ವಿಜಯ್ ದೇವರಕೊಂಡ (Vijay Deverakonda) ಗೆಲುವು ಕಂಡಿದ್ದಾರೆ. ಸಮಂತಾ (Samantha) ಜೊತೆ ನಟಿಸಿರುವ ‘ಖುಷಿ’ ಸಿನಿಮಾ ಹಿಟ್ ಆಗಿದೆ. ಮೊದಲ ದಿನವೇ ವಿಶ್ವದಾದ್ಯಂತ ಸುಮಾರು 30.10 ಕೋಟಿ ಹಣವನ್ನು ಸಿನಿಮಾ ಗಳಿಸಿರುವುದಾಗಿ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಟ್ವೀಟ್ ಮಾಡಿದೆ. ಭಾರತದಲ್ಲಿ ಮೊದಲ ದಿನ 16 ಕೋಟಿ ಗಳಿಸಿದ್ದು, ವಾರಾಂತ್ಯದ ವೇಳೆಗೆ ಸಿನಿಮಾ ಕಲೆಕ್ಷನ್ ಇನ್ನಷ್ಟು ಉತ್ತಮಗೊಳ್ಳಲಿದೆ ಎಂದು ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಹೇಳಿದೆ.
‘ಖುಷಿ’ ಸಿನಿಮಾ ಹಿಟ್ ಆಗಿರುವ ಬೆನ್ನಲ್ಲೆ ವಿಜಯ್ ದೇವರಕೊಂಡ ಭಾವುಕಗೊಂಡಿದ್ದಾರೆ. ಅವರ ಅಭಿಮಾನಿಗಳು ಸಹ ಖುಷಿಯಾಗಿದ್ದಾರೆ. ‘ಖುಷಿ’ ಸಿನಿಮಾ ಹಿಟ್ ಆಗಿರುವ ಬೆನ್ನಲ್ಲೆ ವಿಜಯ್ ದೇವರಕೊಂಡ ಅಭಿಮಾನಿಗಳು ವಿಜಯ್ರ ಸಿನಿಮಾಗಳ ಯಶಸ್ಸಿನ ಗುಟ್ಟೊಂದನ್ನು ಕಂಡು ಹಿಡಿದಿದ್ದಾರೆ. ವಿಜಯ್ರ ಯಾವ ಸಿನಿಮಾದಲ್ಲಿ ಮದುವೆ ದೃಶ್ಯಗಳಿವೆಯೇ ಆ ಸಿನಿಮಾಗಳು ಹಿಟ್ ಆಗಿವೆ ಎಂಬುದನ್ನು ಅಭಿಮಾನಿಗಳು ಹುಡುಕಿ ತೆಗೆದಿದ್ದು ಈ ಬಗ್ಗೆ ವಿಜಯ್ ದೇವರಕೊಂಡ ಮಾತನಾಡಿದ್ದಾರೆ.
”ಸುಮ್ಮನೆ ಇಂಥಹಾ ಇಲ್ಲದ ನಂಬಿಕೆಗಳನ್ನು ನನ್ನ ಸಿನಿಮಾಗಳಿಗೆ ಅಂಟಿಸಬೇಡಿ, ಆಮೇಲೆ ಪ್ರತಿ ಸಿನಿಮಾದಲ್ಲಿಯೂ ಬಲವಂತವಾಗಿ ಯಾರದ್ದಾದರೂ ಮದುವೆ ಮಾಡಿಸಬೇಕಾಗುತ್ತದೆ. ಹಾಗಾಗುವುದು ಬೇಡ” ಎಂದು ತಮಾಷೆಯಿಂದ ಹೇಳಿದ್ದಾರೆ ವಿಜಯ್ ದೇವರಕೊಂಡ. ವಿಜಯ್ ದೇವರಕೊಂಡಗೆ ಮೊದಲ ಹಿಟ್ ತಂದುಕೊಟ್ಟ ‘ಪೆಳ್ಳಿ ಚೂಪುಲು’, ಸೂಪರ್ ಹಿಟ್ ಆದ ‘ಅರ್ಜುನ್ ರೆಡ್ಡಿ’, ‘ಗೀತ ಗೋವಿಂದಂ’ ಸಿನಿಮಾಗಳಲ್ಲಿ ಮದುವೆ ದೃಶ್ಯಗಳಿವೆ. ಈ ಸಿನಿಮಾಗಳಲ್ಲಿ ಸ್ವತಃ ನಾಯಕ ಅಂದರೆ ವಿಜಯ್ ದೇವರಕೊಂಡ ಮದುವೆ ಆಗುತ್ತಾರೆ. ಈ ಮೂರೂ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈಗ ‘ಖುಷಿ’ ಸಿನಿಮಾದಲ್ಲಿಯೂ ಮದುವೆ ದೃಶ್ಯಗಳಿವೆ.
ಇದನ್ನೂ ಓದಿ:ವಿಜಯ್ ದೇವರಕೊಂಡ ಹಿಡಿದುಕೊಂಡಿರೋ ಕೈ ಯಾರದ್ದು? ರಶ್ಮಿಕಾ ಮಂದಣ್ಣ ಬಗ್ಗೆ ಮೂಡಿದೆ ಅನುಮಾನ
‘ಖುಷಿ’ ಸಿನಿಮಾದ ಗೆಲುವಿನ ಖುಷಿ ಹಂಚಿಕೊಳ್ಳುವ ಸಂದರ್ಭದಲ್ಲಿ ತಮ್ಮ ಮದುವೆ ಬಗ್ಗೆಯೂ ವಿಜಯ್ ದೇವರಕೊಂಡ ಮಾತನಾಡಿದ್ದು, ”ಮದುವೆ ಆಗುವ ಯೋಚನೆ ಇದೆ. ನನಗೆ ಯಾವಾಗ ಸೂಕ್ತ ಎನಿಸುತ್ತದೆಯೋ ಆಗ ಮದುವೆ ಆಗುತ್ತೇನೆ. ಬಹಳ ಸರಳವಾಗಿ, ಅದ್ಧೂರಿತನ ಇಲ್ಲದೆ, ಯಾರನ್ನೂ ಆಹ್ವಾನಿಸದೆ ಮದುವೆ ಆಗುತ್ತೀನಿ. ಬುದ್ಧಿವಂತೆಯಾಗಿರುವ, ನನ್ನ ಆಸಕ್ತಿಗಳಿಗೆ, ಹವ್ಯಾಸಗಳಿಗೆ ಬೆಂಬಲ ನೀಡುವ ಹುಡುಗಿಯನ್ನು ಹುಡುಕಬೇಕೆಂದಿದ್ದೇನೆ. ಆದರೆ ಸದ್ಯಕ್ಕೆ ನನ್ನ ವೃತ್ತಿಯ ಮೇಲೆ ಗಮನ ಹರಿಸುತ್ತಿದ್ದೇನೆ. ಮುಂದೊಂದು ದಿನ ಸಿನಿಮಾ ನಿರ್ದೇಶನವನ್ನೂ ಮಾಡುವ ಆಲೋಚನೆಯೂ ಇದೆ” ಎಂದು ಭವಿಷ್ಯದ ಯೋಜನೆಗಳನ್ನು ವಿಜಯ್ ದೇವರಕೊಂಡ ಬಿಚ್ಚಿಟ್ಟಿದ್ದಾರೆ.
‘ಲೈಗರ್’ ಸಿನಿಮಾ ಬಗ್ಗೆ ಮಾತನಾಡುತ್ತಾ ಸೋಲುಗಳನ್ನು ತಾವು ಸ್ವೀಕರಿಸುವ ಬಗೆಯನ್ನು ವಿವರಿಸಿರುವ ವಿಜಯ್ ದೇವರಕೊಂಡ, ”ಸೋಲು ಯಾರಿಗೂ ಅಪರಿಚಿತವಲ್ಲ. ಎಲ್ಲರೂ ಒಂದಲ್ಲ ಒಂದು ಬಗೆಯಲ್ಲಿ, ಒಂದಲ್ಲ ಒಂದು ವಿಷಯದಲ್ಲಿ ಸೋಲು ಕಾಣುತ್ತಾರೆ. ಆದರೆ ಸೋತಾಗ ಅದರ ಬಗ್ಗೆ ಕೊರಗುವುದರ ಬದಲಿಗೆ ಅದರಿಂದ ಕಲಿಯುವ ಗುಣ ಮೈಗೂಡಿಸಿಕೊಳ್ಳಬೇಕು. ಸೋಲು ಸಾಕಷ್ಟು ವಿಷಯಗಳನ್ನು ಕಲಿಸುತ್ತದೆ” ಎಂದಿದ್ದಾರೆ. ತಾವು ಸೋಲನ್ನು ಕಲಿಕೆಯಾಗಿಯೇ ನೋಡುವುದಾಗಿ ವಿಜಯ್ ಹೇಳಿದ್ದಾರೆ.
‘ಖುಷಿ’ ಸಿನಿಮಾ ಬಿಡುಗಡೆ ಆದ ಮೊದಲ ದಿನ ವಿಶ್ವದಾದ್ಯಂತ 30.10 ಕೋಟಿ ಹಣ ಗಳಿಸಿದೆ. ಭಾರತದಲ್ಲಿ 16 ಕೋಟಿ ಗಳಿಸಿದೆ. ಈ ವಾರಾಂತ್ಯದಲ್ಲಿ ಸಿನಿಮಾದ ಕಲೆಕ್ಷನ್ ದುಪ್ಪಟ್ಟಾಗಲಿದೆ ಎಂದು ಸಿನಿಮಾ ಉದ್ಯಮ ವಿಶ್ಲೇಷಕರು ಅಂದಾಜಿಸಿದ್ದಾರೆ. ಸಿನಿಮಾ ಬಿಡುಗಡೆ ಆಗುವ ಮುನ್ನವೇ ಸುಮಾರು 50 ಕೋಟಿ ರೂಪಾಯಿಯ ಪ್ರೀ ರಿಲೀಸ್ ಬ್ಯುಸಿನೆಸ್ ಸಹ ಮಾಡಿದೆಯಂತೆ.
‘ಖುಷಿ’ ಸಿನಿಮಾ ಮನರಂಜನೆಯ ಪಕ್ಕಾ ಪ್ಯಾಕೇಜ್ ಆಗಿದ್ದು, ಪ್ರೇಮ, ಹಾಸ್ಯ, ಸುಂದರವಾದ ಹಾಡುಗಳು, ಆಕ್ಷನ್, ಕುಟುಂಬದ ಮೌಲ್ಯಗಳು ಹೀಗೆ ಹಲವು ವಿಷಯಗಳನ್ನು ಒಳಗೊಂಡಿದೆ. ಕಾಶ್ಮೀರದ ಸುಂದರ ದೃಶ್ಯಗಳು, ಮಣಿರತ್ನಂ ಸಿನಿಮಾ ಹಾಗೂ ಹಾಡುಗಳ ತುಣುಕುಗಳನ್ನು ಸಹ ‘ಖುಷಿ’ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದ್ದು, ಇದೆಲ್ಲದರ ಕಾರಣಕ್ಕೆ ಯುವಕರಿಗೆ, ಕುಟುಂಬಗಳಿಗೆ ಸಿನಿಮಾ ಮೆಚ್ಚುಗೆಯಾಗುತ್ತಿದೆ. ಸಿನಿಮಾದ ವಿಶ್ವದಾದ್ಯಂತ ಕಲೆಕ್ಷನ್ ಸೋಮವಾರದ ವೇಳೆಗೆ 100 ಕೋಟಿ ದಾಟುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ