ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳನ್ನು ಒಂದಿಲ್ಲೊಂದು ರೀತಿಯಲ್ಲಿ ಟ್ರೋಲ್ (Troll) ಮಾಡಲಾಗುತ್ತದೆ. ಇದರಿಂದ ಅವರ ಸಿನಿಮಾಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇತ್ತೀಚೆಗೆ ವಿಜಯ್ ದೇವರಕೊಂಡ (Vijay Deverakonda) ನಟನೆಯ ‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾ ಬಿಡುಗಡೆ ಆಗಿದ್ದು, ಆ ಚಿತ್ರಕ್ಕೂ ಟ್ರೋಲ್ ಕಾಟ ಎದುರಾಗಿದೆ. ಮೊದಲ ದಿನವೇ ಈ ಸಿನಿಮಾಗೆ ವಿಶ್ರ ಪ್ರತಿಕ್ರಿಯೆ ಸಿಕ್ಕಿತು. ಬಳಿಕ ಟ್ರೋಲ್ ಹೆಚ್ಚಾಯಿತು. ಅಂಥ ಟ್ರೋಲ್ ಮಂದಿಯ ವಿರುದ್ಧ ‘ದಿ ಫ್ಯಾಮಿಲಿ ಸ್ಟಾರ್’ (The Family Star) ಚಿತ್ರತಂಡ ತಿರುಗಿ ಬಿದ್ದಿದೆ. ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ವರದಿ ಆಗಿದೆ.
ವಿಜಯ್ ದೇವರಕೊಂಡ ಅವರನ್ನು ಒಂದು ವರ್ಗದ ನೆಟ್ಟಿಗರು ದ್ವೇಷಿಸುತ್ತಾರೆ. ಇದರಿಂದಾಗಿ ಅವರ ಸಿನಿಮಾಗೆ ಪೆಟ್ಟು ಬಿದ್ದಿದೆ. ‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾವನ್ನು ಸೋಶಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಮಾಡಿದವರ ವಿರುದ್ಧ ಕಾನೂನಿನ ಮೂಲಕ ಹೋರಾಡಲು ಚಿತ್ರತಂಡ ನಿರ್ಧರಿಸಿದೆ. ವಿಜಯ್ ದೇವರಕೊಂಡ ಅವರ ಮ್ಯಾನೇಜರ್ ಹಾಗೂ ಅಭಿಮಾನಿ ಸಂಘದ ಅಧ್ಯಕ್ಷರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ದೂರಿನ ಜೊತೆಗೆ ಅನೇಕ ಸಾಕ್ಷಿಗಳನ್ನು ಒದಗಿಸಲಾಗಿದೆ. ಟ್ರೋಲ್ ಮಾಡಿದ ಸೋಶಿಯಲ್ ಮೀಡಿಯಾ ಖಾತೆಗಳ ಸ್ಕ್ರೀನ್ ಶಾಟ್ಗಳನ್ನು ಪೊಲೀಸರಿಗೆ ನೀಡಲಾಗಿದೆ. ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಬಾಕ್ಸ್ ಆಫೀಸ್ನಲ್ಲಿ ‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಿಲ್ಲ. ಇದು ಚಿತ್ರತಂಡಕ್ಕೆ ಸಹಜವಾಗಿಯೇ ಬೇಸರ ಮೂಡಿಸಿರುತ್ತದೆ.
ಇದನ್ನೂ ಓದಿ: ಮತ್ತೆ ಕೈ ಕೊಡ್ತಾ ವಿಜಯ್ ದೇವರಕೊಂಡ ಅದೃಷ್ಟ? ‘ಫ್ಯಾಮಿಲಿ ಸ್ಟಾರ್’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ
‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾದಲ್ಲಿ ನಟ ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ ಬಾಲಿವುಡ್ ಬೆಡಗಿ ಮೃಣಾಲ್ ಠಾಕೂರ್ ಅಭಿನಯಿಸಿದ್ದಾರೆ. ಈ ಮೊದಲು ತೆಲುಗಿನ ‘ಸೀತಾ ರಾಮಂ’, ‘ಹಾಯ್ ನಾನ್ನ’ ಸಿನಿಮಾಗಳಲ್ಲಿ ನಟಿಸಿ ಅವರು ಭರ್ಜರಿ ಗೆಲುವು ಕಂಡಿದ್ದರು. ಆದರೆ 3ನೇ ತೆಲುಗು ಸಿನಿಮಾ ಮೂಲಕ ಅವರು ಸೋಲು ಕಾಣುವಂತಾಗಿದೆ. ಈ ಚಿತ್ರವನ್ನು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಪರಶುರಾಮ್ ಅವರು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ವಿಜಯ್ ದೇವರಕೊಂಡ ನಟನೆಯ ‘ಗೀತ ಗೋವಿಂದಂ’ ಚಿತ್ರಕ್ಕೆ ಪರಶುರಾಮ್ ಅವರೇ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಗೆದ್ದಿತ್ತು. ಆದರೆ ಈಗ ಅವರಿಬ್ಬರ ಕಾಂಬಿನೇಷನ್ನಲ್ಲಿ ಬಂದ ‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.