ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಸಿನಿಮಾ ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಯ ಮಟ್ಟವನ್ನು ತಲುಪಲು ನಿರ್ದೇಶಕ ಪುರಿ ಜಗನ್ನಾಥ್ ಹಲವು ಬಗೆಯಲ್ಲಿ ಸರ್ಕಸ್ ಮಾಡುತ್ತಿದ್ದಾರೆ. ‘ಲೈಗರ್’ನಲ್ಲಿ ವಿಜಯ್ ದೇವರಕೊಂಡ ಜೊತೆ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ಅವರು ಭಾರತ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಇನ್ನು, ಈ ಸಿನಿಮಾ ವಿಜಯ್ ಅವರ ಮೊದಲ ಹಿಂದಿ ಚಿತ್ರ ಅನ್ನೋದು ವಿಶೇಷ. ಅಭಿಮಾನಿಗಳಿಗೆ ‘ಲೈಗರ್’ ತಂಡ ಹೊಸ ವರ್ಷಕ್ಕೆ ಬ್ಯಾಕ್ ಟು ಬ್ಯಾಕ್ ಗಿಫ್ಟ್ ಕೊಡೋಕೆ ಮುಂದಾಗಿದೆ.
ಆಗಸ್ಟ್ 25ಕ್ಕೆ ‘ಲೈಗರ್’ ಸಿನಿಮಾ ತೆರೆಗೆ ಬರುತ್ತಿದೆ. ಇದಕ್ಕೆ ಇನ್ನೂ 8 ತಿಂಗಳು ಬಾಕಿ ಇದೆ. ಅದಕ್ಕೂ ಮೊದಲೇ ಸಿನಿಮಾ ಎಲ್ಲ ಕಡೆಗಳಲ್ಲೂ ಮನೆ ಮಾತಾಗಬೇಕು ಎನ್ನುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ. ಒಂದು ಕಡೆ ಶೂಟಿಂಗ್ ನಡೆಯುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ಪ್ರಚಾರ ಕಾರ್ಯ ನಡೆಸಲು ಚಿತ್ರತಂಡ ತಂತ್ರ ರೂಪಿಸಿದೆ. ಹೀಗಾಗಿ, ವರ್ಷಾಂತ್ಯಕ್ಕೆ ಮೂರು ಬಿಗ್ ಅಪ್ಡೇಟ್ ನೀಡೋಕೆ ಚಿತ್ರತಂಡ ನಿರ್ಧರಿಸಿದೆ.
ಗುರುವಾರ (ಡಿಸೆಂಬರ್ 30) ಬೆಳಗ್ಗೆ 10:30ಕ್ಕೆ ಚಿತ್ರತಂಡದಿಂದ ಸಿನಿಮಾ ಸ್ಟಿಲ್ಗಳು ಲಾಂಚ್ ಆಗುತ್ತದೆ. ಮಧ್ಯಾಹ್ನ ನಾಲ್ಕು ಗಂಟೆಗೆ ವಿಶೇಷ ಇನ್ಸ್ಟಾ ಫಿಲ್ಟರ್ ರಿಲೀಸ್ ಮಾಡಲಾಗುತ್ತಿದೆ. ಡಿಸೆಂಬರ್ 31ರ ಸಂಜೆ ಚಿತ್ರತಂಡದಿಂದ ‘ಲೈಗರ್’ ಮೊದಲ ಗ್ಲಿಂಪ್ಸ್ ಬಿಡುಗಡೆ ಆಗುತ್ತಿದೆ.
ಈ ಸಿನಿಮಾದಲ್ಲಿ ಮೈಕಟ್ ಟೈಸನ್ ನಟಿಸುತ್ತಿರುವ ವಿಚಾರ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಬಾಕ್ಸಿಂಗ್ ಜಗತ್ತಿನಲ್ಲಿ ಅಮೆರಿಕದ ಮೈಕ್ ಟೈಸನ್ ಅವರದ್ದು ದೊಡ್ಡ ಹೆಸರು. ಎದುರಾಳಿಗಳಿಗೆ ನಡುಕ ಹುಟ್ಟಿಸುವ ಅವರ ಬಾಕ್ಸಿಂಗ್ ಪರಾಕ್ರಮಕ್ಕೆ ಸರಿಸಾಟಿ ಆಗಬಲ್ಲ ಮತ್ತೊಬ್ಬ ವ್ಯಕ್ತಿಯೇ ಇಲ್ಲ. ಇದೇ ಮೊದಲ ಬಾರಿಗೆ ಅವರು ಭಾರತೀಯ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ಮೈಕ್ ಟೈಸನ್ ಮುಖಾಮುಖಿ ಆಗುವ ದೃಶ್ಯಗಳನ್ನು ನೋಡಲು ಫ್ಯಾನ್ಸ್ ಎಗ್ಸೈಟ್ ಆಗಿದ್ದಾರೆ. ಈ ಸಿನಿಮಾವನ್ನು ಪುರಿ ಜಗನ್ನಾಥ್, ಕರಣ್ ಜೋಹರ್, ಚಾರ್ಮಿ ಕೌರ್, ಅಪೂರ್ವ ಮೆಹ್ತಾ, ಹೀರೂ ಯಶ್ ಜೋಹರ್ ಸೇರಿಕೊಂಡು ನಿರ್ಮಿಸುತ್ತಿದ್ದಾರೆ. ಅನನ್ಯಾ ಪಾಂಡೆ ಚಿತ್ರದ ನಾಯಕಿ. ಈ ಸಿನಿಮಾದ ಬಜೆಟ್ 125 ಕೋಟಿ ರೂಪಾಯಿಗೂ ಅಧಿಕವಾಗಿದೆ. ಕನ್ನಡದಲ್ಲೂ ಈ ಸಿನಿಮಾ ತೆರೆಗೆ ಬರುತ್ತಿದೆ.
ಇದನ್ನೂ ಓದಿ: ‘ಲೈಗರ್’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುವ ಮೈಕ್ ಟೈಸನ್ಗೆ ಹೀರೋಗಿಂತಲೂ ಹೆಚ್ಚು ಸಂಬಳ