The Kerala Story: ಮೈಸೂರಲ್ಲಿ 215 ಮಹಿಳೆಯರಿಗೆ ಉಚಿತವಾಗಿ ‘ದಿ ಕೇರಳ ಸ್ಟೋರಿ’ ಸಿನಿಮಾ ತೋರಿಸಿದ ವಿಶ್ವ ಹಿಂದೂ ಪರಿಷತ್​

|

Updated on: Jun 02, 2023 | 4:50 PM

Vishwa Hindu Parishad: ವಿಶ್ವ ಹಿಂದೂ ಪರಿಷತ್​ ವತಿಯಿಂದ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ ನೂರಾರು ಮಹಿಳೆಯರು ಸಿನಿಮಾ ವೀಕ್ಷಿಸಿದ್ದಾರೆ. ಈ ವೇಳೆ ‘ಭಾರತ್​ ಮಾತಾ ಕಿ ಜೈ, ವಂದೇ ಮಾತರಂ, ಸನಾತನ ಧರ್ಮಕ್ಕೆ ಜೈ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಲಾಗಿದೆ.

The Kerala Story: ಮೈಸೂರಲ್ಲಿ 215 ಮಹಿಳೆಯರಿಗೆ ಉಚಿತವಾಗಿ ‘ದಿ ಕೇರಳ ಸ್ಟೋರಿ’ ಸಿನಿಮಾ ತೋರಿಸಿದ ವಿಶ್ವ ಹಿಂದೂ ಪರಿಷತ್​
‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರದರ್ಶನ
Follow us on

ಹಲವು ಕಾರಣಗಳಿಂದಾಗಿ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಚರ್ಚೆ ಹುಟ್ಟುಹಾಕಿದೆ. ದೇಶಾದ್ಯಂತ ಸಂಚಲನ ಮೂಡಿಸಿದ ಈ ಚಿತ್ರವನ್ನು ಕೋಟ್ಯಂತರ ಜನರು ವೀಕ್ಷಿಸಿದ್ದಾರೆ. ಸತತ ನಾಲ್ಕನೇ ವಾರವೂ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಂಡಿದೆ. ಒಂದಷ್ಟು ಕಡೆಗಳಲ್ಲಿ ಚಿತ್ರವನ್ನು ಉಚಿತವಾಗಿ ತೋರಿಸುವ ಕೆಲಸ ಆಗಿದೆ. ಮೈಸೂರಿನಲ್ಲಿ ವಿಶ್ವ ಹಿಂದೂ ಪರಿಷತ್​ (Vishwa Hindu Parishad) ವತಿಯಿಂದ 215 ಮಹಿಳೆಯರಿಗೆ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ಫ್ರೀ ಆಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಮೈಸೂರಿನ ಐನಾಕ್ಸ್​ ಮಲ್ಟಿಪ್ಲೆಕ್ಸ್​ನಲ್ಲಿ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಿನಿಮಾದಲ್ಲಿ ವಿವಾದಾತ್ಮಕ ಕಥಾಹಂದರ ಇದೆ. ಕೇರಳದಲ್ಲಿ ನಡೆದಿದೆ ಎನ್ನಲಾದ ಲವ್​ ಜಿಹಾದ್​ ಮತ್ತು ಮತಾಂತರದ ಘಟನೆಗಳನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಸುದೀಪ್ತೋ ಸೇನ್​ ಅವರು ನಿರ್ದೇಶನ ಮಾಡಿದ್ದು, ಅದಾ ಶರ್ಮಾ (Adah Sharma) ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದುಂಟು. ಆದರೆ ಹಿಂದೂ ಪರ ಸಂಘಟನೆಗಳು ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಬೆಂಬಲ ಸೂಚಿಸಿವೆ. ವಿಶ್ವ ಹಿಂದೂ ಪರಿಷತ್​ ವತಿಯಿಂದ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ ನೂರಾರು ಮಹಿಳೆಯರು ಸಿನಿಮಾ ವೀಕ್ಷಿಸಿದ್ದಾರೆ. ಈ ವೇಳೆ ‘ಭಾರತ್​ ಮಾತಾ ಕಿ ಜೈ, ವಂದೇ ಮಾತರಂ, ಸನಾತನ ಧರ್ಮಕ್ಕೆ ಜೈ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಲಾಗಿದೆ.

ಇದನ್ನೂ ಓದಿ: ದಿ ಕೇರಳ ಸ್ಟೋರಿ ಸಿನಿಮಾ ನೋಡಿ, ಪ್ರಿಯಕರನ ವಿರುದ್ಧ ದೂರು ನೀಡಿದ ಮಾಡೆಲ್

‘ದಿ ಕೇರಳ ಸ್ಟೋರಿ’ ಸಿನಿಮಾ 25 ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಂಡು, ಮುನ್ನುಗ್ಗುತ್ತಿದೆ. ಮೇ 5ರಂದು ಈ ಚಿತ್ರ ಬಿಡುಗಡೆ ಆಯಿತು. ನೋಡನೋಡುತ್ತಿದ್ದಂತೆಯೇ 25 ದಿನ ಕಳೆದು ಹೋಗಿದೆ. ಇನ್ನೂ ಅನೇಕ ಚಿತ್ರಮಂದಿರಗಳಲ್ಲಿ ಈ ಚಿತ್ರ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಅದಾ ಶರ್ಮಾ ಅವರ ವೃತ್ತಿಜೀವನಕ್ಕೆ ಈ ಸಿನಿಮಾದಿಂದ ದೊಡ್ಡ ಮೈಲೇಜ್​ ಸಿಕ್ಕಿದೆ. ನಿರ್ದೇಶಕ ಸುದೀಪ್ತೋ ಸೇನ್​ ಅವರ ಖ್ಯಾತಿ ಕೂಡ ಹೆಚ್ಚಾಗಿದೆ. ನಾಲ್ಕನೇ ವೀಕೆಂಡ್​ನಲ್ಲೂ ಅಬ್ಬರಿಸಿದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಚಿನ್ನದ ಬೆಳೆ ತೆಗೆದಿದೆ. ಈವರೆಗೂ 225 ಕೋಟಿ ರೂಪಾಯಿಗಿಂತಲೂ ಅಧಿಕ ಕಲೆಕ್ಷನ್​ ಆಗಿದೆ. ಇಂದಿಗೂ ‘ದಿ ಕೇರಳ ಸ್ಟೋರಿ’ ಸಿನಿಮಾ ಚರ್ಚೆಯಲ್ಲಿದೆ.

ಇದನ್ನೂ ಓದಿ: ಮಾರಿಷಸ್: ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶಿಸುತ್ತಿದ್ದ ಚಿತ್ರಮಂದಿರಕ್ಕೆ ಬಾಂಬ್ ಬೆದರಿಕೆ

ಈ ಸಿನಿಮಾದ ಒಟಿಟಿ ರಿಲೀಸ್​ ಬಗ್ಗೆ ಹಲವು ಬಗೆಯ ಗಾಸಿಪ್​ಗಳು ಹಬ್ಬಿವೆ. 5ನೇ ವೀಕೆಂಡ್​ನಲ್ಲೂ ಹೆಚ್ಚಿನ ಜನರು ಈ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ ಇದೆ. ಹಾಗಾಗಿ ಈ ಸಮಯದಲ್ಲಿ ಒಟಿಟಿಯಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವುದು ಸೂಕ್ತ ನಿರ್ಧಾರ ಅಲ್ಲ ಎಂಬುದು ಟ್ರೇಡ್​ ತಜ್ಞರ ಅಭಿಪ್ರಾಯ. ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ 250 ಕೋಟಿ ರೂಪಾಯಿ ಗಳಿಸಬಹುದು ಎಂದು ಕೆಲವರು ಅಂದಾಜಿಸಿದ್ದಾರೆ. ಆದರೆ ಅದು ನಿಜವಾಗುವುದು ಅನುಮಾನ ಎನ್ನಲಾಗುತ್ತಿದೆ. ಸದ್ಯಕ್ಕೆ ‘ದಿ ಕೇರಳ ಸ್ಟೋರಿ’ ಸಿನಿಮಾದ ನಿರ್ಮಾಪಕರು ಯಾವುದೇ ಒಟಿಟಿ ಸಂಸ್ಥೆಯ ಜೊತೆ ಡೀಲ್​ ಮುಗಿಸಿಲ್ಲ ಎಂಬುದು ತಿಳಿದುಬಂದಿದೆ. ಶೀಘ್ರದಲ್ಲೇ ಒಟಿಟಿ ರಿಲೀಸ್​ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿ ಸಿಗಲಿ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ. ವಿಪುಲ್​ ಅಮೃತ್​ಲಾಲ್​ ಶಾ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.