ಜೈ ಡೇರ್ಡೆವಿಲ್, ಜೈ ತೇಜಸ್ವಿ ಎಂದ ಅಭಿಮಾನಿ ಯೋಗರಾಜ್ ಭಟ್
Daredevil Mustafa: ಡೇರ್ಡೆವಿಲ್ ಮುಸ್ತಾಫಾ ಸಿನಿಮಾ ವೀಕ್ಷಿಸಿದ ನಿರ್ದೇಶಕ ಯೋಗರಾಜ್ ಭಟ್, ಚಿತ್ರತಂಡವನ್ನು ಶ್ಲಾಘಿಸಿದ್ದಾರೆ.
ಪೂರ್ಣಚಂದ್ರ ತೇಜಸ್ವಿ (Poornachandra Tejaswi) ಅವರ ಕತೆ ಆಧರಿಸಿದ ಹೊಸ ಸಿನಿಮಾ ಡೇರ್ಡೆವಿಲ್ ಮುಸ್ತಾಫಾ (Daredevil Mustafa) ಸಹೃದಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಶಶಾಂಕ ಸೋಗಾಲ ನಿರ್ದೇಶನ ಮಾಡಿ ಬಹುತೇಕ ಹೊಸಹುಡುಗರೇ ನಟಿಸಿರುವ ಈ ಸಿನಿಮಾದ ಬಗ್ಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಾಹಿತಿಗಳು, ಹಿರಿಯ ಸಿನಿಮಾ ನಿರ್ದೇಶಕರುಗಳು, ನಟರು ಸೇರಿದಂತೆ ಸಂಸದ ಪ್ರತಾಪ್ ಸಿಂಹ ಹಾಗೂ ಇನ್ನೂ ಅನೇಕರು ಸಿನಿಮಾ ನೋಡಿ ವಾವ್ ಎಂದಿದ್ದಾರೆ. ಇದೀಗ ಈ ಪಟ್ಟಿಗೆ ನಿರ್ದೇಶಕ ಯೋಗರಾಜ್ ಭಟ್ (Yogaraj Bhatt) ಸಹ ಸೇರಿಕೊಂಡಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಅವರ ಅಪ್ಪಟ ಅಭಿಮಾನಿಯಾಗಿರುವ ನಿರ್ದೇಶಕ ಯೋಗರಾಜ್ ಭಟ್, ಡೇರ್ಡೆವಿಲ್ ಮುಸ್ತಾಫಾ ಸಿನಿಮಾ ವೀಕ್ಷಿಸಿ, ಚಿತ್ರದ ನಿರ್ದೇಶಕ ಹಾಗೂ ಚಿತ್ರತಂಡದ ಇತರೆ ಕೆಲವು ಸದಸ್ಯರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಭಟ್ಟರು, ”ನಾನು ಪೂರ್ಣಚಂದ್ರ ತೇಜಸ್ವಿ ಅವರ ಪರಮ ಭಕ್ತ. ಅವರ ಪ್ರತಿ ಅಕ್ಷರವನ್ನೂ ಬೆನ್ನು ಹತ್ತಿ ಓದಿದ್ದೇನೆ. ನನ್ನ ಜೀನವದ ಹಲವು ತಿರುವುಗಳಲ್ಲಿ ತೇಜಸ್ವಿ ಸಿಕ್ಕಿದ್ದಾರೆ. ಅವರು ಹೋದ ದಿನ ಬಿಟ್ಟರೆ ನಾನು ಎಂದಿಗೂ ಅವರನ್ನು ಭೇಟಿಯಾಗಿಲ್ಲ ಆದರೆ ನನ್ನ ಜೀವನದ ಮೇಲೆ ಅವರ ಪ್ರಭಾವ ದೊಡ್ಡದು” ಎಂದಿದ್ದಾರೆ ತೇಜಸ್ವಿ.
”ನಾನು ಸಾಕಷ್ಟು ಜನರನ್ನು ಭೇಟಿಯಾಗುತ್ತಿರುತ್ತೇನೆ. ಹಲವರು ನನ್ನ ಭೇಟಿಯಾಗಲು ಬರುತ್ತಾರೆ, ಹೊಸಬರು ಸಲಹೆಗೆ ಬರುತ್ತಾರೆ, ನಾನು ಕಾರ್ಯಕ್ರಮಗಳಿಗೆ ಹೋದಾಗ, ಹಾಡು ಬರೆಸಿಕೊಳ್ಳಲು ಬರುವವರಿಗೆ ಎಲ್ಲರಿಗೂ ಕನ್ನಡ ಓದಿರಿ, ಸಾಹಿತ್ಯ ಓದಿರಿ ಎಂದು ಕೇಳಿಕೊಳ್ಳುತ್ತೇನೆ. ಆದರೆ ಕೆಲವರು ಎರಡು ಪುಟ ಓದಿ, ಓದಿದ್ದೇನೆ ಎನ್ನುವವರು, ತೇಜಸ್ವಿಯವರು ಅರ್ಥವಾಗುತ್ತಾರಾ ನಿಮಗೆ ಎಂದು ಕೇಳಿದವರೂ ಇದ್ದಾರೆ. ಆದರೆ ಅದ್ಯಾವುದೂ ಇಲ್ಲದೆ ತೇಜಸ್ವಿಯವರನ್ನು ಆಮೂಲಾಗ್ರವಾಗಿ ಓದಿ, ಅವರದ್ದೇ ಕತೆಯನ್ನು ತೆರೆಗೆ ತಂದಿದ್ದಾರೆ ಈ ತಂಡ” ಎಂದು ಹೊಗಳಿದ್ದಾರೆ ಯೋಗರಾಜ್ ಭಟ್.
”ತೇಜಸ್ವಿಯವರ ಸಣ್ಣ ಕತೆಯನ್ನು, ಒಂದು ಯೋಚನೆಯನ್ನು ಅಚ್ಚುಕಟ್ಟಾದ ಸಿನಿಮಾ ಮಾಡಿ ಆ ಸಿನಿಮಾಕ್ಕೆ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡಿದೆ ಡೇರ್ಡೆವಿಲ್ ಮುಸ್ತಾಫಾ ತಂಡ. ತೇಜಸ್ವಿಯವರನ್ನು ಸಮಾಜದೊಟ್ಟಿಗೆ ಕನೆಕ್ಟ್ ಮಾಡಿದ್ದಕ್ಕೆ ನಿಮಗೆ ನಮಸ್ಕಾರ” ಎಂದ ಭಟ್ಟರು, ಬದಿಯಲ್ಲೇ ಕುಳಿತಿದ್ದ ಶಶಾಂಕ ಸೋಗಾಲ ಅವರಿಗೆ ಕೈ ಮುಗಿದರು.
ಇದನ್ನೂ ಓದಿ:Daredevil Musthafa: ವಿದೇಶಕ್ಕೆ ಹೊರಟ ‘ಡೇರ್ಡೆವಿಲ್ ಮುಸ್ತಫಾ’; ಜೋರಾಯ್ತು ಕನ್ನಡ ಸಿನಿಮಾದ ಹವಾ
”ನಮಗೂ ಹೇಳುತ್ತಾರೆ. ಯಾವುದಾದರೂ ಒಂದು ಪುಟ್ಟ ಪ್ರಯತ್ನ ಮಾಡಿದರೆ ಅದು ಎಷ್ಟೋ ಮಂದಿಗೆ ದಾರಿಯಾಗುತ್ತದೆ ಎಂದು. ನಾವು ಸಹ ಚಿಕ್ಕ ಚಿಕ್ಕ ಪ್ರಯತ್ನಗಳನ್ನು ಮಾಡಿಕೊಂಡೇ ಬಂದವರು. ಯಾರೂ ಈ ಚಿಕ್ಕ ಚಿಕ್ಕ ಪ್ರಯತ್ನಗಳನ್ನು ಮಾಡುತ್ತಾರೆಯೋ ಅವರೇ ಭವಿಷ್ಯದಲ್ಲಿ ದೊಡ್ಡದಾಗಿ ಏನನ್ನಾದರೂ ಸಾಧಿಸಬಲ್ಲ. ಆ ಸಾಧಿಸಬಲ್ಲ ಶಕ್ತಿ ಈ ತಂಡದಲ್ಲಿದೆ ಎನಿಸುತ್ತದೆ. ಹಾಗಾಗಿ ಇಂಥಹಾ ತಂಡಗಳನ್ನು ಪ್ರೋತ್ಸಾಹಿಸಬೇಕು, ಬೆನ್ನು ತಟ್ಟಬೇಕು, ಬಾಚಿ ತಬ್ಬಿಕೊಳ್ಳಬೇಕು ಎಂದು ತೇಜಸ್ವಿಯ ಅಭಿಮಾನಿಯಾಗಿ ಕೇಳಿಕೊಳ್ಳುತ್ತಿದ್ದೇನೆ” ಎಂದಿದ್ದಾರೆ ಯೋಗರಾಜ್ ಭಟ್.
ಡೇರ್ಡೆವಿಲ್ ಮುಸ್ತಾಫಾ ಸಿನಿಮಾವು ಪೂರ್ಣಚಂದ್ರ ತೇಜಸ್ವಿ ಅವರ ಅದೇ ಹೆಸರಿನ ಕತೆ ಆಧರಿಸಿದ ಸಿನಿಮಾ ಆಗಿದೆ. ಶಶಾಂಕ ಸೋಗಾಲ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಹಲವು ಹೊಸ ಹುಡುಗರು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಧರ್ಮ ಸಾಮರಸ್ಯದ ಕುರಿತಾದ ಕತೆ ಇದೆ. ಈ ಸಿನಿಮಾಕ್ಕೆ ನೂರು ಜನ ತೇಜಸ್ವಿ ಅಭಿಮಾನಿಗಳೇ ಬಂಡವಾಳ ಹೂಡಿರುವುದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:16 pm, Fri, 2 June 23