‘ಜೈಲರ್ 2’ ಸಿನಿಮಾದಿಂದ ಬಾಲಯ್ಯ ಔಟ್? ವಿಜಯ್ ಸೇತುಪತಿಗೆ ದೊಡ್ಡ ಚಾನ್ಸ್

ರಜನಿಕಾಂತ್ ಅಭಿನಯದ ‘ಜೈಲರ್ 2’ ಸಿನಿಮಾದ ಪಾತ್ರವರ್ಗದಲ್ಲಿ ಕೆಲವು ಬದಲಾವಣೆ ಆಗಿದೆ. ನಂದಮೂರಿ ಬಾಲಕೃಷ್ಣ ಅವರು ಈ ಸಿನಿಮಾದಿಂದ ಹೊರಗೆ ನಡೆದಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಬಾಲಯ್ಯ ಅವರ ಬದಲು ವಿಜಯ್ ಸೇತುಪತಿ ಅವರು ‘ಜೈಲರ್ 2’ ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿದೆ.

‘ಜೈಲರ್ 2’ ಸಿನಿಮಾದಿಂದ ಬಾಲಯ್ಯ ಔಟ್? ವಿಜಯ್ ಸೇತುಪತಿಗೆ ದೊಡ್ಡ ಚಾನ್ಸ್
Vijay Sethupathi, Balayya, Rajinikanth

Updated on: Nov 28, 2025 | 9:00 PM

2026ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಜೈಲರ್ 2’ (Jailer 2) ಸಿನಿಮಾ ಕೂಡ ಇದೆ. ರಜನಿಕಾಂತ್ ನಟನೆಯ ಈ ಸಿನಿಮಾದಲ್ಲಿ ಹಲವು ಸ್ಟಾರ್ ಕಲಾವಿದರು ಪಾತ್ರ ಮಾಡುತ್ತಿದ್ದಾರೆ. ಟಾಲಿವುಡ್ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಈಗ ಬೇರೆಯದೇ ಸುದ್ದಿ ಕೇಳಿಬಂದಿದೆ. ಬಾಲಯ್ಯ ಅವರು ‘ಜೈಲರ್ 2’ ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ಅವರ ಬದಲು ಕಾಲಿವುಡ್​ನ ಜನಪ್ರಿಯ ನಟ ವಿಜಯ್ ಸೇತುಪತಿ (Vijay Sethupathi) ಅವರಿಗೆ ಅವಕಾಶ ನೀಡಲಾಗಿದೆ ಎಂದು ಸುದ್ದಿ ಹರಡಿದೆ.

ಸೆಲ್ಸನ್ ದಿಲೀಪ್ ಕುಮಾರ್ ಅವರು ‘ಜೈಲರ್ 2’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಾಲಯ್ಯ ಅವರು ಒಂದು ಪವರ್​ಫುಲ್ ಅತಿಥಿ ಪಾತ್ರವನ್ನು ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರು ಆ ಪಾತ್ರವನ್ನು ಈಗ ಮಾಡುತ್ತಿಲ್ಲ. ಆದರೆ ನಿಖರ ಕಾರಣ ಏನು ಎಂಬುದು ಸದ್ಯಕ್ಕೆ ಬಹಿರಂಗ ಆಗಿಲ್ಲ.

ನಂದಮೂರಿ ಬಾಲಕೃಷ್ಣ ಅವರನ್ನು ಗಮನದಲ್ಲಿ ಇಟ್ಟುಕೊಂಡೇ ಈ ಪಾತ್ರವನ್ನು ಬರೆಯಲಾಗಿತ್ತು. ಆದರೆ ಈಗ ಆ ಪಾತ್ರವನ್ನು ವಿಜಯ್ ಸೇತುಪತಿ ಅವರು ಮಾಡಬೇಕಿದೆ. ವರದಿಗಳ ಪ್ರಕಾರ, ವಿಜಯ್ ಸೇತುಪತಿ ಅವರು ಈಗಾಗಲೇ ‘ಜೈಲರ್ 2’ ಸಿನಿಮಾದ ಶೂಟಿಂಗ್​​ನಲ್ಲಿ ಪಾಲ್ಗೊಂಡಿದ್ದಾರೆ. ಕಥೆಗೆ ಟ್ವಿಸ್ಟ್ ನೀಡುವ ಪಾತ್ರ ಇದಾಗಿದ್ದು, ಅಭಿಮಾನಿಗಳಿಗೆ ಸಖತ್ ಇಷ್ಟ ಆಗುತ್ತದೆ ಎನ್ನಲಾಗಿದೆ.

ರಜನಿಕಾಂತ್ ಅವರ ಜೊತೆ ವಿಜಯ್ ಸೇತುಪತಿ ನಟಿಸುತ್ತಿರುವುದು ಇದು 2ನೇ ಬಾರಿ. ಈ ಮೊದಲು ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಿದ ‘ಪೆಟ್ಟ’ ಸಿನಿಮಾದಲ್ಲಿ ವಿಜಯ್ ಸೇತುಪತಿ ಮತ್ತು ರಜನಿಕಾಂತ್ ಅವರು ತೆರೆ ಹಂಚಿಕೊಂಡಿದ್ದರು. ಆ ಸಿನಿಮಾದಲ್ಲಿ ವಿಜಯ್ ಸೇತುಪತಿ ಅವರು ವಿಲನ್ ಪಾತ್ರ ಮಾಡಿದ್ದರು. ಈಗ ‘ಜೈಲರ್ 2’ ಸಿನಿಮಾದಲ್ಲಿ ಅವರಿಬ್ಬರು ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ರಜನಿಕಾಂತ್ ಜೊತೆ ತೆರೆ ಹಂಚಿಕೊಳ್ಳಲು ಮೇಘನಾ ರಾಜ್ ರೆಡಿ? ‘ಜೈಲರ್ 2’ನಲ್ಲಿ ಪ್ರಮುಖ ಪಾತ್ರ

‘ಹ್ಯಾಟ್ರಿಕ್ ಹೀರೋ’ ಶಿವರಾಜ್​ಕುಮಾರ್ ಕೂಡ ‘ಜೈಲರ್ 2’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಆ ಕಾರಣದಿಂದಲೂ ಈ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ. 2026ರಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಫೆಬ್ರವರಿ ವೇಳೆಗೆ ಸಿನಿಮಾದ ಶೂಟಿಂಗ್ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ‘ಸನ್ ಪಿಕ್ಚರ್ಸ್’ ಮೂಲಕ ಈ ಸಿನಿಮಾ ಅದ್ದೂರಿಯಾಗಿ ನಿರ್ಮಾಣ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.