ಕನ್ನಡತಿ, ನಟಿ ಶ್ರೀಲೀಲಾಗೆ ತೆಲುಗು ನಟನ ಹೊಗಳಿಕೆ ಸುರಿಮಳೆ, ನಟಿಯ ಟ್ಯಾಲೆಂಟ್ಗೆ ಫಿದಾ
Sreeleela: ಕನ್ನಡದ ನಟಿ ಶ್ರೀಲೀಲಾ ತೆಲುಗಿನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಶ್ರೀಲೀಲಾ ಪ್ರತಿಭೆಯನ್ನು ತೆಲುಗು ಚಿತ್ರರಂಗದ ಮಂದಿ ಕೊಂಡಾಡುತ್ತಿದ್ದಾರೆ. ಶ್ರೀಲೀಲಾರ ಬಹುಮುಖ ಪ್ರತಿಭೆ ಬಗ್ಗೆ ತೆಲುಗು ನಟ ನಿತಿನ್ ಹಾಡಿ ಹೊಗಳಿದ್ದಾರೆ.

ಕನ್ನಡತಿ, ನಟಿ ಶ್ರೀಲೀಲಾ (Sreeleela) ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಲೇ ಇದ್ದಾರೆ. ತೆಲುಗಿನ ಸ್ಟಾರ್ ನಟರಾದ ಮಹೇಶ್ ಬಾಬು, ಪವನ್ ಕಲ್ಯಾಣ್, ನಂದಮೂರಿ ಬಾಲಕೃಷ್ಣ ಇನ್ನೂ ಹಲವರು ಸ್ಟಾರ್ ನಟರ ಸಿನಿಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ. ನಟಿಗೆ ದೊಡ್ಡ ಅಭಿಮಾನಿ ವರ್ಗವೂ ಸಹ ತೆಲುಗು ರಾಜ್ಯಗಳಲ್ಲಿ ಸೃಷ್ಟಿಯಾಗಿದೆ. ತೆಲುಗು ಚಿತ್ರರಂಗದವರು ಸಹ ಶ್ರೀಲೀಲಾರನ್ನು ತಮ್ಮವರೆಂಬಂತೆ ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲದೆ ನಟಿಯ ಬಹುಮುಖ ಪ್ರತಿಭೆಗೆ ಫಿದಾ ಆಗಿದ್ದಾರೆ.
ಶ್ರೀಲೀಲಾ ನಟನೆಯ ‘ಎಕ್ಸ್ಟ್ರಾ ಆರ್ಡಿನರಿ ಮ್ಯಾನ್’ ಹೆಸರಿನ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ‘ಜಯಂ’ ಖ್ಯಾತಿಯ ನಿತಿನ್ ನಾಯಕ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಇತ್ತೀಚೆಗಷ್ಟೆ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ನಟ ನಿತಿನ್ ಚಿತ್ರತಂಡದ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತಾ, ಅಂತಿಮವಾಗಿ ಶ್ರೀಲೀಲಾ ಬಗ್ಗೆ ಕೆಲವು ವಿಶೇಷ ಮಾತುಗಳನ್ನಾಡಿದರು.
‘ಶ್ರೀಲೀಲಾ ಬಹಳ ಬ್ಯುಸಿ ನಟಿ, ತಾನು ಸಾಕಷ್ಟು ಬ್ಯುಸಿಯಾಗಿದ್ದರೂ ಸಹ ನಮಗೆ ಡೇಟ್ಸ್ ನೀಡಿದ್ದಕ್ಕೆ ಅವರಿಗೆ ಹಾಗೂ ಅವರ ತಾಯಿಯವರಿಗೆ ನಾವು ಋಣಿ’ ಎಂದು ನಿತಿನ್, ಮಾತು ಮುಂದುವರೆಸಿ, ‘ಮೊದಲಿಗೆ ಶ್ರೀಲೀಲಾ ನಮ್ಮ ಸೆಟ್ಗೆ ಬಂದಾಗ ನಾನು ಯಾರೋ ಹೊಸ ಹುಡುಗಿ ಬಂದಿದ್ದಾರೆ ಬಿಡು ಎಂದುಕೊಂಡಿದ್ದೆ, ನಾನು ನಾಯಕ ಬೇರೆ, ಡ್ಯಾನ್ಸ್ ಕೂಡ ಚೆನ್ನಾಗಿ ಬರುತ್ತೆ ಎಂದೆಲ್ಲ ಸಹಜವಾದ ಒಂದು ಹಮ್ಮು ನನ್ನಲ್ಲಿತ್ತು. ಆದರೆ ಶ್ರೀಲೀಲಾ ಬಗ್ಗೆ ತಿಳಿದುಕೊಂಡ ಬಳಿಕ ನಾನು ಏನೂ ಅಲ್ಲ ಎನಿಸಿತು’ ಎಂದಿದ್ದಾರೆ.
ಇದನ್ನೂ ಓದಿ:ಟಾಲಿವುಡ್ನಿಂದ ನೇರ ಬಾಲಿವುಡ್ಗೆ ಹಾರಲಿದ್ದಾರೆಯೇ ನಟಿ ಶ್ರೀಲೀಲಾ?
‘ಶ್ರೀಲೀಲಾ ಸುಂದರವಾಗಿದ್ದಾರೆ, ಒಳ್ಳೆಯ ನಟಿ, ಬಹಳ ಒಳ್ಳೆಯ ಡ್ಯಾನ್ಸರ್, ಆಕೆ ಎಂಬಿಬಿಎಸ್ ಕಲಿಯುತ್ತಿದ್ದಾರೆ. ಕೂಚುಪುಡಿ ಕಲಿತಿದ್ದಾರೆ, ಭರತನಾಟ್ಯಂ ಕಲಿತಿದ್ದಾರೆ, ವೀಣೆ ನುಡಿಸುವುದು ಬರುತ್ತದೆ. ರಾಜ್ಯಮಟ್ಟದ ಹಾಕಿ ಮತ್ತು ಈಜು ಚಾಂಪಿಯನ್ ಸಹ ಆಗಿದ್ದಾರೆ ಶ್ರೀಲೀಲಾ ಇದನ್ನೆಲ್ಲ ಹೇಳುತ್ತಿರುವಾಗಲೇ ನನಗೆ ಶಾಕ್ ಆಗಿ, ಅಮ್ಮ ಸಾಕು ನಿಲ್ಲಿಸು ನನ್ನಿಂದ ತಡೆದುಕೊಳ್ಳಲಾಗುತ್ತಿಲ್ಲ ಎಂದೆ. ಶ್ರೀಲೀಲಾ ಅದನ್ನೆಲ್ಲ ಹೇಳುತ್ತಿರುವಾಗ, ನನ್ನ ಬಗ್ಗೆ ನನಗೇ ನಾಚಿಕೆಯಾಯ್ತು’ ಎಂದಿದ್ದಾರೆ ನಿತಿನ್.
‘‘ಸಣ್ಣ ಹುಡುಗಿ ಶ್ರೀಲೀಲಾ, ಈಗಲೇ ಆಕೆಗೆ ಇಷ್ಟೋಂದು ಪ್ರತಿಭೆ ಇದೆ. ಸಿನಿಮಾದಲ್ಲಿ ನಾನು ‘ಎಕ್ಸ್ಟ್ರಾರ್ಡಿನರಿ ಮ್ಯಾನ್’, ಆದರೆ ನಿಜ ಜೀವನದಲ್ಲಿ ‘ಎಕ್ಸ್ಟ್ರಾರ್ಡಿನರಿ ವುಮೆನ್’ ಶ್ರೀಲೀಲಾ. ನಿಮ್ಮೆಲ್ಲರ ಪ್ರೀತಿ ಆ ಹುಡುಗಿಯ ಮೇಲಿರಲಿ’ ಎಂದು ನಿತಿನ್, ಶ್ರೀಲೀಲಾಗೆ ಶುಭ ಹಾರೈಸಿದರು.
ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಶ್ರೀಲೀಲಾ, ‘‘ಎಕ್ಸ್ಟ್ರಾರ್ಡಿನರಿ ಮ್ಯಾನ್’ ಸಿನಿಮಾದ ಟೀಸರ್, ಹಾಡುಗಳಿಗೆ ಅದ್ಭುತ ಪ್ರತಿಕ್ರಿಯೆ ನೀಡಿದ ‘ಎಕ್ಸ್ಟ್ರಾರ್ಡಿನರಿ ಪ್ರೇಕ್ಷಕರಿಗೆ’ ನನ್ನ ಧನ್ಯವಾದಗಳು ಎಂದರು. ಜೊತೆಗೆ ಸಿನಿಮಾದ ನಿರ್ದೇಶಕ, ನಾಯಕ ನಟ ನಿತಿನ್ ನೀಡಿದ ಸಹಕಾರವನ್ನು, ನೀಡಿದ ಮಾರ್ಗದರ್ಶನವನ್ನು ಶ್ರೀಲೀಲಾ ಸ್ಮರಿಸಿದರು.
ಕಳೆದ ಎರಡೂ ವರೆ ತಿಂಗಳ ಅವಧಿಯಲ್ಲಿ ಶ್ರೀಲೀಲಾ ನಟಿಸಿರುವ ಮೂರು ತೆಲುಗು ಸಿನಿಮಾಗಳು ಬಿಡುಗಡೆ ಆಗಿವೆ. ಇದೀಗ ಇದೇ ಶುಕ್ರವಾರ ‘ಎಕ್ಸ್ಟ್ರಾರ್ಡಿನರಿ ಮ್ಯಾನ್’ ಸಿನಿಮಾ ಬಿಡುಗಡೆ ಆಗಲಿದೆ. ಅದರ ಬಳಿಕ ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’, ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳು ತೆರೆಗೆ ಬರಲಿವೆ. ಅವುಗಳ ಜೊತೆಗೆ ವಿಜಯ್ ದೇವರಕೊಂಡ ಜೊತೆಗೆ ಹೊಸ ಸಿನಿಮಾವನ್ನು ಶ್ರೀಲೀಲಾ ಒಪ್ಪಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ