
ತಮಿಳು ನಟ ವಿಜಯ್ ಸೇತುಪತಿ 54ನೇ ಇಂಟರ್ನ್ಯಾಷನಲ್ ಆ್ಯಮಿ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನ್ಯೂಯಾರ್ಕ್ ನಗರದಲ್ಲಿ ನವೆಂಬರ್ 23ರಂದು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಈ ಪ್ರತಿಷ್ಠಿತ ವೇದಿಕೆಯಲ್ಲಿ ಪ್ರಶಸ್ತಿ ಪ್ರಸ್ತುತಪಡಿಸುತ್ತಿರುವ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ವಿಜಯ್ ಸೇತುಪತಿ ಭಾಜನರಾಗಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತೀಯ ಚಿತ್ರರಂಗದ ಹಿರಿಮೆ ಮತ್ತಷ್ಟು ಎತ್ತರಕ್ಕೆ ಏರಿದೆ.
ಅಮೆರಿಕ ಹೊರತುಪಡಿಸಿ ವಿಶ್ವದ ವಿವಿಧ ದೇಶಗಳ ಅತ್ಯುತ್ತಮ ಕಿರುತೆರೆ ಹಾಗೂ ಒಟಿಟಿ ಕಾರ್ಯಕ್ರಮಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಪ್ರಪಂಚದಾದ್ಯಂತ ಹಲವು ದಿಗ್ಗಜರು ಒಂದಾಗಲಿದ್ದಾರೆ.ಭಾರತೀಯ ಕಲಾವಿದರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ.
ಪ್ರಸ್ತುತ ವಿಜಯ್ ಸೇತುಪತಿ ತಮ್ಮ ವೃತ್ತಿಜೀವನದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಅವರ ಅಭಿನಯದ ‘ಬತ್ತಾ’ ಸಿನಿಮಾ ತೆರೆಗೆ ಬಂದಿದೆ. ಬಾಲಾಜಿ ತರಣೀತಾರನ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಗ್ಯಾಂಗ್ಸ್ಟರ್ ಒಬ್ಬನ ಬದುಕಿನ ಬದಲಾವಣೆಯ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ವಿಜಯ್ ಸೇತುಪತಿ ಅವರ ವಿಭಿನ್ನ ನಟನೆಗೆ ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.
ಮುಂದಿನ ದಿನಗಳಲ್ಲಿ ಅವರು ದೊಡ್ಡ ಬ್ಯಾನರ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಣಿರತ್ನಂ ನಿರ್ದೇಶನದ ‘ಇಂಜಿ ವೆಳ್ಳಮ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಹಾಗೆಯೇ ತ್ಯಾಗರಾಜನ್ ಕುಮಾರರಾಜ ನಿರ್ದೇಶನದ ‘ಪಾಕೆಟ್ ನಾವೆಲ್’ ಚಿತ್ರದಲ್ಲೂ ವಿಜಯ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ರಾಜ್ ಬಿ ಶೆಟ್ಟಿ ಹಾಗೂ ಮಾಳವಿಕಾ ಮೋಹನನ್ ಪ್ರಮುಖ ಪಾತ್ರದಲ್ಲಿದ್ದಾರೆ.
ಇದನ್ನೂ ಓದಿ: ಒಟಿಟಿಯಲ್ಲಿ ಕನ್ನಡದಲ್ಲೂ ಇರುವ ವಿಜಯ್ ಸೇತುಪತಿಯ ಹೊಸ ಚಿತ್ರವನ್ನು ಮಿಸ್ ಮಾಡಿಕೊಳ್ಳಲೇಬೇಡಿ
ಇತ್ತೀಚೆಗೆ ಸೂಪರ್ ಹಿಟ್ ಆಗಿದ್ದ ‘ಮಹಾರಾಜ’ ಚಿತ್ರದ ಬಗ್ಗೆಯೂ ಅವರು ಹೊಸ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ಹಾಲಿವುಡ್ನಲ್ಲಿ ರಿಮೇಕ್ ಆಗಲಿದೆ. ಇದರ ಜೊತೆಗೆ ‘ಮಹಾರಾಜ 2’ ಭಾಗಕ್ಕೂ ಕಥೆ ಸಿದ್ಧವಾಗಿದೆ. ನಿರ್ದೇಶಕ ನಿತಿಲನ್ ಸಾಮಿನಾಥನ್ ಈಗಾಗಲೇ ಕಥೆಯನ್ನು ವಿಜಯ್ ಸೇತುಪತಿಗೆ ವಿವರಿಸಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾದ ಅಧಿಕೃತ ಘೋಷಣೆ ಹೊರಬೀಳಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.