AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಖುಷಿ’ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು? ವಿಜಯ್ ದೇವರಕೊಂಡಗೆ ಸಿಕ್ಕಿತಾ ಯಶಸ್ಸು?

Kushi: ವಿಜಯ್ ದೇವರಕೊಂಡ ಹಾಗೂ ಸಮಂತಾ ಒಟ್ಟಿಗೆ ನಟಿಸಿರುವ 'ಖುಷಿ' ಸಿನಿಮಾ ನಿನ್ನೆ (ಸೆಪ್ಟೆಂಬರ್ 1) ಬಿಡುಗಡೆ ಆಗಿದೆ. ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು? ಸಿನಿಮಾ ಹಿಟ್ಟಾ ಫ್ಲಾಪ್ ಹಾ? ಇಲ್ಲಿದೆ ಮಾಹಿತಿ.

'ಖುಷಿ' ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು? ವಿಜಯ್ ದೇವರಕೊಂಡಗೆ ಸಿಕ್ಕಿತಾ ಯಶಸ್ಸು?
ಖುಷಿ
ಮಂಜುನಾಥ ಸಿ.
|

Updated on:Sep 02, 2023 | 9:28 PM

Share

ನಟ ವಿಜಯ್ ದೇವರಕೊಂಡ (Vijay Deverakonda) ನಟಿಸಿರುವ ಸಿನಿಮಾ ಒಂದು ಹಿಟ್ ಆಗಿ ಐದು ವರ್ಷಗಳಾಗಿವೆ. 2018ರಲ್ಲಿ ಬಿಡುಗಡೆ ಆಗಿದ್ದ ‘ಗೀತಾ ಗೋವಿಂದಂ’ ಸಿನಿಮಾದ ಬಳಿಕ ವಿಜಯ್ ದೇವರಕೊಂಡ ನಟನೆಯ ಇನ್ಯಾವುದೇ ಸಿನಿಮಾ ಹಿಟ್ ಆಗಿರಲಿಲ್ಲ. ವಿಜಯ್​ರ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ (Pan India) ಸಿನಿಮಾ ‘ಲೈಗರ್’ ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಇರಿಸಲಾಗಿತ್ತು, ಆದರೆ ಆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸಲಿಲ್ಲ. ಇದೀಗ ವಿಜಯ್ ಅಭಿನಯದ ಹೊಸ ಸಿನಿಮಾ ‘ಖುಷಿ’ ಬಿಡುಗಡೆ ಆಗಿದೆ. ಈ ಸಿನಿಮಾ ಹಿಟ್ ಆಯ್ತಾ? ಫ್ಲಾಪ್ ಆಯ್ತ? ಮೊದಲ ದಿನದ ಕಲೆಕ್ಷನ್ ಎಷ್ಟು?

ಸಮಂತಾ ಹಾಗೂ ವಿಜಯ್ ದೇವರಕೊಂಡ ನಟನೆಯ ‘ಖುಷಿ’ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಮೊದಲ ದಿನ ‘ಖುಷಿ’ ಸಿನಿಮಾ ವಿಶ್ವದಾದ್ಯಂತ  30.10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಬಗ್ಗೆ ಸಿನಿಮಾದ ನಿರ್ಮಾಣ ಸಂಸ್ಥೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಸಾಧಾರಣ ಬಜೆಟ್​ನಲ್ಲಿಯೇ ನಿರ್ಮಾಣವಾಗಿರುವ ‘ಖುಷಿ’ ಸಿನಿಮಾಕ್ಕೆ ಇದು ಬಹಳ ಒಳ್ಳೆಯ ಕಲೆಕ್ಷನ್ ಎನ್ನಬಹುದು. ಮುಂದಿನ ಎರಡು ಮೂರು ದಿನಗಳಲ್ಲಿ ಇದೇ ಕಲೆಕ್ಷನ್ ಅನ್ನು ಉಳಿಸಿಕೊಂಡರೆ ಸಿನಿಮಾ ಸೂಪರ್ ಹಿಟ್ ಪಟ್ಟಿ ಸೇರಲಿದೆ.

‘ಖುಷಿ’ ಸಿನಿಮಾ ಕಲೆಕ್ಷನ್ ಅಧಿಕೃತ ಟ್ವೀಟ್

‘ಖುಷಿ’ ಸಿನಿಮಾವು ಪ್ರೇಮಕತೆಯನ್ನು ಒಳಗೊಂಡಿದೆ. ಅದರಲ್ಲಿಯೂ ಮದುವೆಯ ಬಳಿಕ ಪ್ರೀತಿ ಈ ಸಿನಿಮಾದ ಕಥಾವಸ್ತು. ಸಿನಿಮಾದಲ್ಲಿ ಹಾಸ್ಯ, ಫೈಟ್​ಗಳು, ರೊಮ್ಯಾನ್ಸ್, ಸಂದೇಶ, ಸುಂದರ ಸಂಗೀತ ಎಲ್ಲವೂ ಇದೆ. ಪೋಷಕರನ್ನು ಎದುರು ಹಾಕಿಕೊಂಡು ಮದುವೆಯಾದ ಜೋಡಿ ಮದುವೆಯ ಬಳಿಕ ಏನೇನು ಸಮಸ್ಯೆಗಳನ್ನು ಎದುರಿಸುತ್ತಾರೆ. ಮದುವೆಗೆ ಮುಂಚೆ ಇದ್ದ ಪ್ರೇಮ ಮದುವೆಯಾದ ಬಳಿಕ ಹಾಗೆಯೇ ಉಳಿಯಿತೇ, ಪ್ರೇಮವನ್ನು ಉಳಿಸಿಕೊಳ್ಳಲು ಏನು ತ್ಯಾಗ ಮಾಡಬೇಕಾಯ್ತು ಎಂಬುದೇ ಕತೆ.

ಈ ಸಿನಿಮಾ ಮೂಲಕ ವಿಜಯ್ ದೇವರಕೊಂಡ ಹಾಗೂ ಸಮಂತಾ ಎರಡನೇ ಭಾರಿ ಒಟ್ಟಿಗೆ ನಟಿಸಿದ್ದಾರೆ. ಇಬ್ಬರ ನಡುವಿನ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್ ಆಗಿದೆ ಎನ್ನುತ್ತಿದ್ದಾರೆ ಸಿನಿಮಾ ನೋಡಿದ ಮಂದಿ. ಲವ್ ಸ್ಟೋರಿ ಸಿನಿಮಾಗಳ ಜನಪ್ರಿಯತೆ ಗಳಿಸಿದ್ದ ವಿಜಯ್ ದೇವರಕೊಂಡಗೆ ಈಗ ಮತ್ತೆ ಲವ್ ಸ್ಟೋರಿ ಸಿನಿಮಾನೇ ಕೈ ಹಿಡಿದಂತಿದೆ.

ನಿನ್ನೆ ತುಸು ಭಾವುಕವಾಗಿ ಟ್ವೀಟ್ ಮಾಡಿದ್ದ ನಟ ವಿಜಯ್ ದೇವರಕೊಂಡ, ”ನಾನು ಒಳ್ಳೆಯ ಸಿನಿಮಾ ಒಂದನ್ನು ಮಾಡಲು ತಾಳ್ಮೆಯಿಂದ ನೀವು ಐದು ವರ್ಷ ಕಾದಿದ್ದೀರಿ. ಇಂದು ಬೆಳಿಗ್ಗೆ ಎದ್ದ ಕೂಡಲೇ ಹಲವು ಕಡೆಗಳಿಂದ ಸಂದೇಶಗಳು ಬಂದಿವೆ, ಸಿನಿಮಾದ ಬಗ್ಗೆ ಧನಾತ್ಮಕ ಸಂದೇಶಗಳನ್ನು ದೇಶದ ಹಲವು ಮೂಲೆಗಳಿಂದ ಜನ ಕಳಿಸಿದ್ದಾರೆ. ಸಂದೇಶಗಳನ್ನು ನೋಡಿ ಭಾವುಕನಾಗಿ ಕಣ್ಣೀರು ಹಾಕಿಬಿಟ್ಟೆ. ನೀವು ಗೆಳೆಯರು, ಕುಟುಂಬದೊಟ್ಟಿಗೆ ಸಿನಿಮಾಕ್ಕೆ ಹೋಗಿ ಎಂಜಾಯ್ ಮಾಡಿ. ಖಂಡಿತ ನೀವು ಎಂಜಾಯ್ ಮಾಡುತ್ತೀರೆಂಬ ನಂಬಿಕೆ ಇದೆ” ಎಂದಿದ್ದಾರೆ.

‘ಖುಷಿ’ ಸಿನಿಮಾವನ್ನು ಶಿವ ನಾರಾಯಣ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ‘ಮಜಿಲಿ’, ‘ಟಕ್ ಜಗದೀಶ್’, ‘ನಿನ್ನು ಕೋರಿ’ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಮಲಯಾಳಂನ ಹೇಷಮ್ ಅಬ್ದುಲ್ ವಹಾಬ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಮೈತ್ರಿ ಮೂವಿ ಪ್ರೊಡಕ್ಷನ್ಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:47 pm, Sat, 2 September 23