ರತನ್ ಟಾಟಾಗೆ ತಲೆಬಾಗಿ ನಮಸ್ಕಾರ ಮಾಡಿದ್ದ ರಜನಿಕಾಂತ್; ನೆನಪು ಹಂಚಿಕೊಂಡ ಸೂಪರ್ ಸ್ಟಾರ್

|

Updated on: Oct 10, 2024 | 9:27 PM

ಕೋಟ್ಯಂತರ ಜನರಿಗೆ ಸ್ಫೂರ್ತಿ ಆಗಿದ್ದವರು ರತನ್​ ಟಾಟಾ. ಅವರ ಅಗಲಿಕೆಯಿಂದ ಎಲ್ಲರಿಗೂ ನೋವಾಗಿದೆ. ದೇಶಕ್ಕೆ ಅಪಾರ ಕೊಡುಗೆ ನೀಡಿದ್ದ ರತನ್ ಟಾಟಾ ಅವರನ್ನು ಎಲ್ಲರೂ ಸ್ಮರಿಸುತ್ತಿದ್ದಾರೆ. ಅವರ ನಿಧನಕ್ಕೆ ಸೆಲೆಬ್ರಿಟಿಗಳು ಕೂಡ ಕಂಬನಿ ಮಿಡಿಯುತ್ತಿದ್ದಾರೆ. ಸೂಪರ್​ ಸ್ಟಾರ್ ರಜನಿಕಾಂತ್​ ಅವರು ರತನ್​ ಟಾಟಾ ಜೊತೆಗಿನ ಫೋಟೋ ಹಂಚಿಕೊಂಡು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ರತನ್ ಟಾಟಾಗೆ ತಲೆಬಾಗಿ ನಮಸ್ಕಾರ ಮಾಡಿದ್ದ ರಜನಿಕಾಂತ್; ನೆನಪು ಹಂಚಿಕೊಂಡ ಸೂಪರ್ ಸ್ಟಾರ್
ರತನ್​ ಟಾಟಾ, ರಜನಿಕಾಂತ್
Follow us on

ರತನ್​ ಟಾಟಾ ಇನ್ನಿಲ್ಲ ಎಂಬ ವಿಷಯ ತಿಳಿದಾಗ ಇದೇ ದೇಶಕ್ಕೆ ಆಘಾತ ಆಯಿತು. ನೂರಾರು ಉದ್ಯಮಗಳನ್ನು ಹೊಂದಿದ್ದ ಅವರು ಕೋಟ್ಯಂತರ ಉದ್ಯೋಗಗಳನ್ನು ಸೃಷ್ಟಿಸಿದ್ದರು. ಅವರ ದೂರದೃಷ್ಟಿಗೆ ಎಲ್ಲರೂ ತಲೆಬಾಗುತ್ತಾರೆ. ಕೈಗಾರಿಕೋದ್ಯಮಿಯಾಗಿ ಮಾತ್ರವಲ್ಲದೇ ಸಮಾಜಮುಖಿ ಕಾರ್ಯಗಳಿಂದಲೂ ಜನಸೇವೆ ಮಾಡಿದ್ದ ರತನ್ ಟಾಟಾ ಅವರ ಅಗಲಿಕೆಯಿಂದ ದೇಶಕ್ಕೆ ನಷ್ಟವಾಗಿದೆ. ಅವರ ಕೊಡುಗೆಯನ್ನು ಸ್ಮರಿಸುತ್ತ ನೂರಾರು ಗಣ್ಯರು ಕಂಬನಿ ಮಿಡಿದಿದ್ದಾರೆ. ನಟ ರಜನಿಕಾಂತ್ ಕೂಡ ನುಡಿ ನಮನ ಸಲ್ಲಿಸಿ, ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಬುಧವಾರ (ಅಕ್ಟೋಬರ್​ 9) ರಾತ್ರಿ ರತನ್​ ಟಾಟಾ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದರು. ಆ ಸುದ್ದಿ ತಿಳಿದು ಅನೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಶ್ರದ್ಧಾಂಜಲಿ ಅರ್ಪಿಸಿದರು. ಇತ್ತೀಚೆಗಷ್ಟೇ ಅನಾರೋಗ್ಯದಿಂದ ಚೇತರಿಸಿಕೊಂಡ ರಜನಿಕಾಂತ್ ಅವರು ಸಹ ರತನ್ ಟಾಟಾ ಅವರ ಜೊತೆಗಿನ ಒಂದು ಅಪರೂಪದ ಫೋಟೋವನ್ನು ಹಂಚಿಕೊಂಡರು.

‘ತಮ್ಮ ದೂರದೃಷ್ಟಿ ಮತ್ತು ಪ್ಯಾಷನ್ ಮೂಲಕ ಭಾರತವನ್ನು ಜಾಗತಿಕ ಭೂಪಟದಲ್ಲಿ ಕಾಣುವಂತೆ ಮಾಡಿದ ದಿಗ್ಗಜ ಐಕಾನ್. ಸಾವಿರಾರು ಕೈಗಾರಿಕೋದ್ಯಮಿಗಳಿಗೆ ಸ್ಫೂರ್ತಿಯಾಗಿದ್ದ ವ್ಯಕ್ತಿ. ಅನೇಕ ತಲೆಮಾರಿನ ಜನರಿಗೆ ಉದ್ಯೋಗ ನೀಡಿದ ವ್ಯಕ್ತಿ. ಎಲ್ಲರಿಂದಲೂ ಪ್ರೀತಿ ಮತ್ತು ಗೌರವ ಪಡೆದ ವ್ಯಕ್ತಿ’ ಎಂದು ರತನ್​ ಟಾಟಾ ಅವರನ್ನು ರಜನಿಕಾಂತ್​ ಹಾಡಿ ಹೊಗಳಿದ್ದಾರೆ. ಆ ಮೂಲಕ ಅವರ ಕೊಡುಗೆಗಳನ್ನು ಸ್ಮರಿಸಿದ್ದಾರೆ.

ಇದನ್ನೂ ಓದಿ: ರತನ್ ಟಾಟಾ ಅಂತ್ಯಕ್ರಿಯೆ: ಮುಂಬೈನಲ್ಲಿ ಅಂತಿಮ ದರ್ಶನ ಪಡೆದ ಆಮಿರ್ ಖಾನ್, ಕಿರಣ್ ರಾವ್

‘ಈ ಮಹಾನ್​ ವ್ಯಕ್ತಿಯ ಜೊತೆ ಕಳೆದ ಪ್ರತಿ ಕ್ಷಣವನ್ನು ನಾನು ನೆನಪಿಡುತ್ತೇನೆ. ಭಾರತ ಮಾತೆಯ ನಿಜವಾದ ಸುಪುತ್ರ ಇನ್ನಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರಿಗೆ ನನ್ನ ನಮನಗಳು’ ಎಂದು ರಜನಿಕಾಂತ್​ ಬರೆದುಕೊಂಡಿದ್ದಾರೆ. ಮುಂಬೈನಲ್ಲಿ ರತನ್ ಟಾಟಾ ಅವರ ಅಂತ್ಯಕ್ರಿಯೆ ನಡೆದಿದೆ. ಅನೇಕ ಗಣ್ಯರು ಭಾಗಿಯಾಗಿ ಅಂತಿಮ ನಮನ ಸಲ್ಲಿಸಿದ್ದಾರೆ. ಆಮಿರ್​ ಖಾನ್​, ಕಿರಣ್​ ರಾವ್​ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.