ರತನ್ ಟಾಟಾ ಅಂತ್ಯಕ್ರಿಯೆ: ಮುಂಬೈನಲ್ಲಿ ಅಂತಿಮ ದರ್ಶನ ಪಡೆದ ಆಮಿರ್ ಖಾನ್, ಕಿರಣ್ ರಾವ್
ಖ್ಯಾತ ಉದ್ಯಮಿ ರತನ್ ಟಾಟಾ ಅವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. ಎಲ್ಲ ಕ್ಷೇತ್ರಗಳ ಜನರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಸಿನಿಮಾ ಕ್ಷೇತ್ರದ ಸೆಲೆಬ್ರಿಟಿಗಳು ಕೂಡ ಕಂಬನಿ ಮಿಡಿದಿದ್ದಾರೆ. ನಟ ಆಮಿರ್ ಖಾನ್ ಅವರು ಮಾಜಿ ಪತ್ನಿ ಕಿರಣ್ ರಾವ್ ಜೊತೆ ಬಂದು ರತನ್ ಟಾಟಾ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಬುಧವಾರ (ಅ.10) ರಾತ್ರಿ ನಿಧನರಾದ ರತನ್ ಟಾಟಾ ಅವರ ಆತ್ಮಕ್ಕೆ ಹಲವು ಸೆಲೆಬ್ರಿಟಿಗಳು ಶಾಂತಿಕೋರಿದ್ದಾರೆ. ಮುಂಬೈನ ‘ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್’ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಾಲಿವುಡ್ನ ಖ್ಯಾತ ನಟ ಆಮಿರ್ ಖಾನ್ ಅವರು ಬಂದು ಅಂತಿಮ ದರ್ಶನ ಪಡೆದುಕೊಂಡರು. ಅವರ ಜೊತೆ ಮಾಜಿ ಪತ್ನಿ ಕಿರಣ್ ರಾವ್ ಕೂಡ ಆಗಮಿಸಿದ್ದರು. ರತನ್ ಟಾಟಾ ಅವರಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಅವರ ಕೊಡುಗೆಗಳ ಬಗ್ಗೆ ಆಮಿರ್ ಖಾನ್ ಮಾತನಾಡಿದರು.
‘ನಮಗೆ ಹಾಗೂ ಇಡೀ ದೇಶಕ್ಕೆ ಇಂದು ದುಃಖಕರ ದಿನ. ರತನ್ ಟಾಟಾ ಅವರು ತಮ್ಮ ಸಂಸ್ಥೆಯ ಮೂಲಕ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರು ಬಹಳ ಅಪರೂಪದ ವ್ಯಕ್ತಿ. ಅವರನ್ನು ನಾವು ಎಂದೆಂದಿಗೂ ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ಆಮಿರ್ ಖಾನ್ ಹೇಳಿದ್ದಾರೆ. ‘ರತನ್ ಟಾಟಾ ಅವರ ಜೊತೆ ಕೆಲವು ಸಮಯ ಕಳೆಯುವ ಅವಕಾಶ ನಮಗೆ ಸಿಕ್ಕಿತ್ತು. ಆ ವಿಚಾರದಲ್ಲಿ ನಾವು ಅದೃಷ್ಟವಂತರು. ಅವರು ತುಂಬ ಒಳ್ಳೆಯ ವ್ಯಕ್ತಿ ಆಗಿದ್ದರು. ಸಾಕಷ್ಟು ಕೊಡುಗೆ ನೀಡಿದ ಅವರು ಇಂದು ನಮ್ಮೊಂದಿಗಿಲ್ಲ’ ಎಂದು ಕಿರಣ್ ರಾವ್ ಹೇಳಿದರು.
#WATCH | Actor Aamir Khan says “It is a sad day for the country. The contribution of Ratan Tata to the country is priceless. We will all miss him a lot.” https://t.co/pXhLuigMzf pic.twitter.com/1haaBYbKVT
— ANI (@ANI) October 10, 2024
ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ರತನ್ ಟಾಟಾ ಅವರು ಕೊನೆಯುಸಿರು ಎಳೆದರು. ಸೋಮವಾರದಿಂದಲೂ ಅವರು ತೀವ್ರ ನಿಗಾ ಘಟಕದಲ್ಲಿ ಇದ್ದರು. ಅವರ ನಿಧನದ ಸುದ್ದಿ ತಿಳಿದು ಇಡೀ ದೇಶಕ್ಕೆ ಆಘಾತ ಆಗಿದೆ. ರತನ್ ಟಾಟಾ ಅವರಿಗೆ 86 ವರ್ಷ ವಯಸ್ಸಾಗಿತ್ತು. ಗೃಹಬಳಕೆಯ ಚಿಕ್ಕ ವಸ್ತುಗಳಿಂದ ಹಿಡಿದು ವಿಮಾನಯಾನದ ತನಕ ಹಲವು ಉತ್ಪನ್ನಗಳ ಉದ್ಯಮದಲ್ಲಿ ಅವರು ಯಶಸ್ಸು ಕಂಡಿದ್ದರು.
ಇದನ್ನೂ ಓದಿ: ರತನ್ ಟಾಟಾಗೂ ಚಿತ್ರರಂಗಕ್ಕೂ ಸಂಬಂಧವೇನು? ನಿರ್ಮಾಣ ಮಾಡಿದ್ದು ಒಂದೇ ಸಿನಿಮಾ
ಮಹಾರಾಷ್ಟ್ರದಲ್ಲಿ ಶೋಕಾಚರಣೆ ಮಾಡಲಾಗುತ್ತಿದೆ. ಹಾಗಾಗಿ, ನಟ ಅಜಯ್ ದೇವಗನ್ ಅವರು ಇಂದು (ಅ.10) ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆ ನಡೆಸಬೇಕಿದ್ದ ಪ್ರಶ್ನೋತ್ತರ ಸೆಷನ್ ಅನ್ನು ಕ್ಯಾನ್ಸಲ್ ಮಾಡಿದ್ದಾರೆ. ‘ರತನ್ ಟಾಟಾ ಅವರು ನೀಡಿದ ಕೊಡುಗೆಯನ್ನು ಅಳೆಯಲು ಸಾಧ್ಯವಿಲ್ಲ. ಅದಕ್ಕಾಗಿ ನಾನು ಚಿರಋಣಿ ಆಗಿದ್ದೇವೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸರ್’ ಎಂದು ಅಜಯ್ ದೇವಗನ್ ಪೋಸ್ಟ್ ಮಾಡಿದ್ದಾರೆ. ನಟ ಅಮಿತಾಭ್ ಬಚ್ಚನ್ ಕೂಡ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಒಂದು ಯುಗಾಂತ್ಯವಾಯಿತು’ ಎಂದು ಅವರು ಬರೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.