ವರುಣ್ ತೇಜ್-ಲಾವಣ್ಯಾ ತ್ರಿಪಾಠಿ ನಿಶ್ಚಿತಾರ್ಥಕ್ಕೆ ಗಣ್ಯರ ದಂಡು, ಮೆಗಾ ಕುಟುಂಬ ಹಾಜರಿ

Varun Tej- Lavanya: ಮೆಗಾಸ್ಟಾರ್ ಕುಟುಂಬದಲ್ಲಿ ಮತ್ತೊಂದು ಶುಭ ಸಮಾರಂಭ ನಡೆಯುತ್ತಿದೆ. ನಟ ವರುಣ್ ತೇಜ್ ಹಾಗೂ ನಟಿ ಲಾವಣ್ಯಾ ತ್ರಿಪಾಠಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ವರುಣ್ ತೇಜ್-ಲಾವಣ್ಯಾ ತ್ರಿಪಾಠಿ ನಿಶ್ಚಿತಾರ್ಥಕ್ಕೆ ಗಣ್ಯರ ದಂಡು, ಮೆಗಾ ಕುಟುಂಬ ಹಾಜರಿ
ವರುಣ್-ಲಾವಣ್ಯಾ
Follow us
ಮಂಜುನಾಥ ಸಿ.
|

Updated on:Jun 09, 2023 | 11:37 PM

ತೆಲುಗು ಚಿತ್ರರಂಗದ ಮೆಗಾ ಫ್ಯಾಮಿಲಿಯಲ್ಲಿ (Mega Family) ಮತ್ತೊಂದು ಶುಭ ಸಮಾರಂಭ ನಡೆಯುತ್ತಿದೆ. ಕಳೆದ ವರ್ಷವಷ್ಟೆ ಮೆಗಾ ಸಹೋದರ ನಾಗಬಾಬು ಅವರ ಮಗಳ ಮದುವೆ ನಡೆದಿತ್ತು. ಇದೀಗ ಅವರ ಅಣ್ಣ ವರುಣ್ ತೇಜ್ ನಿಶ್ಚಿತಾರ್ಥ ನಡೆಯುತ್ತಿದೆ. ಮೆಗಾಸ್ಟಾರ್ ಚಿರಂಜೀವಿಯ (Megastar Chiranjeevi) ಸಹೋದರ ನಾಗಬಾಬು ಅವರ ಪುತ್ರ ವರುಣ್ ತೇಜ್ (Varun Tej) ಸಹ ಸಿನಿಮಾ ನಟರಾಗಿದ್ದು ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಮಾಡಿಕೊಂಡಿದ್ದಾರೆ. ಇದೀಗ ವಿವಾಹವಾಗಲು ಅಣಿಯಾಗಿದ್ದು, ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ವರುಣ್ ತೇಜ್ ತಮ್ಮ ಸಹನಟಿಯಾಗಿದ್ದ ಲಾವಣ್ಯಾ ತ್ರಿಪಾಠಿಯೊಟ್ಟಿಗೆ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವರುಣ್ ತೇಜ್ ಹಾಗೂ ಲಾವಣ್ಯಾ ಪರಸ್ಪರ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಕಳೆದ ಕೆಲ ತಿಂಗಳುಗಳಿಂದ ಹರಿದಾಡುತ್ತಿತ್ತು. ಇಬ್ಬರೂ ಸಹ ಸುದ್ದಿಯನ್ನು ಅಲ್ಲಗಳೆದಿದ್ದರಾದರೂ ಈಗ ಏಕಾ-ಏಕಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ.

ವರುಣ್ ತೇಜ್ ಹಾಗೂ ಲಾವಣ್ಯಾ ತ್ರಿಪಾಠಿ ಅವರ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಸರಳವಾಗಿ ವರುಣ್ ತೇಜ್ ಕುಟುಂಬದವರು ಮಾಡುತ್ತಿದ್ದು, ಮೆಗಾ ಫ್ಯಾಮಿಲಿ ಸದಸ್ಯರು ಹಾಗೂ ಕೆಲವು ಆಪ್ತ ಸ್ನೇಹಿತರಷ್ಟೆ ಕಾರ್ಯಕ್ರಮದಲ್ಲ ಭಾಗಿಯಾಗುತ್ತಿದ್ದಾರೆ. ಯಾವುದೇ ಐಶಾರಾಮಿ ಹೋಟೆಲ್​ನಲ್ಲಿ ಕಾರ್ಯಕ್ರಮ ನಡೆಸದೆ ವರುಣ್ ತೇಜ್​ರ ಹೈದರಾಬಾದ್​ನ ಸ್ವಗೃಹದಲ್ಲಿ ಈ ಕಾರ್ಯಕ್ರಮ ಮಾಡಲಾಗುತ್ತಿದೆ.

ವರುಣ್ ತೇಜ್ ಹಾಗೂ ಲಾವಣ್ಯಾ ತ್ರಿಪಾಠಿ ಒಟ್ಟಿಗೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. 2017ರಲ್ಲಿ ಬಿಡುಗಡೆ ಆಗಿದ್ದ ಮಿಸ್ಟರ್ ಸಿನಿಮಾದಲ್ಲಿ ಈ ಜೋಡಿ ಒಟ್ಟಿಗೆ ನಟಿಸಿತ್ತು. ಅದಾದ ಬಳಿಕ 2018ರಲ್ಲಿ ಬಿಡುಗಡೆ ಆದ ಅಂತರಿಕ್ಷಂ ಸಿನಿಮಾದಲ್ಲಿ ಮತ್ತೆ ಈ ಜೋಡಿ ಒಟ್ಟಿಗೆ ನಟಿಸಿತ್ತು. 2017ರಿಂದಲೂ ಈ ಜೋಡಿ ಪ್ರೀತಿಯಲ್ಲಿತ್ತು ಎನ್ನಲಾಗುತ್ತಿದೆ. ಆದರೆ ವಿಷಯ ಹೊರಗೆ ಬಂದು ಇತ್ತೀಚೆಗಷ್ಟೆ.

ವರುಣ್ ತೇಜ್ ಹಾಗೂ ಲಾವಣ್ಯಾರ ನಿಶ್ಚಿತಾರ್ಥಕ್ಕೆ ಮೆಗಾ ಫ್ಯಾಮಿಲಿ ಸದಸ್ಯರು ಆಗಮಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ಅಲ್ಲು ಅರ್ಜುನ್ ಕುಟುಂಬ, ರಾಮ್ ಚರಣ್ ಕುಟುಂಬ, ಪವನ್ ಕಲ್ಯಾಣ್ ಇನ್ನು ಹಲವರು ನಿಶ್ಚಿತಾರ್ಥಕ್ಕೆ ಆಗಮಿಸಿ ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ. ಈ ಜೋಡಿಯ ಮದುವೆ ಇದೇ ವರ್ಷ ನವೆಂಬರ್ ತಿಂಗಳಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ವರುಣ್ ತೇಜ್ ತಂದೆ ನಾಗಬಾಬು ಯೂಟ್ಯೂಬ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಲಾವಣ್ಯಾ ತ್ರಿಪಾಠಿ ತೆಲುಗು ಹಾಗೂ ತಮಿಳು ಚಿತ್ರರಂಗದ ಜನಪ್ರಿಯ ನಟಿ. ಮೆಗಾ ಫ್ಯಾಮಿಲಿಯ ಕೆಲವು ನಟರೊಟ್ಟಿಗೆ ನಾಯಕಿಯಾಗಿ ಲಾವಣ್ಯಾ ನಟಿಸಿದ್ದಾರೆ. ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರಿಶ್ ಜೊತೆ ಹಾಗೂ ಸಾಯಿ ಧರಮ್ ತೇಜ್ ಜೊತೆ ನಾಯಕಿಯಾಗಿ ಲಾವಣ್ಯಾ ನಟಿಸಿದ್ದಾರೆ. ತೆಲುಗಿನ ನಾಗ ಚೈತನ್ಯ ಅವರೊಟ್ಟಿಗೂ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:36 pm, Fri, 9 June 23