‘ಗರ್ಲ್ಫ್ರೆಂಡ್’ ರಶ್ಮಿಕಾ ಮಂದಣ್ಣ ಬಗ್ಗೆ ವಿಜಯ್ ದೇವರಕೊಂಡ ಹೇಳಿದ್ದೇನು?
Vijay Deverakonda-Rashmika Mandanna: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಪರಸ್ಪರ ವಿವಾಹವಾಗಲಿರುವುದು ಗುಟ್ಟಾಗಿ ಉಳಿದಿಲ್ಲ. ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್ಫ್ರೆಂಡ್’ ಸಿನಿಮಾ ಹಿಟ್ ಆಗಿದ್ದು, ಸಿನಿಮಾದ ಸಕ್ಸಸ್ಮೀಟ್ಗೆ ವಿಜಯ್ ದೇವರಕೊಂಡ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ತಮ್ಮ ಭಾವಿ ಪತ್ನಿ ರಶ್ಮಿಕಾ ಮಂದಣ್ಣ ಬಗ್ಗೆ ವಿಜಯ್ ಹೆಮ್ಮೆಯಿಂದ ಮಾತನಾಡಿದರು. ವಿಜಯ್ ಹೇಳಿದ್ದೇನು? ಇಲ್ಲಿದೆ ಮಾಹಿತಿ...

ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ ಪರಸ್ಪರ ಪ್ರೀತಿಸುತ್ತಿರುವುದು, ಶೀಘ್ರವೇ ವಿವಾಹ ಆಗಲಿರುವುದು ಈಗ ಗುಟ್ಟೇನೂ ಅಲ್ಲ. ಇಬ್ಬರೂ ಸಹ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಈ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಕಳೆದ ವಾರ ರಶ್ಮಿಕಾ ನಟನೆಯ ‘ದಿ ಗರ್ಲ್ಫ್ರೆಂಡ್ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದೆ. ನಿನ್ನೆ ಸಿನಿಮಾದ ಸಕ್ಸಸ್ಮೀಟ್ ಆಯೋಜನೆ ಮಾಡಲಾಗಿತ್ತು, ಅತಿಥಿಯಾಗಿ ವಿಜಯ್ ದೇವರಕೊಂಡ ಆಗಮಿಸಿದ್ದರು. ಈ ವೇಳೆ, ತಮ್ಮ ಗರ್ಲ್ಫ್ರೆಂಡ್ ರಶ್ಮಿಕಾ ಬಗ್ಗೆ ಮನತುಂಬಿ ಮಾತನಾಡಿದರು ವಿಜಯ್.
‘ನಾನು ರಶ್ಮಿಕಾ ಅವರನ್ನು ವರ್ಷಗಳಿಂದಲೂ ಬಲ್ಲೆ. ‘ಗೀತ ಗೋವಿಂದಂ’ ಸಿನಿಮಾನಲ್ಲಿ ನಟಿಸುವಾಗ ಇನ್ನೂ ಯುವತಿ ಈಗ ಜವಾಬ್ದಾರಿಯುತ ಮಹಿಳೆ ಆಗಿದ್ದಾರೆ. ‘ದಿ ಗರ್ಲ್ಫ್ರೆಂಡ್’ ಸಿನಿಮಾದಲ್ಲಿ ರಶ್ಮಿಕಾ ಬೂಮ ಪಾತ್ರದಲ್ಲಿ ನಟಿಸಿದ್ದು, ನಿಜ ಜೀವನದಲ್ಲಿಯೂ ಸಹ ರಶ್ಮಿಕಾ ಬೂಮ ಪಾತ್ರದ ವ್ಯಕ್ತಿತ್ವವನ್ನೇ ಹೊಂದಿದ್ದಾರೆ. ಸದಾ ಇತರರ ಬಗ್ಗೆ ಯೋಚಿಸುವ ಜೀವ ರಶ್ಮಿಕಾ ಅವರದ್ದು. ನನ್ನ ಸುತ್ತ ಇರುವವರು ಖುಷಿಯಾಗಿರಬೇಕು, ಸೆಟ್ನಲ್ಲಿ ಎಲ್ಲರೂ ಖುಷಿಯಾಗಿರಬೇಕು, ಯಾರಿಗೂ ನೋವಾಗಬಾರದು ಎಂದೇ ಸದಾ ಯೋಚಿಸುತ್ತಾರೆ, ಅದಕ್ಕಾಗಿ ತಮಗೆ ಕಷ್ಟವಾದರೂ ಸಹಿಸಿಕೊಳ್ಳುತ್ತಾರೆ’ ಎಂದಿದ್ದಾರೆ ವಿಜಯ್.
‘ನನಗೆ ಯಾರಾದರೂ ನೆಗೆಟಿವ್ ಆಗಿ ಮಾತನಾಡಿದರೆ, ಬೇಸರ ಪಡಿಸಿದರೆ ನಾನು ತಿರುಗಿ ಬೀಳುತ್ತೇನೆ ಆದರೆ ರಶ್ಮಿಕಾ ಎಂದಿಗೂ ಹಾಗೆ ಮಾಡುವುದಿಲ್ಲ, ಯಾರು ಏನೇ ಹೇಳಲಿ, ಇಡೀ ಪ್ರಪಂಚವೇ ಆಕೆಯನ್ನು ಟೀಕೆ ಮಾಡಲಿ, ಒಂದೇ ಒಂದು ಮಾತು ಸಹ ಎದುರಾಡದೆ ಮುಂದೆ ಹೆಜ್ಜೆ ಇಟ್ಟು ಹೋಗುತ್ತಿರುತ್ತಾರೆ. ನಗುತ್ತಲೇ ಇರುತ್ತಾರೆ, ನೋವುಂಟು ಮಾಡಿದವರಿಗೂ ಸಹ ಒಳಿತನ್ನೇ ಕೋರುತ್ತಾರೆ. ತನ್ನ ಕೆಲಸದ ಬಗ್ಗೆ ಮಾತ್ರವೇ ಗಮನವಹಿಸುತ್ತಾರೆ. ಸೆಟ್ನಲ್ಲಿ ಸಹ ಯಾವ ಕೆಲಸ ಒಪ್ಪಿಸಿದರೂ ಮಾಡುತ್ತಿದ್ದರು. ಎಷ್ಟೇ ಕಠಿಣವಾದ ನಿಯಮ ಇದ್ದರೂ ಪಾಲಿಸುತ್ತಿದ್ದರು. ಒಟ್ಟಾರೆ, ನನ್ನಿಂದ ಇತರರಿಗೆ ನೋವು, ತೊಂದರೆ ಆಗಬಾರದು ಎಂಬುದೇ ಅವರ ಆಶಯ ಆಗಿರುತ್ತದೆ’ ಎಂದಿದ್ದಾರೆ ವಿಜಯ್.
ಇದನ್ನೂ ಓದಿ:ಎಲ್ಲರ ಎದುರೇ ರಶ್ಮಿಕಾ ಮಂದಣ್ಣಗೆ ಮುತ್ತಿಟ್ಟ ವಿಜಯ್ ದೇವರಕೊಂಡ; ವಿಡಿಯೋ ನೋಡಿ
ಇನ್ನು ರಶ್ಮಿಕಾ ಸಹ ವಿಜಯ್ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದು, ‘ಈ ಸಿನಿಮಾ ಆರಂಭ ಆದಾಗಿನಿಂದಲೂ ನೀನು ಈ ಸಿನಿಮಾದ ಭಾಗವಾಗಿದ್ದೀಯ. ಈಗ ನೀನು ಸಿನಿಮಾದ ಸಕ್ಸಸ್ನ ಭಾಗವಾಗಿದ್ದೀಯಾ. ನನ್ನ ಈ ಜರ್ನಿಯಲ್ಲಿ ನೀನಿದ್ದೆ. ಎಲ್ಲರ ಜೀವನದಲ್ಲೂ ವಿಜಯ್ದೇವರಕೊಂಡ ಅಂತಹ ಹುಡುಗ ಇರಲಿ. ಅದು ಆಶೀರ್ವಾದದಂತೆ ಭಾಸವಾಗುತ್ತದೆ’ ಎಂದು ರಶ್ಮಿಕಾ ಹೇಳಿದರು.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಳೆದ ಕೆಲವಾರು ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದು, ಇತ್ತೀಚೆಗಷ್ಟೆ ಈ ಜೋಡಿ ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಶೀಘ್ರವೇ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ವಿವಾಹ ಸಹ ಆಗಲಿದ್ದಾರಂತೆ. ರಾಜಸ್ಥಾನದಲ್ಲಿ ಅದ್ಧೂರಿಯಾಗಿ ಇವರಿಬ್ಬರ ವಿವಾಹ ನಡೆಯಲಿದೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




