ಮಧ್ಯರಾತ್ರಿ 2 ಗಂಟೆಗೆ ದೇವಸ್ಥಾನದಲ್ಲಿ ಭಾರಿ ಸೌಂಡ್: ಪೊಲೀಸರಿಗೆ ದೂರು ನೀಡಿದ ನಟ ಅಲ್ಲು ಶಿರಿಷ್
‘ಹೈದರಾಬಾದ್ ಲೌಡ್ ಸ್ಪೀಕರ್ ನಿಯಮಗಳು (1963)’ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸಲು ಅನುಮತಿ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸಿದರೆ ಪೊಲೀಸ್ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆದರೆ ತಮ್ಮ ಏರಿಯಾದಲ್ಲಿ ನಿಯಮ ಉಲ್ಲಂಘನೆ ಆಗಿದೆ ಎಂದು ಸೋಶಿಯಲ್ ಮೀಡಿಯಾ ಮೂಲಕ ಅಲ್ಲು ಶಿರಿಷ್ ಆರೋಪ ಮಾಡಿದ್ದಾರೆ.

ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಅವರ ಸಹೋದರ ಹಾಗೂ ನಟ ಅಲ್ಲು ಶಿರಿಷ್ ಅವರು ತಮ್ಮ ಮನೆಯ ಸಮೀಪವಿರುವ ದೇವಸ್ಥಾನವೊಂದರಲ್ಲಿ ತಡರಾತ್ರಿ ಪೈಪೋಟಿಯಿಂದ ಧ್ವನಿವರ್ಧಕ ಬಳಸಲಾಗುತ್ತಿದೆಯೆಂದು ಆರೋಪಿಸಿ ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ. ಮಧ್ಯರಾತ್ರಿ 2ರಿಂದ 3 ಗಂಟೆಯವರೆಗೂ ಕರ್ಕಶ ಶಬ್ದ ಬರುವುದರಿಂದ ತಮಗೆ ಹಾಗೂ ನಿವಾಸಿಗಳಿಗೆ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಎಕ್ಸ್ (ಟ್ವಿಟರ್) ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಹೈದರಾಬಾದ್‌ನ ಶೇಕ್‌ಪೇಟ್‌ನಲ್ಲಿರುವ ‘ಅಪರ್ಣಾ ಒನ್’ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಅಲ್ಲು ಶಿರಿಷ್, ಸೆಪ್ಟೆಂಬರ್ 27ರಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹೈದರಾಬಾದ್ ನಗರ ಪೊಲೀಸರನ್ನು ಟ್ಯಾಗ್ ಮಾಡಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಗೌರವಾನ್ವಿತ ಹೈದರಾಬಾದ್ ಪೊಲೀಸರೇ, ನಾನು ಶೇಕ್‌ಪೇಟ್‌ನ ಅಪರ್ಣಾ ಒನ್ ನಿವಾಸಿ. ಕಳೆದ ಕೆಲವು ದಿನಗಳಿಂದ ವಿನೋಬಾ ನಗರದಲ್ಲಿರುವ ಹನುಮಂತನ ದೇವಸ್ಥಾನದಲ್ಲಿ ನಿಯಮಾವಳಿ ಮೀರಿದ ಡೆಸಿಬಲ್ ಮಟ್ಟದಲ್ಲಿ ತಡರಾತ್ರಿ 2-3 ಗಂಟೆಯವರೆಗೆ ಜೋರಾಗಿ ಸಂಗೀತ ಹಾಕಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
ಗಣೇಶ ವಿಸರ್ಜನೆ ಮುಗಿದರೂ ನಿಲ್ಲದ ಕಿರಿಕಿರಿ
ಈ ಕುರಿತು ಸ್ಥಳೀಯ ಫಿಲ್ಮ್ ನಗರ ಪೊಲೀಸ್ ಠಾಣೆಗೆ ಈಗಾಗಲೇ ದೂರು ನೀಡಲಾಗಿತ್ತು ಎಂದು ಶಿರಿಷ್ ತಿಳಿಸಿದ್ದಾರೆ. ಗಣೇಶ ಚತುರ್ಥಿ ಆಚರಣೆಯ ಭಾಗವಾಗಿ ಗಣೇಶ ವಿಸರ್ಜನೆ (ಸೆಪ್ಟೆಂಬರ್ 25) ಮುಗಿಯುವವರೆಗೆ ತಾಳ್ಮೆಯಿಂದ ಇರುವಂತೆ ಪೊಲೀಸರು ಕೋರಿದ್ದರು. ಆದರೆ ಹಬ್ಬದ ಸಂಭ್ರಮ ಮುಗಿದ ನಂತರವೂ ದೇವಸ್ಥಾನದಲ್ಲಿ ಧ್ವನಿವರ್ಧಕದ ಶಬ್ದ ನಿಂತಿಲ್ಲ ಎಂದು ಶಿರಿಷ್ ಅವರು ಕಿಡಿಕಾರಿದ್ದಾರೆ.
Respected @hydcitypolice . I’m a resident of Aparna One, Shaikpet. For the last few days the Hanuman temple at Vinobha Nagar is playing loud music, beyond allowed decibels till night 2/3am. I complained the Film Nagar PS.
They asked us to bear till 25th Sept as its Ganesh… pic.twitter.com/ggJp4U4hdU
— Allu Sirish (@AlluSirish) September 27, 2026
‘ನಮ್ಮ ಸೊಸೈಟಿಯಲ್ಲಿರುವ ಹಿರಿಯ ನಾಗರಿಕರು, ಮಕ್ಕಳು ಮತ್ತು ಉದ್ಯೋಗಿಗಳು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ಹಲವು ದೂರುಗಳನ್ನು ನೀಡಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ದಯವಿಟ್ಟು ಈ ಸಮಸ್ಯೆಯನ್ನು ಪರಿಹರಿಸಿ’ ಎಂದು ಶಿರಿಷ್ ಅವರು ವಿನಂತಿಸಿದ್ದಾರೆ. ಇದಕ್ಕೆ ಹೈದರಾಬಾದ್ ಪೊಲೀಸರು ತಕ್ಷಣ ಸ್ಪಂದಿಸಿದ್ದಾರೆ.
ಇದನ್ನೂ ಓದಿ: ಅಲ್ಲು ಅರ್ಜುನ್ ಅಭಿಮಾನಿಗಳಿಂದ ಸಮಾಜಮುಖಿ ಕೆಲಸ; 3 ಲಕ್ಷ ಯುವತಿಯರಲ್ಲಿ ಜಾಗೃತಿ
ಅಲ್ಲು ಶಿರಿಷ್ ಅವರ ಪೋಸ್ಟ್‌ಗೆ ಹೈದರಾಬಾದ್ ನಗರ ಪೊಲೀಸ್ ಇಲಾಖೆ ತಕ್ಷಣ ಸ್ಪಂದಿಸಿದ್ದು, ‘ಈ ವಿಷಯವನ್ನು ಸೂಕ್ತ ಕ್ರಮಕ್ಕಾಗಿ ಫಿಲ್ಮ್ ನಗರ ಪೊಲೀಸ್ ಠಾಣಾಧಿಕಾರಿಗೆ ರವಾನಿಸಲಾಗಿದೆ’ ಎಂದು ಟ್ವೀಟ್ ಮಾಡಿದೆ. ಪೊಲೀಸರ ಶೀಘ್ರ ಪ್ರತಿಕ್ರಿಯೆಗೆ ಶಿರಿಷ್ ಧನ್ಯವಾದ ತಿಳಿಸಿದ್ದಾರೆ. ವರದಿಗಳ ಪ್ರಕಾರ, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮತ್ತು ಧ್ವನಿವರ್ಧಕದ ಶಬ್ದವನ್ನು ತಕ್ಷಣವೇ ಕಡಿಮೆಗೊಳಿಸುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಸೂಚನೆ ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:14 pm, Mon, 28 September 26




