ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರು ಹೊಸ ಧಾರಾವಾಹಿ ಶುರು ಮಾಡುತ್ತಿದ್ದಾರೆ. ಅದಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಪಾತ್ರಧಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ನಾಯಕಿಯಾಗಿ ಖ್ಯಾತ ಗಾಯಕ ವಿದ್ಯಾಭೂಷಣ ಅವರ ಪುತ್ರಿ ಮೇಧಾ ವಿದ್ಯಾಭೂಷಣ ಆಯ್ಕೆ ಆಗಿದ್ದಾರೆ. ತಂದೆಯ ರೀತಿಯೇ ಮೇಧಾ ಅವರಿಗೂ ಸಂಗೀತ ಕ್ಷೇತ್ರದಲ್ಲಿ ಆಸಕ್ತಿ. ಆದರೆ ಈಗ ನಟನೆಯ ಕ್ಷೇತ್ರದಿಂದ ದೊಡ್ಡ ಅವಕಾಶ ಬಂದಿದೆ. ಟಿ.ಎನ್. ಸೀತಾರಾಮ್ ಅವರ ಸೀರಿಯಲ್ಗೆ ನಾಯಕಿ ಆಗುವ ಚಾನ್ಸ್ ಪಡೆದುಕೊಂಡಿರುವ ಮೇಧಾ ಇದೇ ಮೊದಲ ಬಾರಿಗೆ ಕ್ಯಾಮರಾ ಎದುರಿಸುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಶುರು ಆಗಲಿರುವ ಹೊಸ ಜರ್ನಿಯ ಬಗ್ಗೆ ಮೇಧಾ ಅವರು ‘ಟಿವಿ9 ಡಿಜಿಟಲ್’ ಜೊತೆ ಮಾತನಾಡಿದ್ದಾರೆ.
* ಟಿಎನ್ ಸೀತಾರಾಮ್ ಅವರ ಹೊಸ ಸೀರಿಯಲ್ಗೆ ನೀವು ಆಯ್ಕೆ ಆಗಿದ್ದು ಹೇಗೆ?
ಸೀತಾರಾಮ್ ಅವರೇ ಅಪ್ರೋಚ್ ಮಾಡಿದರು. ಮ್ಯೂಚುವಲ್ ಫ್ರೆಂಡ್ ಮೂಲಕ ಅವರಿಗೆ ನನ್ನ ಬಗ್ಗೆ ಗೊತ್ತಾಗಿದೆ. ಇದು ಸಂಗೀತದ ಹಿನ್ನೆಲೆಯುಳ್ಳ ಧಾರಾವಾಹಿ ಆದ್ದರಿಂದ ಸಂಗೀತ ಗೊತ್ತಿರುವವರು ಬೇಕಿತ್ತು. ನಾನು ಹಾಡುತ್ತೇನೆ ಎಂಬುದು ಅವರಿಗೆ ಗೊತ್ತಿತ್ತು. ಅವಕಾಶ ಬಂದಾಗ ನಾನೂ ಒಪ್ಪಿಕೊಂಡೆ. ಆ ಬಳಿಕ ಆಡಿಷನ್ ಮತ್ತು ಲುಕ್ ಟೆಸ್ಟ್ ಮಾಡಿದರು. ಅದೆಲ್ಲ ಮುಗಿದ ಬಳಿಕ ನನ್ನ ಆಯ್ಕೆ ಅಂತಿಮವಾಯಿತು.
* ನಿಮಗೆ ನಟನೆಯ ಅನುಭವ ಇದೆಯೇ?
ನಾನು ಕೆಲವು ನಾಟಕಗಳಲ್ಲಿ ನಟಿಸಿದ್ದೇನೆ. ಅಭಿನಯಕ್ಕೆ ಸಂಬಂಧಿಸಿದ ಕಾರ್ಯಗಾರಗಳಲ್ಲಿ ಭಾಗವಹಿಸಿದ್ದೇನೆ. ಅದು ಹೊರತುಪಡಿಸಿ ನಟನೆಯಲ್ಲಿ ಹೆಚ್ಚು ಅನುಭವ ಇಲ್ಲ. ಕ್ಯಾಮರಾ ಮುಂದೆ ನಟಿಸುತ್ತಿರುವುದು ಇದೇ ಮೊದಲು. ಅದಕ್ಕಾಗಿ ಈಗಾಗಲೇ ನನಗೆ ಇಡೀ ಟೀಮ್ ತರಬೇತಿ ನೀಡುತ್ತಿದೆ. ಪಾತ್ರಕ್ಕೆ ನಾನು ಹೊಂದಿಕೊಳ್ಳಲು ಅನುಕೂಲ ಆಗುವ ರೀತಿಯಲ್ಲಿ 10 ದಿನದಿಂದ ತರಬೇತಿ ಪಡೆದುಕೊಳ್ಳುತ್ತಿದ್ದೇನೆ. ಮುಂದಿನ ವಾರದಿಂದಲೇ ಶೂಟಿಂಗ್ ಆರಂಭ ಆಗಲಿದೆ. ತುಂಬ ಎಗ್ಸೈಟ್ ಆಗಿದ್ದೇನೆ.
* ನಿಮ್ಮ ಜೊತೆ ಬೇರೆ ಯಾವೆಲ್ಲ ಕಲಾವಿದರು ಇರಲಿದ್ದಾರೆ?
ಮಾಳವಿಕಾ ಅವಿನಾಶ್, ಜಯಶ್ರೀ ಮುಂತಾದ ಅನುಭವಿ ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅವರೆಲ್ಲ ತುಂಬ ವರ್ಷಗಳಿಂದ ಈ ಕ್ಷೇತ್ರದಲ್ಲಿ ಇರುವವರು. ಅವರ ಜೊತೆ ನಟಿಸುತ್ತಿರುವುದಕ್ಕೆ ತುಂಬ ಖುಷಿ ಆಗುತ್ತಿದೆ. ಅವರಿಂದ ಹೆಚ್ಚು ಕಲಿಯಲು ಸಿಗುತ್ತದೆ. ಖುಷಿಯ ಜೊತೆ ತುಂಬ ನರ್ವಸ್ ಆಗಿದ್ದೇನೆ. ಮುಂದೇನಾಗುತ್ತೋ ನೋಡಬೇಕು. ಟಿ.ಎನ್. ಸೀತಾರಾಮ್ ಅವರ ಜೊತೆ ಕೆಲಸ ಮಾಡುವುದು ಅನೇಕರ ಕನಸಾಗಿರುತ್ತದೆ. ಅದು ನನಗೆ ಸಿಕ್ಕಿದೆ ಎಂದಮೇಲೆ ಬಹಳ ಸಂತೋಷ ಆಗುತ್ತಿದೆ.
* ಸೀತಾರಾಮ್ ಅವರಿಂದ ಮೊದಲ ಬಾರಿಗೆ ನಿಮಗೆ ಆಫರ್ ಬಂದಾಗ ನಿಮ್ಮ ಪ್ರತಿಕ್ರಿಯೆ ಹೇಗಿತ್ತು?
ಮೊದಲ ಬಾರಿಗೆ ಕೇಳಿದಾಗ ಸಣ್ಣ ಗೊಂದಲ ಮತ್ತು ನರ್ವಸ್ನೆಸ್ ಇತ್ತು. ಯಾಕೆಂದರೆ ಇದೊಂದು ದೊಡ್ಡ ಜವಾಬ್ದಾರಿ. ಈ ಪಾತ್ರ ಮಾಡಿ, ಜನರಿಗೆ ತಲುಪಿಸಬೇಕು ಎಂದರೆ ತಯಾರಿ ಬೇಕಿರುತ್ತದೆ. ಧಾರಾವಾಹಿಯಲ್ಲಿ ನಟಿಸಿ ಅಭ್ಯಾಸ ಇಲ್ಲದ ಕಾರಣ ಸ್ವಲ್ಪ ಭಯ ಇತ್ತು. ಆದರೆ ಈಗ ಅವರಿಂದ ತರಬೇತಿ ಪಡೆದುಕೊಂಡು, ತಯಾರಾಗಿರುವುದರಿಂದ ಖುಷಿ ಆಗುತ್ತಿದೆ.
* ಟಿಎನ್ಎಸ್ ನಿರ್ದೇಶನದ ಧಾರಾವಾಹಿಗಳಲ್ಲಿ ಮಹಿಳೆಯರ ಪಾತ್ರಗಳು ತುಂಬ ಚೆನ್ನಾಗಿ ಚಿತ್ರಿತವಾಗುತ್ತವೆ. ನಿಮ್ಮ ಪಾತ್ರದ ಬಗ್ಗೆ ನಿಮಗೆ ಏನು ನಿರೀಕ್ಷೆ ಇದೆ?
ಅವರು ಒಂದು ಹೆಮ್ಮರದ ರೀತಿ. ಅಂಥವರ ಜೊತೆ ಕೆಲಸ ಮಾಡಬೇಕು ಎಂಬ ಕನಸು ಎಲ್ಲರಿಗೂ ಇರುತ್ತದೆ. ನನಗೆ ಮುಖ್ಯಪಾತ್ರ ಕೊಟ್ಟಿರುವುದರಿಂದ ಖುಷಿಯ ಜೊತೆಗೆ ಜವಾಬ್ದಾರಿ ಇದೆ. ಚಿಕ್ಕ ವಯಸ್ಸಿನಿಂದಲೂ ‘ಮುಕ್ತ ಮುಕ್ತ’ ಮುಂತಾದ ಸೀರಿಯಲ್ಗಳನ್ನು ನೋಡಿಕೊಂಡು ಬಂದಿದ್ದೇನೆ. ‘ಮತ್ತೆ ಮನ್ವಂತರ’ ಧಾರಾವಾಹಿಯಲ್ಲಿ ನನ್ನ ಪಾತ್ರ ಕೂಡ ಚೆನ್ನಾಗಿ ಮೂಡಿಬರುತ್ತದೆ ಎಂಬ ನಂಬಿಕೆ ಇದೆ.
* ನಿಮ್ಮ ಪಾತ್ರದ ಬಗ್ಗೆ ಸ್ವಲ್ಪ ಮಾಹಿತಿ ಹಂಚಿಕೊಳ್ಳಬಹುದೇ?
ಆಕೆ ತುಂಬ ಸ್ಟ್ರಾಂಗ್ ಆದಂತಹ ಯುವತಿ ಆಗಿರುತ್ತಾಳೆ. ಜೀವನದಲ್ಲಿ ಬರುವ ಎಲ್ಲ ಸವಾಲುಗಳನ್ನು ಸ್ವೀಕರಿಸಿ ಹೇಗೆ ಮುನ್ನುಗ್ಗುತ್ತಾಳೆ ಎಂಬ ಕಥೆ ಇದೆ. ಇಡೀ ಕಥೆ ನನ್ನ ಪಾತ್ರದ ಸುತ್ತವೇ ಸುತ್ತುತ್ತದೆ. ಸ್ಪೋರ್ಟ್ಸ್ ಪರ್ಸನ್ ಆಗಿರುತ್ತೇನೆ. ಸಂಗೀತದ ಹಿನ್ನೆಲೆಗೂ ನನ್ನ ಪಾತ್ರಕ್ಕೂ ಏನು ಸಂಬಂಧ ಎಂಬುದನ್ನು ಈಗಲೇ ನಾನು ಹೇಳುವಂತಿಲ್ಲ. ಪಾತ್ರದ ಹೆಸರು ಏನು ಎಂಬುದು ಕೂಡ ಧಾರಾವಾಹಿಯಲ್ಲೇ ಬಹಿರಂಗ ಆಗಲಿ.
* ಈಗ ನೀವು ಇಂಜಿನಿಯರಿಂಗ್ ಓದುತ್ತಿದ್ದೀರಿ.. ನಟನೆ ಆರಂಭಿಸಿದ ಬಳಿಕ ಕಾಲೇಜು ಮುಂದುವರಿಸಲು ಸಾಧ್ಯವೇ?
ವಿದ್ಯಾಭ್ಯಾಸವನ್ನು ನಾನು ನಿಲ್ಲಿಸುವುದಿಲ್ಲ. ನಟನೆ ಮತ್ತು ವಿದ್ಯಾಭ್ಯಾಸವನ್ನು ಬ್ಯಾಲೆನ್ಸ್ ಮಾಡುತ್ತೇನೆ. ಪಿಇಎಸ್ ಯೂನಿವರ್ಸಿಟಿ ಕಾಲೇಜ್ನವರ ಬೆಂಬಲದಿಂದ ನಾನು ಇಂಜಿನಿಯರಿಂಗ್ ಪೂರ್ಣಗೊಳಿಸುತ್ತೇನೆ. ಈ ರೀತಿ ಬ್ಯಾಲೆನ್ಸ್ ಮಾಡುವುದು ನನಗೆ ಹೊಸದೇನೂ ಅಲ್ಲ. ನಾನು ಸಿಂಗರ್ ಆದ ಕಾರಣ ಚಿಕ್ಕವಯಸ್ಸಿನಿಂದಲೂ ಇದು ನನಗೆ ಅಭ್ಯಾಸ ಇದೆ.
* ಧಾರಾವಾಹಿಯಲ್ಲಿ ನಟಿಸುತ್ತಿರುವುದಕ್ಕೆ ಕುಟುಂಬದವರ ಬೆಂಬಲ ಹೇಗಿದೆ?
ತುಂಬ ಸಪೋರ್ಟ್ ಇದೆ. ಅವಕಾಶ ಬಂದಿರುವುದಕ್ಕೆ ತಂದೆ, ತಾಯಿ ಮತ್ತು ಅಣ್ಣನಿಗೆ ತುಂಬ ಖುಷಿ ಆಯಿತು. ಮೊದಲಿಗೆ ನನಗೆ ಸ್ವಲ್ಪ ಭಯ ಎನಿಸಿದಾಗ ಇವರೇ ನನಗೆ ಪ್ರೋತ್ಸಾಹ ತುಂಬಿದರು. ತಂದೆಗೆ ಹೆಚ್ಚು ಖುಷಿ ಆಗಿದೆ. ಟಿಎನ್ ಸೀತಾರಾಮ್ ಅವರಿಂದ ಕಲಿಯುವುದು ತುಂಬ ಸಿಗುತ್ತದೆ ಎಂದು ಅವರು ಹೇಳಿದರು. ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ ಎಂದಮಾತ್ರಕ್ಕೆ ಸಂಗೀತವನ್ನು ಬಿಟ್ಟಿದ್ದೇನೆ ಎಂದಲ್ಲ. ಈ ಮಾತನ್ನು ನಾನು ಒತ್ತಿ ಹೇಳುತ್ತೇನೆ. ಈ ಧಾರಾವಾಹಿಯ ಕಥೆಯಲ್ಲಿ ಸಂಗೀತಕ್ಕೂ ಪ್ರಾಮುಖ್ಯತೆ ಇರುವುದರಿಂದ ನಮ್ಮ ತಂದೆ ಅವರು ಬೇಗ ಒಪ್ಪಿಕೊಂಡರು.
* ಸೀರಿಯಲ್ನಲ್ಲಿ ನಟಿಸಲು ಶುರುಮಾಡಿದ ನಂತರ ನಿಮ್ಮ ಮೂಲ ಹೆಸರನ್ನು ಬಿಟ್ಟು ಪಾತ್ರದ ಹೆಸರಿನಿಂದಲೇ ಜನರು ನಿಮ್ಮನ್ನು ಗುರುತಿಸಲು ಶುರುಮಾಡುತ್ತಾರೆ. ಆ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನನ್ನ ಪಾತ್ರದ ಹೆಸರಿನಿಂದಾಗಿ ಜನರು ನನ್ನನ್ನು ಗುರುತಿಸುತ್ತಾರೆ ಎಂಬುದಾದರೆ ಅದಕ್ಕಿಂತಲೂ ಹೆಚ್ಚಿನ ಖುಷಿ ಬೇರೊಂದಿಲ್ಲ. ಜನರು ಹಾಗೆ ಕರೆಯಲು ಶುರುಮಾಡುತ್ತಾರೆ ಎಂದರೆ ನನ್ನ ಪಾತ್ರವನ್ನು ನಾನು ಸರಿಯಾಗಿ ಮಾಡಿದ್ದೇನೆ ಎಂಬುದು ಗೊತ್ತಾಗುತ್ತದೆ.
ಇದನ್ನೂ ಓದಿ: ಟಿ.ಎನ್. ಸೀತಾರಾಮ್ ಹೊಸ ಧಾರಾವಾಹಿಗೆ ಟೈಟಲ್ ಫಿಕ್ಸ್; ಮೇಧಾ ವಿದ್ಯಾಭೂಷಣ ನಾಯಕಿ!