
ಪ್ರಭಾಸ್ (Prabhas) ವೃತ್ತಿ ಜೀವನದಲ್ಲೇ ದೊಡ್ಡ ಫ್ಲಾಪ್ ಸಿನಿಮಾ ‘ಆದಿಪುರುಷ್’. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮೊದಲ ವಾರ ಹಣ ಗಳಿಸಿತ್ತಾದರೂ ಸಿನಿಮಾದ ಗುಣಮಟ್ಟದ ಬಗ್ಗೆ ಬಹಳ ಕೆಟ್ಟ ವಿಮರ್ಶೆಗಳನ್ನು ಪ್ರಭಾಸ್ ಹಾಗೂ ಇಡೀ ಚಿತ್ರತಂಡ ಎದುರಿಸಬೇಕಾಯ್ತು. ಸಿನಿಮಾ ವಿಮರ್ಶಕರುಗಳಂತೂ ಸಿನಿಮಾ ಬಗ್ಗೆ ಬಹಳ ನೆಗೆಟಿವ್ ವಿಮರ್ಶೆಗಳನ್ನು ನೀಡಿದ್ದರು. ಬಾಲಿವುಡ್ನ ಹಿರಿಯ ಟ್ರೇಡ್ ಅನಲಿಸ್ಟ್, ಸಿನಿಮಾ ಪತ್ರಕರ್ತರೂ ಆಗಿರುವ ತರಣ್ ಆದರ್ಶ್, ‘ಆದಿಪುರುಷ್’ ಸಿನಿಮಾದ ಬಗ್ಗೆ ಪ್ರಭಾಸ್ ಜೊತೆಗೆ ನಡೆದ ಮಾತುಕತೆಯ ಬಗ್ಗೆ ಪಾಡ್ಕಾಸ್ಟ್ ಒಂದರಲ್ಲಿ ಮಾತನಾಡಿದ್ದಾರೆ.
‘ಆದಿಪುರುಷ್’ ಸಿನಿಮಾದ ಟೀಸರ್ ಬಿಡುಗಡೆ ಆದಾಗ ತರಣ್ ಆದರ್ಶ್ ಪ್ರಭಾಸ್ ಜೊತೆಗೆ ಮಾತನಾಡಿದ್ದರಂತೆ. ‘ನಿಮ್ಮ ಸಿನಿಮಾದ ಟೀಸರ್ ನನಗೆ ಸ್ವಲ್ಪವೂ ಹಿಡಿಸಲಿಲ್ಲ’ ಎಂದರಂತೆ. ಅದಕ್ಕೆ ಪ್ರಭಾಸ್, ‘ಕ್ಷಮಿಸಿ, ನೀವು ಮುಂದಿನ ಬಾರಿ ‘ಆದಿಪುರುಷ್’ ಸಿನಿಮಾ ಅಥವಾ ಸಿನಿಮಾದ ಯಾವುದೇ ಕಂಟೆಂಟ್ ನೋಡುವ ವೇಳೆಗೆ ನಾವು ಅದನ್ನು ಸರಿಪಡಿಸಿ ಇನ್ನಷ್ಟು ಉತ್ತಮಗೊಳಿಸುತ್ತೇವೆ’ ಎಂದಿದ್ದರಂತೆ.
ಮುಂದುವರೆದು ಮಾತನಾಡಿರುವ ತರಣ್ ಆದರ್ಶ್, ‘ನಾನು ಟೀಸರ್ ಚೆನ್ನಾಗಿಲ್ಲ ಎಂದು ಯಾವುದೇ ಬಾಲಿವುಡ್ ಸ್ಟಾರ್ಗಳ ಜೊತೆಗೆ ನಟರ ಎದುರು ಹೇಳಿದ್ದರೆ ಇಲ್ಲ ನಮ್ಮ ಪ್ರಾಡಕ್ಟ್ ಹಾಗಿದೆ, ಹೀಗೆದೆ ಎಂದೆಲ್ಲ ಹೇಳಿಕೊಳ್ಳುತ್ತಿದ್ದರು ಅಥವಾ ಜಗಳಕ್ಕೆ ನಿಲ್ಲುತ್ತಿದ್ದರು, ಆದರೆ ಪ್ರಭಾಸ್ ಬಹಳ ವಿನಯದಿಂದ ತಪ್ಪನ್ನು ಸರಿ ಮಾಡುವುದಾಗಿ ಹೇಳಿದರು. ಆ ಬಗ್ಗೆ ಕೆಲಸ ಸಹ ಮಾಡಿದರು’ ಎಂದಿದ್ದಾರೆ.
ಅದೇ ಸಂದರ್ಶನದಲ್ಲಿ ಮಾತನಾಡಿರುವ ತರಣ್ ಆದರ್ಶ್, ‘ಆದಿಪುರುಷ್ ಕೆಟ್ಟ ಸಿನಿಮಾ ಮಾತ್ರವಲ್ಲ, ಅತ್ಯಂತ ಕೆಟ್ಟ ಸಿನಿಮಾ. ಅಂಥಹಾ ಸಿನಿಮಾಗಳಿಂದ ಬಾಲಿವುಡ್ನ ಇಮೇಜು ಹಾಳಾಗುತ್ತದೆ. ಅಂಥಹಾ ಸಿನಿಮಾಗಳು ಸೋಲಲೇ ಬೇಕಿತ್ತು, ಸೋತಿತು. ಆ ಸಿನಿಮಾ ಸೋತಿದ್ದು, ಚಿತ್ರರಂಗದ ದೃಷ್ಟಿಯಿಂದ ಬಹಳ ಒಳ್ಳೆಯದು’ ಎಂದಿದ್ದಾರೆ ತರಣ್ ಆದರ್ಶ್.
ಇದನ್ನೂ ಓದಿ:ಪ್ರಭಾಸ್ ಜೊತೆಗೆ ಸಿನಿಮಾ ಯಾವಾಗ: ಸಂದೀಪ್ ರೆಡ್ಡಿ ಕೊಟ್ಟರು ಉತ್ತರ
‘ಆದಿಪುರುಷ್’ ಸಿನಿಮಾಕ್ಕೆ ಭಾರಿ ದೊಡ್ಡ ಬಂಡವಾಳ ಹೂಡಲಾಗಿತ್ತು, ಸಿನಿಮಾ ಅನ್ನು ಓಂ ರಾವತ್ ನಿರ್ದೇಶನ ಮಾಡಿದ್ದರು. ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳನ್ನು ಪ್ರಭಾಸ್ ಸೇರಿದಂತೆ ಅವರ ಅಭಿಮಾನಿಗಳು ಸಹ ಇರಿಸಿಕೊಂಡಿದ್ದರು. ಆದರೆ ಸಿನಿಮಾದ ಕಳಪೆ ಸಿಜಿಐ, ಕೆಟ್ಟ ಮೇಕಪ್, ಕಾಸ್ಟ್ಯೂಮ್, ಕೆಟ್ಟ ಸಂಭಾಷಣೆ, ತಾಂತ್ರಿಕವಾಗಿ ಗಟ್ಟಿಯಿಲ್ಲದಿರುವುದು ಹೀಗೆ ಹಲವು ಕಾರಣಗಳಿಂದ ಸಿನಿಮಾ ಧಾರುಣವಾಗಿ ಸೋತಿದ್ದು ಮಾತ್ರವಲ್ಲದೆ ವಿವಾದಕ್ಕೆ ಸಹ ಗುರಿಯಾಯ್ತು, ಸಿನಿಮಾ ವಿರುದ್ಧ ಹಲವೆಡೆ ದೂರುಗಳು ದಾಖಲಾದವು, ಸಿನಿಮಾದ ಸಂಭಾಷಣೆಕಾರ ಕೊನೆಗೆ ಕ್ಷಮೆ ಸಹ ಕೇಳಿದರು.
ಪ್ರಭಾಸ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಟನೆಯ ‘ರಾಜಾ ಸಾಬ್’ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ‘ಫೌಜಿ’ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಅದಾದ ಬಳಿಕ ಸೆಪ್ಟೆಂಬರ್ ತಿಂಗಳಲ್ಲಿ ‘ಸ್ಪಿರಿಟ್’ ಸಿನಿಮಾ ಪ್ರಾರಂಭ ಆಗಲಿದೆ. ಅದರ ಜೊತೆಗೆ ‘ಸಲಾರ್ 2’ ಸಹ ಪ್ರಾರಂಭ ಆಗಲಿದೆ. ಅದಾದ ಬಳಿಕ ‘ಕಲ್ಕಿ 2898 ಎಡಿ’ ಸಿನಿಮಾ ಪ್ರಾರಂಭ ಆಗಲಿದೆ. ಅದರ ಬಳಿಕ ಪ್ರಶಾಂತ್ ವರ್ಮಾ ನಿರ್ದೇಶಿಸಲಿರುವ ಹೊಂಬಾಳೆ ನಿರ್ಮಾಣದ ಸಿನಿಮಾನಲ್ಲಿ ಪ್ರಭಾಸ್ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ