ನಟಿ ಹರಿಪ್ರಿಯಾ ಹೊಸ ಧಾರಾವಾಹಿ? ವೈರಲ್ ಪ್ರೋಮೋ ನೋಡಿ ಅಭಿಮಾನಿಗಳಿಗೆ ಅಚ್ಚರಿ
ನಟಿ ಹರಿಪ್ರಿಯಾ ಅವರು ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಇಂಥ ಪ್ರಶ್ನೆ ಮೂಡಲು ಕಾರಣ ಆಗಿರುವುದು ಒಂದು ಪ್ರೋಮೋ. ಸೋಶಿಯಲ್ ಮೀಡಿಯಾದಲ್ಲಿ ‘ಸ್ಟಾರ್ ಸುವರ್ಣ’ ವಾಹಿನಿ ಈ ಪ್ರೋಮೋವನ್ನು ಹಂಚಿಕೊಂಡಿದೆ. ಇದರಲ್ಲಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರವನ್ನು ಅಹನಾ ಅಗ್ನಿಹೋತ್ರ ಎಂದು ಪರಿಚಯಿಸಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ನಟಿ ಹರಿಪ್ರಿಯಾ (Haripriya) ಅವರು ಹಲವು ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಬೇರೆ ಬೇರೆ ಭಾಷೆಯಲ್ಲಿಯೂ ನಟಿಸಿ ಅವರು ಖ್ಯಾತಿ ಪಡೆದಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದ ಅವರು ಇತ್ತೀಚೆಗೆ ಸ್ವಲ್ಪ ಸ್ಲೋ ಆಗಿದ್ದಾರೆ. 2020ರ ನಂತರ ಅವರ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಈ ಮೊದಲು ಒಪ್ಪಿಕೊಂಡಿದ್ದ ಕೆಲವು ಪ್ರಾಜೆಕ್ಟ್ಗಳು ವಿಳಂಬ ಆಗಿವೆ. ಇದೆಲ್ಲದರ ನಡುವೆ ಅವರು ಹೊಸ ಸೀರಿಯಲ್ನಲ್ಲಿ (Kannada Serial) ನಟಿಸುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಅದಕ್ಕೆ ಕಾರಣ ಆಗಿರುವುದು ಒಂದು ಪ್ರೋಮೋ. ಹೌದು, ಸ್ಟಾರ್ ಸುವರ್ಣ (Star Suvarna) ವಾಹಿನಿಯು ಈ ಪ್ರೋಮೋ ಹಂಚಿಕೊಂಡಿದ್ದು, ಇದರಲ್ಲಿ ಹರಿಪ್ರಿಯಾ ಅವರು ಕಾಣಿಸಿಕೊಂಡಿದ್ದಾರೆ.
‘ನ್ಯಾಯದ ಪರ ಹೋರಾಡೋಕೆ ಅಡ್ವೊಕೇಟ್ ಅಹನಾ ಅಗ್ನಿಹೋತ್ರ ಆಗಿ ಬರ್ತಿದ್ದಾರೆ ಸ್ಯಾಂಡಲ್ವುಡ್ ಬ್ಯೂಟಿ ಕ್ವೀನ್ ಹರಿಪ್ರಿಯಾ ಶೀಘ್ರದಲ್ಲಿ!’ ಎಂಬ ಕ್ಯಾಪ್ಷನ್ನೊಂದಿಗೆ ಈ ಪ್ರೋಮೋ ಹಂಚಿಕೊಳ್ಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದೆ. ಈ ಪ್ರೋಮೋದಲ್ಲಿ ನಟಿ ಹರಿಪ್ರಿಯಾ ಅವರು ಅಡ್ವೊಕೇಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಕಮೆಂಟ್ ಮಾಡಿರುವ ಅಭಿಮಾನಿಗಳು ‘ನಮ್ಮ ಹರಿಪ್ರಿಯಾ ಅವರು ಸೀರಿಯಲ್ ಮಾಡ್ತಾರಾ’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪ್ರೋಮೋ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗ ಆಗಿಲ್ಲ. ಇದು ಧಾರಾವಾಹಿಯೋ ಅಥವಾ ರಿಯಾಟಿಲಿ ಶೋಗೆ ಸಂಬಂಧಿಸಿದ ಪ್ರೋಮೋ ಆಗಿರಬಹುದಾ ಎಂಬ ಅನುಮಾನ ಕೂಡ ಇದೆ. ಒಂದು ವೇಳೆ ಸೀರಿಯಲ್ ಆಗಿದ್ದರೆ, ಅದರಲ್ಲಿ ಹರಿಪ್ರಿಯಾ ಒಂದು ಅತಿಥಿ ಪಾತ್ರ ಮಾಡಿರುವ ಸಾಧ್ಯತೆ ಇದೆ. ಅವರಿಂದಾಗಿ ಸೀರಿಯಲ್ಗೆ ಸ್ಟಾರ್ ಮೆರುಗು ಸಿಗಲಿ ಎಂಬ ಉದ್ದೇಶ ಇದ್ದರೂ ಇರಬಹುದು. ವಾಹಿನಿ ಕಡೆಯಿಂದಲೇ ಈ ಬಗ್ಗೆ ಅಪ್ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
View this post on Instagram
ಚಿತ್ರರಂಗದಲ್ಲಿ ಫೇಮಸ್ ಆಗಿರುವ ಅನೇಕ ನಟಿಯರು ಧಾರಾವಾಹಿಗಳ ವಿಶೇಷ ಸಂಚಿಕೆಗಳಲ್ಲಿ ಅತಿಥಿ ಪಾತ್ರ ಮಾಡಿದ್ದುಂಟು. ಈ ಮೊದಲು ನಟಿ ಹರಿಪ್ರಿಯಾ ಅವರು ‘ಸಂಘರ್ಷ’ ಧಾರಾವಾಹಿಯಲ್ಲಿ ದೇವಿ ಪಾತ್ರ ಮಾಡಿದ್ದರು. ಅದು ಕೂಡ ಅತಿಥಿ ಪಾತ್ರವಾಗಿತ್ತು. ಈಗ ಅಹನಾ ಅಗ್ನಿಹೋತ್ರ ಎಂಬ ಪಾತ್ರದ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.