಲ್ಲಿ ‘ತಂಗಲಾನ್​’ ಸಿನಿಮಾ ಸಖತ್ ಭಿನ್ನವಾಗಿರಲಿದೆ. ಈ ಚಿತ್ರದ ಟ್ರೇಲರ್​ನಲ್ಲಿ ಅವರು ಅಬ್ಬರಿಸಿದ್ದಾರೆ. ಮೈನವಿರೇಳಿಸುವ ಆ್ಯಕ್ಷನ್​ ಸನ್ನಿವೇಶಗಳು ಈ ಸಿನಿಮಾದಲ್ಲಿ ಇವೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಆಗಸ್ಟ್​ 15ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಅಂದಹಾಗೆ, ಈ ಸಿನಿಮಾದಲ್ಲಿ ಇರುವುದು ಕರ್ನಾಟಕದ ಕೋಲಾರದ ಕಥೆ. ಕೋಲಾರ ಚಿನ್ನದ ಗಣಿಯ (ಕೆಜಿಎಫ್​) ರಿಯಲ್ ಕಥೆಯನ್ನು ಈ ಸಿನಿಮಾ ತೆರೆದಿಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.