
ಲಕ್ಷ್ಮಣ್ ಉಟೇಕರ್ ನಿರ್ದೇಶನದ ‘ಛಾವಾ’ ಚಿತ್ರವು ಸಾಕಷ್ಟು ಚರ್ಚೆಯಲ್ಲಿದೆ. ಈ ಚಿತ್ರದ ಟ್ರೇಲರ್ ಬಿಡುಗಡೆಯಾದಾಗಿನಿಂದ, ಪ್ರೇಕ್ಷಕರಲ್ಲಿ ಅದರ ಬಗ್ಗೆ ಅಪಾರ ಕುತೂಹಲವಿದೆ. ಈ ಚಿತ್ರದಲ್ಲಿ, ನಟ ವಿಕ್ಕಿ ಕೌಶಲ್ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ, ರಶ್ಮಿಕಾ ಮಂದಣ್ಣ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ಮತ್ತು ಅಕ್ಷಯ್ ಖನ್ನಾ ಮೊಘಲ್ ದೊರೆ ಔರಂಗಜೇಬ ಪಾತ್ರದಲ್ಲಿ ನಟಿಸಿದ್ದಾರೆ. ಟೀಸರ್ ಮತ್ತು ಟ್ರೇಲರ್‌ನಲ್ಲಿ ಅಕ್ಷಯ್ ಖನ್ನಾ ಪಾತ್ರ ಎಲ್ಲರ ಗಮನ ಸೆಳೆದಿದೆ. ಅಕ್ಷಯ್ ಹಿಂದೆಂದೂ ನೋಡಿರದ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕೆ ಅವರ ಆಯ್ಕೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ವಿಕ್ಕಿ ಕೌಶಲ್ ಮತ್ತು ನಿರ್ದೇಶಕ ಲಕ್ಷ್ಮಣ್ ಉಟೇಕರ್ ಚಿತ್ರದಲ್ಲಿನ ತಮ್ಮ ಪಾತ್ರಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.
‘ಔರಂಗಜೇಬನ ಪಾತ್ರದಲ್ಲಿ ಅಕ್ಷಯ್ ಖನ್ನಾ ಹೇಗೆ ನಟಿಸಿದ್ದಾರೆ ಎಂದು ನೋಡಿದರೆ ನೀವು ಅಕ್ಷರಶಃ ಗಾಬರಿಗೊಳ್ಳುತ್ತೀರಿ. ಅವರು ಮೃದುವಾಗಿ ಮಾತನಾಡುತ್ತಾರೆ ಆದರೆ ತಮ್ಮ ಕಣ್ಣುಗಳಿಂದಲೇ ಸಂವಹನ ನಡೆಸುತ್ತಾರೆ. ಅವರು ಮಾಡಿರೋದು ಕಡಿಮೆ ಸಿನಿಮಾ ಆದರೂ ಶ್ರದ್ಧೆಯಿಂದ ಮಾಡುತ್ತಾರೆ’ ಎಂದು ಲಕ್ಷ್ಮಣ್ ಹೇಳಿದ್ದಾರೆ.
ಇಬ್ಬರ ನಡುವಿನ ಫೈಟ್ ದೃಶ್ಯವನ್ನು ಚಿತ್ರೀಕರಿಸುವ ಮೊದಲು, ವಿಕ್ಕಿ ಮತ್ತು ಅಕ್ಷಯ್ ಮುಖಾಮುಖಿಯಾಗುವುದನ್ನು ಲಕ್ಷ್ಮಣ್ ತಪ್ಪಿಸಿದ್ದರು. ‘ಅವರ ದೃಶ್ಯವನ್ನು ಚಿತ್ರೀಕರಿಸಬೇಕಾದ ದಿನ, ಅವರು ಸೆಟ್‌ನಲ್ಲಿ ಮೊದಲ ಬಾರಿಗೆ ಪರಸ್ಪರ ಭೇಟಿಯಾದರು, ಅದು ಕೂಡ ಅವರ ಪಾತ್ರಗಳ ಮೂಲಕ’ ಎಂದಿದ್ದಾರೆ ಲಕ್ಷ್ಮಣ್.
‘ನಾವು ಸಿನಿಮಾದ ದೃಶ್ಯವನ್ನು ಚಿತ್ರೀಕರಿಸುವಾಗ, ನಾವು ಒಬ್ಬರಿಗೊಬ್ಬರು ಹಾಯ್-ಹಲೋ, ಶುಭೋದಯ ಎಂದು ಏನನ್ನೂ ಹೇಳಲಿಲ್ಲ. ಅವರು ಔರಂಗಜೇಬ್ ಮತ್ತು ನಾನು ಛತ್ರಪತಿ ಸಂಭಾಜಿ ಮಹಾರಾಜ್ ಅಷ್ಟೇ. ವಿಕ್ಕಿ ಕೌಶಲ್ ಮತ್ತು ಅಕ್ಷಯ್ ಖನ್ನಾ ಆಗಿ ನಮ್ಮ ನಡುವೆ ಯಾವುದೇ ಸಂವಹನ ಇರಲಿಲ್ಲ’ ಎಂದು ವಿಕ್ಕಿ ಹೇಳಿದ್ದಾರೆ.
ಇದನ್ನೂ ಓದಿ: ‘ನಿವೃತ್ತಿ ಹೊಂದಲು ಸಂತೋಷವಿದೆ’; ಕಾಲು ಪೆಟ್ಟಾದ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಇಂಥ ನಿರ್ಧಾರವೇ?
‘ನಮ್ಮಿಬ್ಬರ ನಡುವೆ ದೃಶ್ಯಗಳು ಇದ್ದ ರೀತಿಯನ್ನು ನೋಡಿದರೆ, ನಾವು ಕುರ್ಚಿಗಳ ಮೇಲೆ ಕುಳಿತು, ಚಹಾ ಮತ್ತು ಕಾಫಿ ಕುಡಿದು, ನಂತರ ಶೂಟಿಂಗ್‌ಗೆ ಹೋಗಲು ಸಾಧ್ಯವಿರಲಿಲ್ಲ. ಸಿನಿಮಾ ಬಿಡುಗಡೆಯಾದ ನಂತರ ಅವರೊಂದಿಗೆ ಮಾತನಾಡಲು ಅವಕಾಶ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ. ಶೂಟಿಂಗ್ ಸಮಯದಲ್ಲಿ ನಾವು ಪರಸ್ಪರ ಮಾತನಾಡಲಿಲ್ಲ’ ಎಂದಿದ್ದಾರೆ ವಿಕ್ಕಿ. ಈ ವಿಚಾರ ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.