ಹುಲಿ ಉಗುರು (Tiger Claw Pendant) ಧರಿಸಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋ ಸ್ಪರ್ಧಿ ವರ್ತೂರು ಸಂತೋಷ್ ಅವರಿಗೆ ಈಗ ಜಾಮೀನು ಸಿಕ್ಕಿದೆ. ಇಷ್ಟು ದಿನಗಳ ಕಾಲ ಅವರು ನ್ಯಾಯಾಂಗ ಬಂಧನದಲ್ಲಿ ಇದ್ದರು. ಸದ್ಯಕ್ಕೆ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಬೆಂಗಳೂರಿನ 2ನೇ ಎಸಿಜೆಎಂ ನ್ಯಾಯಾಲಯದಿಂದ ಜಾಮೀನು (Bail) ನೀಡಲಾಗಿದೆ. 4 ಸಾವಿರ ರೂಪಾಯಿ ನಗದು ಭದ್ರತೆ ಅಥವಾ ಒಬ್ಬರ ಶ್ಯೂರಿಟಿ ಒದಗಿಸುವಂತೆ ಷರತ್ತು ಹಾಕಲಾಗಿದೆ. ಇಂದು (ಅಕ್ಟೋಬರ್ 27) ಸಂಜೆ ವೇಳೆಗೆ ವರ್ತೂರು ಸಂತೋಷ್ (Varthur Santhosh) ಬಿಡುಗಡೆ ಆಗಲಿದ್ದಾರೆ. ಮತ್ತೆ ಅವರು ಬಿಗ್ ಬಾಸ್ನಲ್ಲಿ ಸ್ಪರ್ಧಿಸುತ್ತಾರಾ ಎಂಬ ಕೌತುಕ ಮೂಡಿದೆ.
ಹಳ್ಳಿಕಾರ್ ತಳಿಯ ಹಸುಗಳ ಸಂರಕ್ಷಣೆ ಮಾಡುವ ಮೂಲಕ ವರ್ತೂರು ಸಂತೋಷ್ ಖ್ಯಾತಿ ಗಳಿಸಿದ್ದರು. ಅದೇ ಆಧಾರದಲ್ಲಿ ಅವರು ಬಿಗ್ ಬಾಸ್ಗೆ ಆಯ್ಕೆ ಆಗಿದ್ದರು. ಟ್ರೋಫಿ ಗೆಲ್ಲಬೇಕು ಎಂಬ ಆಸೆಯಿಂದ ಅವರು ದೊಡ್ಮನೆ ಪ್ರವೇಶಿಸಿದ್ದರು. ಆದರೆ ಅವರು ಧರಿಸಿದ್ದ ಹುಲಿ ಉಗುರಿನ ಪೆಂಡೆಂಟ್ ಮೇಲೆ ಅರಣ್ಯಾಧಿಕಾರಿಗಳ ಕಣ್ಣು ಬಿತ್ತು. ಅಕ್ಟೋಬರ್ 22ರ ರಾತ್ರಿ ಬಿಗ್ ಬಾಸ್ ಮನೆಗೆ ಹೋಗಿ ಅವರನ್ನು ಬಂಧಿಸಲಾಯಿತು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈಗ ಜಾಮೀನು ಸಿಕ್ಕಿದೆ.
ಇದನ್ನೂ ಓದಿ: ಹುಲಿ ಉಗುರು ಪ್ರಕರಣ: ವರ್ತೂರು ಸಂತೋಷ್ಗೆ ಕೈದಿ ನಂಬರ್ ನೀಡಿದ ಜೈಲಿನ ಅಧಿಕಾರಿಗಳು
ವರ್ತೂರು ಸಂತೋಷ್ ಬಂಧನದ ಬಳಿಕ ರಾಜ್ಯಾದ್ಯಂತ ಹುಲಿ ಉಗುರು ಪ್ರಕರಣ ಸಖತ್ ಸದ್ದು ಮಾಡಿತು. ಈ ಮೊದಲು ಹುಲಿ ಉಗುರು ಧರಿಸಿ ಕಾಣಿಸಿಕೊಂಡಿದ್ದ ಅನೇಕ ಸೆಲೆಬ್ರಿಟಿಗಳ ಫೋಟೋ ಮತ್ತು ವಿಡಿಯೋಗಳು ವೈರಲ್ ಆದವು. ದರ್ಶನ್, ರಾಕ್ಲೈನ್ ವೆಂಕಟೇಶ್, ನಿಖಿಲ್ ಕುಮಾರಸ್ವಾಮಿ, ಜಗ್ಗೇಶ್ ಮುಂತಾದವರಿಗೂ ಅರಣಾಧ್ಯಿಕಾರಿಗಳು ನೋಟಿಸ್ ನೀಡಿದರು. ಹಲವರ ಮನೆಯಲ್ಲಿ ತಪಾಸಣೆ ಕೂಡ ನಡೆಯಿತು. ಸದ್ಯ ಈ ಪ್ರಕರಣದ ತನಿಖೆ ಜಾರಿಯಲ್ಲಿದೆ.
ಇದನ್ನೂ ಓದಿ: ಹುಲಿ ಉಗುರು: ದರ್ಶನ್ ವಿರುದ್ಧ ದೂರು ನೀಡಿದವರಿಗೆ ಅಭಿಮಾನಿಗಳಿಂದ ಕೊಲೆ ಬೆದರಿಕೆ
ಬಿಗ್ ಬಾಸ್ ಸ್ಪರ್ಧಿಗಳು ಒಮ್ಮೆ ದೊಡ್ಮನೆಯಿಂದ ಹೊರಹೋದರೆ ಮತ್ತೆ ಪ್ರವೇಶ ಸಿಗುವುದು ಕಷ್ಟ. ಯಾಕೆಂದರೆ, ಹೊರಜಗತ್ತಿಗೆ ಬಂದ ಸ್ಪರ್ಧಿಗಳು ವೀಕ್ಷಕರ ಒಲವು ಯಾವ ಕಡೆಯಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅಂಥ ಸ್ಪರ್ಧಿಗಳನ್ನು ಮತ್ತೆ ಬಿಗ್ ಬಾಸ್ಗೆ ಸೇರಿಸಿಕೊಂಡರೆ ಇನ್ನುಳಿದ ಸ್ಪರ್ಧಿಗಳಿಗೆ ತಾರತಮ್ಯ ಮಾಡಿದಂತೆ ಆಗುತ್ತದೆ. ಹಾಗಾಗಿ ವರ್ತೂರು ಸಂತೋಷ್ ಅವರನ್ನು ಕೂಡ ಇನ್ನೊಮ್ಮೆ ದೊಡ್ಮನೆಯೊಳಗೆ ಸೇರಿಸುವ ಸಾಧ್ಯತೆ ಕಡಿಮೆ ಇದೆ. ಅಲ್ಲದೇ ಅವರನ್ನು ಯಾವಾಗ ಬೇಕಿದ್ದರೂ ಅಧಿಕಾರಿಗಳು ವಿಚಾರಣೆಗೆ ಕರೆಯವ ಸಾಧ್ಯತೆ ಇರುವುದರಿಂದ ಅವರಿಗೆ ಬಿಗ್ ಬಾಸ್ ಮನೆ ಬಾಗಿಲು ತೆರೆಯುವುದು ಬಹುತೇಕ ಅಸಾಧ್ಯ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:18 pm, Fri, 27 October 23