ಸೋಲದ ಬೆಕ್ಕು, ಸಿಗದ ಇಲಿ: ಜಗತ್ತನ್ನೇ ಗೆದ್ದ ‘ಟಾಮ್ ಆ್ಯಂಡ್ ಜೆರ್ರಿ’ ಜೋಡಿಯ ರೋಚಕ ಹಿನ್ನೆಲೆ

ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರನ್ನೂ ದಶಕಗಳಿಂದ ನಗಿಸುತ್ತ ಬಂದಿರುವ ಟಾಮ್ ಆ್ಯಂಡ್ ಜೆರ್ರಿ ಕಾರ್ಟೂನ್ ಹಿಂದೆ ರೋಚಕ ಇತಿಹಾಸವಿದೆ. ಆದರೆ ಇದರ ಹಿಂದೆ ಯುದ್ಧದ ಪ್ರಭಾವ, ಕೆಲವು ನಿಷೇಧಿತ ಎಪಿಸೋಡ್‌ಗಳು, ಆತ್ಮಹತ್ಯೆ ಸಿದ್ಧಾಂತದಂತಹ ಕರಾಳ ರಹಸ್ಯಗಳು ಹಾಗೂ ವಿವಾದಾತ್ಮಕ ಕಥೆಗಳು ಅಡಗಿವೆ.

ಸೋಲದ ಬೆಕ್ಕು, ಸಿಗದ ಇಲಿ: ಜಗತ್ತನ್ನೇ ಗೆದ್ದ ‘ಟಾಮ್ ಆ್ಯಂಡ್ ಜೆರ್ರಿ’ ಜೋಡಿಯ ರೋಚಕ ಹಿನ್ನೆಲೆ
ಟಾಮ್ ಆ್ಯಂಡ್ ಜೆರ್ರಿ
Edited By:

Updated on: Nov 16, 2026 | 3:06 PM

ಮುಖ್ಯಾಂಶಗಳು

  • ಯುದ್ಧದ ಭೀಕರತೆ ಮತ್ತು ಜನಾಂಗೀಯ ನಿಂದನೆಗಳ ನೆರಳು
  • ಪ್ರಸಾರ ನಿಷೇಧಿಸಿದ ‘ಬ್ಲೂ ಕ್ಯಾಟ್ ಬ್ಲೂಸ್’ ಮತ್ತು ಆತ್ಮಹತ್ಯೆಯ ಕರಾಳ ಸಿದ್ಧಾಂತ
  • ಸಂಭಾಷಣೆಯೇ ಇಲ್ಲದೆ ವಿಶ್ವವನ್ನೇ ಗೆದ್ದ ಅತಿ ಅಪರೂಪದ ಬೆಕ್ಕು-ಇಲಿ ಜೋಡಿ

ಜಗತ್ತಿನಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಪ್ರತಿಯೊಬ್ಬರನ್ನೂ ನಗೆಗಡಲಲ್ಲಿ ತೇಲಿಸಿದ ಏಕೈಕ ಅಪರೂಪದ ಕಾರ್ಟೂನ್ ಜೋಡಿ ಎಂದರೆ ಅದು ‘ಟಾಮ್ ಆ್ಯಂಡ್ ಜೆರ್ರಿ. ಬರೋಬ್ಬರಿ 80ಕ್ಕೂ ಹೆಚ್ಚು ವರ್ಷಗಳಿಂದ ವೀಕ್ಷಕರನ್ನು ರಂಜಿಸುತ್ತಾ ಬಂದಿರುವ ಈ ಮುದ್ದಾದ ಬೆಕ್ಕು ಮತ್ತು ಇಲಿಯ ಕಿತಾಪತಿಗಳ ಹಿಂದೆ ಅತ್ಯಂತ ಕುತೂಹಲಕಾರಿ ಇತಿಹಾಸವಿದೆ. ಆದರೆ ಇದರ ಹಿಂದೆ ಕೆಲವೊಂದು ಕರಾಳ ರಹಸ್ಯಗಳು, ನಿಷೇಧಿತ ಎಪಿಸೋಡ್‌ಗಳು ಮತ್ತು ವಿವಾದಾತ್ಮಕ ಸಿದ್ಧಾಂತಗಳಿವೆ. ಆ ಬಗ್ಗೆ ಇಲ್ಲಿದೆ ವಿವರ.

ಆರಂಭಿಕ ಹೆಜ್ಜೆಗಳು

1940ರಲ್ಲಿ ವಿಲಿಯಮ್ ಹನ್ನಾ ಮತ್ತು ಜೋಸೆಫ್ ಬಾರ್ಬೆರಾ ಎಂಬ ಇಬ್ಬರು ಆನಿಮೇಟರ್‌ಗಳು ಬೆಕ್ಕು ಹಾಗೂ ಇಲಿಯ ಕಾಡಾಟದ ಕಥಾಹಂದರ ಹೊಂದಿದ್ದ ‘ಪಸ್ ಗೆಟ್ಸ್ ದಿ ಬೂಟ್’ ಎಂಬ ಮೊದಲ ಕಾರ್ಟೂನ್ ನಿರ್ಮಿಸಿದರು. ಅದರಲ್ಲಿ ಜೆರ್ರಿ ಎಂಬ ಜಾಣ ಇಲಿ, ಟಾಮ್ ಎಂಬ ಬೆಕ್ಕಿಗೆ ಬುದ್ಧಿ ಕಲಿಸುವುದು ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಈ ಶೋಗೆ ಸಿಕ್ಕ ಅಭೂತಪೂರ್ವ ಯಶಸ್ಸಿನ ನಂತರ 1941ರಲ್ಲಿ ಅಧಿಕೃತವಾಗಿ ‘ಟಾಮ್ ಆ್ಯಂಡ್ ಜೆರ್ರಿ’ ಎಂದು ಹೆಸರಿಡಲಾಯಿತು. ಟಾಮ್‌ನ ತಂಟೆ ಹಾಗೂ ಅದರಿಂದ ತಕ್ಷಣವೇ ಚಾಣಾಕ್ಷತನದಿಂದ ತಪ್ಪಿಸಿಕೊಳ್ಳುವ ಜೆರ್ರಿಯ ಸನ್ನಿವೇಶಗಳು ಇಡೀ ವಿಶ್ವದ ಗಮನ ಸೆಳೆದವು.
ಸುವರ್ಣ ಯುಗ : 1940 ಮತ್ತು 50ರ ದಶಕವು ಈ ಕಾರ್ಟೂನ್‌ನ ಬಂಗಾರದ ಯುಗವಾಗಿ ಹೊರಹೊಮ್ಮಿತು. ಹನ್ನಾ-ಬಾರ್ಬೆರಾ ಜೋಡಿಯು ನೂರಕ್ಕೂ ಹೆಚ್ಚು ಅತ್ಯುತ್ತಮ ಎಪಿಸೋಡ್‌ಗಳನ್ನು ನಿರ್ಮಿಸಿ ಬರೋಬ್ಬರಿ ಏಳು ಅಕಾಡೆಮಿ (ಆಸ್ಕರ್) ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

Loading...

ಎರಡನೇ ಮಹಾಯುದ್ಧದ ಪ್ರಭಾವ:

1940ರ ದಶಕದಲ್ಲಿ ಕಾರ್ಟೂನ್ ಪ್ರಸಾರವಾಗುತ್ತಿದ್ದ ಕಾಲದಲ್ಲಿ ಎರಡನೇ ಮಹಾಯುದ್ಧದ ಪ್ರಭಾವ ತೀವ್ರವಾಗಿತ್ತು. ಕಾರ್ಟೂನ್‌ನ ಕೆಲವು ಸಂಚಿಕೆಗಳಲ್ಲಿ ಯುದ್ಧದ ಕಾಲದ ಜನಾಂಗೀಯ ನಿಂದನೆಗಳು, ಬ್ರಿಟಿಷ್ ಮತ್ತು ಅಮೆರಿಕದ ಮಿಲಿಟರಿ ಶಕ್ತಿಗಳ ಪ್ರದರ್ಶನ ಹಾಗೂ ಜರ್ಮನ್ ವಿರೋಧಿ ಧ್ವನಿಗಳು ಕಂಡುಬಂದಿದ್ದವು. ಅಂದಿನ ಕಾಲದ ಕಠಿಣ ರಾಜಕೀಯ ಪರಿಸ್ಥಿತಿಯನ್ನು ಮಕ್ಕಳಿಗೆ ಅರ್ಥವಾಗುವಂತೆ ವ್ಯಂಗ್ಯಚಿತ್ರಗಳ ಮೂಲಕ ಬಿಂಬಿಸುವ ಪ್ರಯತ್ನಗಳು ಈ ಕಾರ್ಟೂನ್‌ನಲ್ಲಿ ನಡೆದಿದ್ದವು. ಯುದ್ಧದ ಭೀಕರತೆಯನ್ನು ಮರೆಸಲು ಮತ್ತು ದೇಶಪ್ರೇಮ ಬಿತ್ತುವ ಉದ್ದೇಶದಿಂದ ಇಂತಹ ಅಂಶಗಳನ್ನು ಬಳಸಿಕೊಳ್ಳಲಾಗಿತ್ತು.

ಕಾಲಾನಂತರದ ಬದಲಾವಣೆ

ಕಾಲಕ್ರಮೇಣ ಜೀನ್ ಡೈಚ್ (1960) ಮತ್ತು ಚಕ್ ಜೋನ್ಸ್ (1970) ಮುಂತಾದ ಹೊಸ ನಿರ್ದೇಶಕರು ಈ ಕಾರ್ಟೂನ್‌ಗೆ ತಮ್ಮದೇ ಆದ ವಿಶಿಷ್ಟ ಶೈಲಿ ನೀಡಿದರು. ನಿರ್ದೇಶಕರು ಬದಲಾದರೂ ಟಾಮ್-ಜೆರ್ರಿ ನಡುವಿನ ಆ ಚೇಷ್ಟೆ ಮತ್ತು ತಮಾಷೆ ಎಂದಿಗೂ ಕಮ್ಮಿಯಾಗಲಿಲ್ಲ. ವಿವಿಧ ಭಾಷೆಗಳಿಗೆ ಡಬ್ ಆಗಿ ಪ್ರಸಾರಗೊಂಡ ಈ ಕಾರ್ಟೂನ್ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಅಪಾರ ಪ್ರಮಾಣದ ಅಭಿಮಾನಿಗಳನ್ನು ಗಳಿಸಿತು. ಭಾಷೆಯ ಗಡಿ ದಾಟಿ ಪ್ರತಿಯೊಬ್ಬ ಮಗುವೂ ಇದನ್ನು ನೋಡಿ ಆನಂದಿಸಿತು. ಇಲ್ಲಿ ಸಂಭಾಷಣೆ ಇಲ್ಲದೇ ಇದ್ದಿದ್ದರಿಂದ ಎಲ್ಲಾ ಭಾಷೆಗೂ ಇದನ್ನು ಕೊಂಡೊಯ್ಯಲು ಸಹಕಾರಿ ಆಯಿತು.

ನಿಷೇಧಿತ ಎಪಿಸೋಡ್‌ಗಳು

ಟಾಮ್ ಆ್ಯಂಡ್ ಜೆರ್ರಿಯ ಇತಿಹಾಸದಲ್ಲಿ ಕೆಲವು ಸಂಚಿಕೆಗಳನ್ನು ವಿವಿಧ ಕಾರಣಗಳಿಗಾಗಿ ಟಿವಿ ವಾಹಿನಿಗಳು ಪ್ರಸಾರ ಮಾಡುವುದನ್ನು ನಿಷೇಧಿಸಿವೆ. ವಿಶೇಷವಾಗಿ 1948ರಲ್ಲಿ ಬಿಡುಗಡೆಯಾದ ‘ಬ್ಲೂ ಕ್ಯಾಟ್ ಬ್ಲೂಸ್’ ಅತ್ಯಂತ ವಿವಾದಾತ್ಮಕ ಎಪಿಸೋಡ್ ಆಗಿದೆ. ಇದರಲ್ಲಿ ಟಾಮ್ ಪ್ರೀತಿಯಲ್ಲಿ ಸೋತು, ಜೀವನದಲ್ಲಿ ಜಿಗುಪ್ಸೆಗೊಂಡು ಜೆರ್ರಿಯೊಂದಿಗೆ ರೈಲು ಹಳಿಯ ಮೇಲೆ ಕುಳಿತು ಆತ್ಮಹತ್ಯೆ ಮಾಡಿಕೊಳ್ಳಲು ಕಾಯುವ ದೃಶ್ಯವಿದೆ. ಕಾರ್ಟೂನ್‌ನಲ್ಲಿ ಇಂತಹ ಖಿನ್ನತೆ ಮತ್ತು ಸಾವಿನ ಅಂಶಗಳು ಮಕ್ಕಳ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಈ ಸಂಚಿಕೆಯನ್ನು ಅನೇಕ ದೇಶಗಳಲ್ಲಿ ನಿಷೇಧಿಸಲಾಯಿತು. ಇದರೊಂದಿಗೆ ವರ್ಣಭೇದ ನೀತಿ ಮತ್ತು ಸಿಗರೇಟ್ ಸೇದುವ ದೃಶ್ಯಗಳಿದ್ದ ಇನ್ನು ಕೆಲವು ಸಂಚಿಕೆಗಳನ್ನೂ ಕೂಡ ನಂತರದ ದಿನಗಳಲ್ಲಿ ಸೆನ್ಸಾರ್ ಮಾಡಲಾಯಿತು.

ಆತ್ಮಹತ್ಯೆ ಸಿದ್ಧಾಂತಗಳು

ಇಂಟರ್ನೆಟ್ ಜಗತ್ತಿನಲ್ಲಿ ಟಾಮ್ ಆ್ಯಂಡ್ ಜೆರ್ರಿ ಕುರಿತು ಹರಿದಾಡುವ ಅತ್ಯಂತ ಭಯಾನಕ ಸಿದ್ಧಾಂತವೆಂದರೆ ಅದರ ಕೊನೆಯ ಎಪಿಸೋಡ್ ಕುರಿತಾದ ಕಥೆ. ಈ ಕಾಲ್ಪನಿಕ ಸಿದ್ಧಾಂತದ ಪ್ರಕಾರ, ಟಾಮ್ ಮತ್ತು ಜೆರ್ರಿ ತಮ್ಮ ಜೀವನದುದ್ದಕ್ಕೂ ಪರಸ್ಪರ ಹಿಂಸಿಸಿಕೊಂಡು ಕೊನೆಗೆ ತೀವ್ರ ಖಿನ್ನತೆಗೆ ಒಳಗಾಗಿ ಒಟ್ಟಾಗಿ ಆತ್ಮಹತ್ಯೆ ಮಾಡಿಕೊಳ್ಳುವುದರೊಂದಿಗೆ ಈ ಸರಣಿ ಅಂತ್ಯಗೊಳ್ಳುತ್ತದೆ ಎನ್ನಲಾಗುತ್ತದೆ. ಆದರೆ ಇದು ಅಧಿಕೃತವಾಗಿ ಯಾವುದೇ ನಿರ್ಮಾಪಕರು ದೃಢಪಡಿಸದ ಕೇವಲ ವೀಕ್ಷಕರ ಊಹಾತ್ಮಕ ಕತೆಯಾಗಿದೆ.

ಶತ್ರುವಾಗಿದ್ದರೂ ಒಗ್ಗಟ್ಟು ಮುಖ್ಯ

ಟಾಮ್ ಹಾಗೂ ಜೆರ್ರಿ ಮೇಲ್ನೋಟಕ್ಕೆ ಶತ್ರುಗಳಂತೆ ಕಂಡರೂ ಸಂದರ್ಭ ಬಂದಾಗ ಪರಸ್ಪರ ತೋರಿಸುವ ಕಾಳಜಿಯೇ ಈ ಶೋ ಪ್ರತಿಯೊಬ್ಬರಿಗೂ ಹತ್ತಿರವಾಗಲು ಪ್ರಮುಖ ಕಾರಣ. ಶತ್ರುಗಳಾಗಿದ್ದ ಇವರಿಬ್ಬರೂ ಒಂದಾಗಿ ಸಣ್ಣ ಹೆಣ್ಣುಮಗುವಿಗೆ ಸಹಾಯ ಮಾಡುವ ಎಪಿಸೋಡ್​​ಗಳು ವೀಕ್ಷಕರಿಗೆ ಹೊಸ ಅನುಭವ ನೀಡಿದವು. ಯಾವುದೇ ಸಂಭಾಷಣೆಗಳಿಲ್ಲದೆ ಕೇವಲ ಹಾವಭಾವ ಮತ್ತು ತಮಾಷೆಯ ಕಿತಾಪತಿಗಳಿಂದಲೇ ನಗಿಸುವುದು ಇದರ ಮುಖ್ಯ ವೈಶಿಷ್ಟ್ಯ.

ಇಂದೂ ನಗಿಸುತ್ತದೆ

ಇಂದು ಟಿವಿ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಹಾಗೂ ಹೊಸ ಸಿನಿಮಾಗಳ ಮೂಲಕ ಟಾಮ್ ಆ್ಯಂಡ್ ಜೆರ್ರಿ ಇಂದಿನ ಪೀಳಿಗೆಯನ್ನೂ ನಗಿಸುತ್ತಿದೆ. ಕಾಲ ಬದಲಾದರೂ ಈ ಜೋಡಿಯ ಮನರಂಜನಾ ಪಯಣ ಮುಕ್ತಾಯವಿಲ್ಲದೆ ಮುಂದುವರಿಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us