ಕನ್ನಡ ಸಿನಿಮಾ ಟೀಕಿಸಲು ಬಂದ ಸಂದರ್ಶಕನಿಗೆ ಉಪೇಂದ್ರ ಖಡಕ್ ಉತ್ತರ

ತೆಲುಗು ಸಂದರ್ಶಕರೊಬ್ಬರ ಪ್ರಶ್ನೆಗೆ ಉಪೇಂದ್ರ ಅವರು ಕನ್ನಡ ಚಿತ್ರರಂಗದ ದೊಡ್ಡ ಬಜೆಟ್ ಸಿನಿಮಾಗಳ ಇತಿಹಾಸವನ್ನು ಅನಾವರಣಗೊಳಿಸಿದ್ದಾರೆ.ವಿಷ್ಣುವರ್ಧನ್ ಕಾಲದಲ್ಲೇ ಸಿಂಗಾಪುರದಲ್ಲಿ ಚಿತ್ರೀಕರಣಗೊಂಡ ರಾಜಾ ಕುಳ್ಳದಂತಹ ಅದ್ಧೂರಿ ಸಿನಿಮಾಗಳು ಬಂದಿದ್ದವು ಎಂದು ಉಪ್ಪಿ ವಿವರಿಸಿದರು. ಕಾಂತಾರ, ಕೆಜಿಎಫ್​ಗೂ ಮುನ್ನವೇ ಕನ್ನಡದಲ್ಲಿ ದೊಡ್ಡ ಬಜೆಟ್ ಚಿತ್ರಗಳು ಸಿದ್ಧವಾಗಿದ್ದವು ಎಂಬ ಸತ್ಯವನ್ನು ತೆರೆದಿಟ್ಟರು.

ಕನ್ನಡ ಸಿನಿಮಾ ಟೀಕಿಸಲು ಬಂದ ಸಂದರ್ಶಕನಿಗೆ ಉಪೇಂದ್ರ ಖಡಕ್ ಉತ್ತರ
ಉಪೇಂದ್ರ
Edited By:

Updated on: Nov 22, 2025 | 2:55 PM

ಕನ್ನಡದಲ್ಲಿ ಸಾಕಷ್ಟು ಅದ್ದೂರಿ ಬಜೆಟ್​ ಸಿನಿಮಾಗಳು ಬಂದಿವೆ. ರಾಜ್​ಕುಮಾರ್, ವಿಷ್ಣುವರ್ಧನ್, ಅಂಬರೀಷ್, ರವಿಚಂದ್ರನ್ ಅವರು ಆಗಿನ ಕಾಲದಲ್ಲಿ ಸಾಕಷ್ಟು ದೊಡ್ಡ ಸಿನಿಮಾಗಳನ್ನು ಮಾಡಿದ್ದರು. ಆದರೆ, ಇವೆಲ್ಲ ರಿಲೀಸ್ ಆಗಿದ್ದು ಕನ್ನಡದಲ್ಲಿ ಮಾತ್ರ. ಹೀಗಾಗಿ, ಪರಭಾಷೆಯವರಿಗೆ ಇದರ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ. ತೆಲುಗು ಸಂದರ್ಶಕರೊಬ್ಬರು ಕನ್ನಡ ಸಿನಿಮಾ ಬಜೆಟ್​ ಬಗ್ಗೆ ಪ್ರಶ್ನೆ ಮಾಡಿದ್ದರು. ಇದಕ್ಕೆ ಉಪೇಂದ್ರ (Upendra) ಮುಟ್ಟಿನೋಡಿಕೊಳ್ಳುವ ಉತ್ತರ ಕೊಟ್ಟಿದ್ದಾರೆ.

ರಾಮ್ ಪೋತಿನೇನಿ ನಟನೆಯ ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾದಲ್ಲಿ ಉಪೇಂದ್ರ ಕೂಡ ನಟಿಸಿದ್ದಾರೆ. ಇದು ತೆಲುಗು ಸಿನಿಮಾ. ಈ ಚಿತ್ರದ ಸಂದರ್ಶನ ನೀಡಲು ಅವರು ಹೈದರಾಬಾದ್​ಗೆ ತೆರಳಿದ್ದರು. ಈ ವೇಳೆ ಕನ್ನಡ ಚಿತ್ರರಂಗವನ್ನು ಕೀಳಾಗಿ ನೋಡುವ ಪ್ರಯತ್ನ ನಡೆದಿದೆ. ಇದಕ್ಕೆ ಉಪೇಂದ್ರ ಅವರು ಅವಕಾಶ ಕೊಡಲೇ ಇಲ್ಲ.

‘ಒಂದು ಕಾಲದಲ್ಲಿ ತೆಲುಗು ಹೀರೋಗೆ ಕೊಡುವ ಸಂಭಾವನೆಯಲ್ಲಿ ಕನ್ನಡ ಸಿನಿಮಾ ಮಾಡಬಹುದಿತ್ತಲ್ಲ’ ಎಂದು ಸಂದರ್ಶಕರು ಉಪೇಂದ್ರ ಅವರಿಗೆ ಕೇಳಿದರು. ಇದನ್ನು ಉಪೇಂದ್ರ ಒಪ್ಪಲೇ ಇಲ್ಲ. ‘ಈಗಿನ ಜನರೇಶನ್ ಆ ರೀತಿ ಹೇಳುತ್ತದೆ. ಆಗಲೂ ಸೆನ್ಸೇಷನ್ ಸಿನಿಮಾಗಳನ್ನು ಮಾಡಲಾಗಿದೆ. ಸನಾದಿ ಅಪ್ಪಣ್ಣ ರೀತಿಯ ಸಿನಿಮಾಗಳು ಇವೆ. ಪುಟ್ಟಣ್ಣ ಕಣಗಾಲ್, ವಿಷ್ಣುವರ್ಧನ್ ರಾಜ್​ಕುಮಾರ್ ಸಿನಿಮಾಗಳು ಬ್ಲಾಕ್​ಬಸ್ಟರ್ ಆಗಿವೆ’ ಎಂದರು ಉಪೇಂದ್ರ.

‘ಅವೆಲ್ಲ ಬ್ಲಾಕ್​ಬಸ್ಟರ್ ಆಗಿದೆ ನಿಜ, ಆದರೆ ಬಜೆಟ್ ಹೆಚ್ಚು ಹಾಕುತ್ತಾ ಇರಲಿಲ್ಲ ಅಲ್ಲವೇ’ ಎಂದು ಸಂದರ್ಶಕರು ಕೌಂಟರ್ ಕೊಡೋಕೆ ಬಂದರು. ಆಗ ಉಪೇಂದ್ರ, ‘ಸಿಂಗಾಪುರದಲ್ಲಿ ರಾಜಾ ಕುಳ್ಳ ಹೆಸರಿನ ಸಿನಿಮಾ ಬಂತು. ಆಗಿನ ಕಾಲದಲ್ಲೇ ಸಿಂಗಾಪುರಕ್ಕೆ ತೆರಳಿ ಶೂಟ್ ಮಾಡಲಾಗಿತ್ತು. ಈ ವಿಷಯ ಗೊತ್ತಿಲ್ಲ ಅಷ್ಟೇ. ಈಗಿನ ಸಮಯಕ್ಕೆ ಇದೇ ದೊಡ್ಡದು ಎನಿಸುತ್ತದೆ. ಆ ಸಮಯದಲ್ಲಿಯೂ ದೊಡ್ಡ ಬಜೆಟ್ ಸಿನಿಮಾ ಇತ್ತು’ ಎಂದಿದ್ದಾರೆ ಉಪೇಂದ್ರ.

‘ಭಾರತ ಹಿಂದೆಂದೂ ಕಂಡಿರದ ರೀತಿಯ ಸಿನಿಮಾ ಮಾಡಿದರು. ಏನಿದು ಸಿನಿಮಾ ಎಂದು ಎಲ್ಲರೂ ಅಚ್ಚರಿ ಪಟ್ಟರು. ಆ ರೀತಿ ಇತ್ತು. ಅವೆಲ್ಲ ಈ ಜನರೇಶನ್​ಗೆ ತಿಳಿದಿಲ್ಲ. ಹೀಗಾಗಿ ಕಾಂತಾರ, ಕೆಜಿಎಫ್ ದೊಡ್ಡ ಬಜೆಟ್ ಸಿನಿಮಾ ಎನ್ನುತ್ತಾರೆ. ಇದು ಅವರ ತಪ್ಪಲ್ಲ’ ಎಂದರು ಉಪ್ಪಿ.

ಇದನ್ನೂ ಓದಿ:

ಆಗಲೂ ಸಂದರ್ಶಕ ಮತ್ತೆ ತಪ್ಪು ಕಂಡು ಹಿಡಿಯಲು ಬಂದರು. ‘ಮೊದಲು ಬರುತ್ತಿದ್ದ ದೊಡ್ಡ ಬಜೆಟ್ ಸಿನಿಮಾಗೂ ಈಗ ಬರುತ್ತಿರುವ ದೊಡ್ಡ ಬಜೆಟ್ ಸಿನಿಮಾ ಮಧ್ಯೆ ಗ್ಯಾಪ್ ಆಯಿತು ಅಲ್ಲವೇ’ ಎಂದು ಕೇಳಲು ಬಂದರು. ಇದಕ್ಕೆ ಉಪ್ಪಿ, ‘ಇಲ್ಲ, ಆ ಸಿನಿಮಾಗಳು ತೆಲುಗಿಗೆ ಬಂದಿಲ್ಲ ಅಷ್ಟೇ. ಹೀಗಾಗಿ ನಿಮಗೆ ಗೊತ್ತಾಗಿಲ್ಲ’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.