ಬಾಲಿವುಡ್ ಚಿತ್ರಕ್ಕಾಗಿ ಭರ್ಜರಿ ಸಂಭಾವನೆ ಪಡೆದ ದಕ್ಷಿಣ ಭಾರತದ ಸ್ಟಾರ್​ಗಳು

| Updated By: ಮದನ್​ ಕುಮಾರ್​

Updated on: Sep 03, 2023 | 3:36 PM

ದಕ್ಷಿಣ ಭಾರತದ ಕಲಾವಿದರ ನಟನೆ ನೋಡಿ ಹಿಂದಿ ಚಿತ್ರರಂಗದ ಅನೇಕರು ಅವರಿಗೆ ಚಾನ್ಸ್ ನೀಡಿದ್ದಾರೆ. ವಿಜಯ್ ಸೇತುಪತಿ, ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕ ಕಲಾವಿದರು ಈ ಸಾಲಿನಲ್ಲಿದ್ದಾರೆ. ಇವರಿಗೆ ದೊಡ್ಡ ಮೊತ್ತದ ಸಂಭಾವನೆ ಕೂಡ ನೀಡಲಾಗಿದೆ.

ಬಾಲಿವುಡ್ ಚಿತ್ರಕ್ಕಾಗಿ ಭರ್ಜರಿ ಸಂಭಾವನೆ ಪಡೆದ ದಕ್ಷಿಣ ಭಾರತದ ಸ್ಟಾರ್​ಗಳು
ದಕ್ಷಿಣ ಭಾರತದ ಸೆಲೆಬ್ರಿಟಿಗಳು
Follow us on

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾಗಳ (South Cinema) ಮಧ್ಯೆ ಇದ್ದ ಅಂತರ ಕಡಿಮೆ ಆಗುತ್ತಿದೆ. ದಕ್ಷಿಣದ ಸಿನಿಮಾಗಳು ಹಿಂದಿಗೆ ಡಬ್ ಆಗಿ ರಿಲೀಸ್ ಆಗುತ್ತಿವೆ. ಅದೇ ರೀತಿ ದಕ್ಷಿಣದ ಅನೇಕ ಸೆಲೆಬ್ರಿಟಿಗಳು ಬಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ದಕ್ಷಿಣ ಭಾರತದ ಕಲಾವಿದರ (South Indian Celebrities) ನಟನೆ ನೋಡಿ ಹಿಂದಿ ಚಿತ್ರರಂಗದ ಅನೇಕರು ಅವರಿಗೆ ಚಾನ್ಸ್ ನೀಡಿದ್ದಾರೆ. ವಿಜಯ್ ಸೇತುಪತಿ, ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕ ಕಲಾವಿದರು ಈ ಸಾಲಿನಲ್ಲಿದ್ದಾರೆ. ವಿಶೇಷ ಎಂದರೆ ಇವರಿಗೆ ದೊಡ್ಡ ಮೊತ್ತದ ಸಂಭಾವನೆ ಕೂಡ ನೀಡಲಾಗಿದೆ. ಆ ರೀತಿ ಹಿಂದಿ ಸಿನಿಮಾಗಳಲ್ಲಿ ನಟಿಸಿ ದೊಡ್ಡ ಭರ್ಜರಿ ಸಂಭಾವನೆ (Remuneration) ಪಡೆದ ಸೆಲೆಬ್ರಿಟಿಗಳ ಬಗ್ಗೆ ಇಲ್ಲಿದೆ ವಿವರ.

ವಿಜಯ್ ಸೇತುಪತಿ

ವಿಜಯ್ ಸೇತುಪತಿ ಅವರು ದಕ್ಷಿಣ ಭಾರತದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ‘ಫರ್ಜಿ’ ವೆಬ್ ಸೀರಿಸ್ ಮೂಲಕ ಹಿಂದಿ ಚಿತ್ರರಂಗದವರಿಗೆ ಪರಿಚಯಗೊಂಡರು. ಈಗ ‘ಜವಾನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಶಾರುಖ್​ ಖಾನ್ ವಿರುದ್ಧ ಅವರು ತೊಡೆ ತಟ್ಟಿದ್ದಾರೆ. ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡಲು ಅವರು 21 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಈ ಚಿತ್ರ ಸೆಪ್ಟೆಂಬರ್ 7ರಂದು ರಿಲೀಸ್ ಆಗಲಿದೆ.

ನಯನತಾರಾ

ನಯನತಾರಾ ಅವರು ಇಷ್ಟು ವರ್ಷ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದರು. ಆದರೆ, ಇದೇ ಮೊದಲ ಬಾರಿಗೆ ಅವರು ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ‘ಜವಾನ್’ ಸಿನಿಮಾದಲ್ಲಿ ಅವರು ಮುಖ್ಯಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸಲು ಅವರಿಗೆ 11 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ.

ಇದನ್ನೂ ಓದಿ: ‘ಖುಷಿ’ ಚಿತ್ರಕ್ಕೆ ವಿಜಯ್​ ದೇವರಕೊಂಡ-ಸಮಂತಾ ಪಡೆದ ಸಂಭಾವನೆ ಎಷ್ಟು? ಇಬ್ಬರ ಸಂಬಳದ ನಡುವೆ ಇದೆ ದೊಡ್ಡ ಅಂತರ

ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ ಅವರು ‘ಗೀತ ಗೋವಿಂದಂ’, ‘ಅರ್ಜುನ್ ರೆಡ್ಡಿ’ ಅಂಥ ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು. ಅವರು ಪುರಿ ಜಗನ್ನಾಥ್ ನಿರ್ದೇಶನದ ‘ಲೈಗರ್’ ಚಿತ್ರದ ಮೂಲಕ ಬಾಲಿವುಡ್​ಗೆ ಕಾಲಿಟ್ಟರು. ಈ ಚಿತ್ರದಲ್ಲಿ ನಟಿಸಲು ಅವರು 35 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಈ ಚಿತ್ರಕ್ಕಾಗಿ ವಿಜಯ್ ಮೂರು ವರ್ಷ ಮುಡಿಪಿಟ್ಟಿದ್ದರು. ಅಲ್ಲದೆ ಜಿಮ್​ನಲ್ಲಿ ಸಾಕಷ್ಟು ವರ್ಕೌಟ್ ಮಾಡಿದ್ದರು.

ನಾಗ ಚೈತನ್ಯ

ನಾಗ ಚೈತನ್ಯ ಅವರು ಅಕ್ಕಿನೇನಿ ನಾಗಾರ್ಜುನ ಅವರ ಮಗ. ಹೀಗಾಗಿ ಚಿತ್ರರಂಗಕ್ಕೆ ಬರೋಕೆ ಅವರಿಗೆ ಸುಲಭದಲ್ಲಿ ಅವಕಾಶ ದೊರೆಯಿತು. ಅವರು ಆಮಿರ್ ಖಾನ್​ ಹಾಗೂ ಕರೀನಾ ಕಪೂರ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಇದಕ್ಕಾಗಿ ಅವರು ಪಡೆದಿದ್ದು 6 ಕೋಟಿ ರೂಪಾಯಿ. ಈ ಚಿತ್ರ ಸೋತಿದೆ.

ಇದನ್ನೂ ಓದಿ: ದುಬಾರಿ ಸಂಭಾವನೆ ಪಡೆವ ಯುವ ನಟಿ ಕೃತಿ ಶೆಟ್ಟಿ: ಪ್ರತಿ ಸಿನಿಮಾಕ್ಕೆ ಎಷ್ಟು?

ಶಾಲಿನಿ ಪಾಂಡೆ

‘ಅರ್ಜುನ್ ರೆಡ್ಡಿ’ ಸಿನಿಮಾದ ಮೂಲಕ ದೊಡ್ಡ ಮಟ್ಟದಲ್ಲಿ ಹೆಸರು ಪಡೆದವರು ಶಾಲಿನಿ ಪಾಂಡೆ. ಆ ಬಳಿಕ ಅವರಿಗೆ ಹೇಳಿಕೊಳ್ಳುವಂಥ ಗೆಲುವು ಸಿಗಲೇ ಇಲ್ಲ. ಆದಾಗ್ಯೂ ಅವರು ಸುಮ್ಮನೆ ಕುಳಿತಿಲ್ಲ. ಹೊಸ ಹೊಸ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ‘ಜಯೇಶ್ ಭಾಯ್ ಜೋರ್ದಾರ್’ ಸಿನಿಮಾದಲ್ಲಿ ಅವರು ರಣವೀರ್ ಸಿಂಗ್​ಗೆ ಜೊತೆಯಾಗಿ ನಟಿಸಿದ್ದರು. ಈ ಚಿತ್ರಕ್ಕೆ ಅವರು 2.5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು.

ಧನುಶ್

ತಮಿಳು ನಟ ಧನುಶ್ ಅವರು ತಮ್ಮ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸೋನಂ ಕಪೂರ್ ನಟನೆಯ ‘ರಾಂಜಾನಾ’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಈ ಚಿತ್ರಕ್ಕೆ ಅವರು 7 ಕೋಟಿ ರೂಪಾಯಿ ಪಡೆದಿದ್ದರು. ಸದ್ಯ ಹಲವು ತಮಿಳು ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ.

ಇದನ್ನೂ ಓದಿ: ‘ಜೈಲರ್’ ಗೆದ್ದ ಖುಷಿಯಲ್ಲಿ ರಜನಿಗೆ 100 ಕೋಟಿ ರೂ. ಚೆಕ್ ಕೊಟ್ಟ ಕಲಾನಿಧಿ ಮಾರನ್; ಒಟ್ಟೂ ಸಂಭಾವನೆ ಎಷ್ಟು?

ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡದ ನಟಿ. ಸದ್ಯ ಬಾಲಿವುಡ್​, ಕಾಲಿವುಡ್, ಟಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟಿಸಿದ ‘ಮಿಷನ್ ಮಜ್ನು’ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ಅವರ ಪಾತ್ರಕ್ಕೆ ತೂಕ ಇದೆ. ಈ ಚಿತ್ರದಲ್ಲಿ ನಟಿಸೋಕೆ ಅವರು 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ. ‘ಅನಿಮಲ್’ ಚಿತ್ರಕ್ಕೂ ದೊಡ್ಡ ಮೊತ್ತದ ಹಣ ಪಡೆದಿದ್ದಾರೆ.

ಜೂನಿಯರ್ ಎನ್​ಟಿಆರ್

‘ಆರ್​ಆರ್​ಆರ್’ ಸಿನಿಮಾ ಮೂಲಕ ಭರ್ಜರಿ ಖ್ಯಾತಿ ಪಡೆದಿದ್ದಾರೆ ಜೂನಿಯರ್ ಎನ್​ಟಿಆರ್. ಬಾಲಿವುಡ್​ನಲ್ಲೂ ಅವರಿಗೆ ಬೇಡಿಕೆ ಹೆಚ್ಚಿದೆ. ಅವರು ‘ವಾರ್ 2’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರು ಈ ಚಿತ್ರದಲ್ಲಿ ನಟಿಸಲು 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ‘ಆರ್​ಆರ್​ಆರ್’ ಚಿತ್ರಕ್ಕಾಗಿ 45 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದರು. ಸಾಮಾನ್ಯವಾಗಿ ಅವರು ಪ್ರತಿ ಚಿತ್ರಕ್ಕೆ 30 ಕೋಟಿ ರೂಪಾಯಿ ಕೇಳುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.