
ವಿಶ್ವಕ್ ಸೇನ್, ತೆಲುಗು ಚಿತ್ರರಂಗದ ಯುವನಟರಲ್ಲಿ ಒಬ್ಬರು. ಸಿನಿಮಾ ಕಾರ್ಯಕ್ರಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಅಬ್ಬರದ ಭಾಷಣ, ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಇತ್ತೀಚೆಗಷ್ಟೆ ವಿಶ್ವಕ್ ಸೇನ್ ನಟನೆಯ ‘ಲೈಲಾ’ ಹೆಸರಿನ ಸಿನಿಮಾ ಬಿಡುಗಡೆ ಆಗಿತ್ತು. ಈ ಸಿನಿಮಾದ ಪ್ರೀ ರಿಲೀಸ್ ಇವೆಂಟ್ಗೆ ಮೆಗಾಸ್ಟಾರ್ ಚಿರಂಜೀವಿ ಅವರನ್ನು ವಿಶ್ವಕ್ ಸೇನ್ ಆಹ್ವಾನಿಸಿದ್ದರು. ಚಿರಂಜೀವಿ ಸಹ ಕಿರಿಯ ನಟನ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನು ಆಡಿ ಹೋದರು. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ಅಟ್ಟರ್ ಫ್ಲಾಪ್ ಆಯ್ತು. ಸಿನಿಮಾ ನೋಡಿದ ಜನ ಸಾಮಾಜಿಕ ಜಾಲತಾಣಗಳಲ್ಲಿ ಕಟುವಾಗಿ ವಿಮರ್ಶೆ ಮಾಡಿದ್ದಾರೆ.
ಸಿನಿಮಾದಲ್ಲಿ ವಿಶ್ವಕ್ ಸೇನ್ ಯುವಕ-ಯುವತಿ ಎರಡು ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ನೋಡಿದ ಒಬ್ಬ ವಿಮರ್ಶಕನಂತೂ ಸಿನಿಮಾದ ಬಗ್ಗೆ ಬೇಸರ, ಕೋಪದಿಂದ ವಿಮರ್ಶೆ ಮಾಡಿದ್ದು, ಆ ವಿಮರ್ಶಕನ ವಿಡಿಯೋ ಈಗ ವೈರಲ್ ಆಗುತ್ತಿದೆ. ಸಿನಿಮಾ ಅಟ್ಟರ್ ಫ್ಲಾಪ್ ಆದ ಬಳಿಕ ಇದೀಗ ನಟ ವಿಶ್ವಕ್ ಸೇನ್ ಬಹಿರಂಗ ಪತ್ರವೊಂದನ್ನು ಬರೆದಿದ್ದು, ‘ಲೈಲಾ’ ಸಿನಿಮಾ ಮಾಡಿದ್ದಕ್ಕೆ ಕ್ಷಮೆ ಕೋರಿದ್ದಾರೆ. ಇನ್ನು ಮುಂದೆ ಎಂದಿಗೂ ಇಂಥಹಾ ಸಿನಿಮಾ ಮಾಡುವುದಿಲ್ಲ ಎಂದಿದ್ದಾರೆ.
‘ನನ್ನ ಸಿನಿಮಾ ನೀವೆಲ್ಲ ಅಂದುಕೊಂಡಿದ್ದ ಸ್ಥಾಯಿಯಲ್ಲಿ ಇಲ್ಲದೇ ಹೋಗಿದೆ. ನನ್ನ ಈ ಸಿನಿಮಾಕ್ಕೆ ಬಂದ ರಚನಾತ್ಮಕ ವಿಮರ್ಶೆಗಳನ್ನು ನಾನು ಒಪ್ಪಿ ಸ್ವೀಕರಿಸುತ್ತಿದ್ದೇನೆ. ನನ್ನನ್ನು ನಂಬಿ ನನ್ನ ಶ್ರಮಕ್ಕೆ ಗೌರವ ನೀಡಿದ ನನ್ನ ಅಭಿಮಾನಿಗಳಿಗೆ, ಸಿನಿಮಾ ಪ್ರೇಮಿಗಳಿಗೆ, ನನಗೆ ಆಶೀರ್ವಾದ ನೀಡಿದವರಿಗೆ ನಾನು ಕ್ಷಮೆ ಕೇಳುತ್ತೇನೆ. ಹೊಸದನ್ನು ಜನರಿಗೆ ಕೊಡುವುದು ನನ್ನ ಪ್ರಾಧಾನ್ಯತೆ ಆದರೆ ಆ ಪ್ರಯತ್ನದಲ್ಲಿ ಕೆಲವೊಮ್ಮೆ ತಪ್ಪುಗಳಾಗುತ್ತವೆ. ಆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಾನು ಗೌರವಿಸುತ್ತೇನೆ’ ಎಂದಿದ್ದಾರೆ ವಿಶ್ವಕ್ ಸೇನ್.
ಇದನ್ನೂ ಓದಿ:200 ಕೋಟಿ ರೂಪಾಯಿ ಸನಿಹಕ್ಕೆ ಬಂದ ‘ಛಾವ’ ಬಾಕ್ಸ್ ಆಫೀಸ್ ಕಲೆಕ್ಷನ್
‘ಇನ್ನು ಮುಂದೆ ನಾನು ಮಾಡುವ ಸಿನಿಮಾಗಳಲ್ಲಿ ಅಸಭ್ಯತೆ ಇರುವುದಿಲ್ಲ. ನಾನು ಒಂದು ಕೆಟ್ಟ ಸಿನಿಮಾ ಮಾಡಿದರೆ ಅದನ್ನು ವಿಮರ್ಶೆ ಮಾಡುವ ಹಕ್ಕು ನಿಮಗೆ ಇದೆ. ಏಕೆಂದರೆ ನನ್ನ ಸಿನಿಮಾ ಪ್ರಯಾಣದಲ್ಲಿ ನನ್ನ ಜೊತೆಗೆ ಯಾರೂ ಇರದೇ ಇರುವ ಸಮಯದಲ್ಲಿ ನೀವು ಬೆಂಬಲವಾಗಿದ್ದಿರಿ, ನನ್ನನ್ನು ಮುಂದಕ್ಕೆ ನಡೆಸಿದ್ದೀರಿ. ನಾನು ಈ ವರೆಗೆ ಆಯ್ಕೆ ಆಡಿಕೊಂಡಿರುವ ಕತೆಗಳನ್ನು ನೀವು ಬಹಳ ಗೌರವಿಸಿದ್ದೀರಿ. ಇನ್ನು ಮುಂದೆ ನನ್ನ ಸಿನಿಮಾ ಮಾತ್ರವೇ ಅಲ್ಲ, ನನ್ನ ಸಿನಿಮಾದ ಪ್ರತಿ ದೃಶ್ಯದಲ್ಲೂ ನಿಮ್ಮ ಮನಸ್ಸಿಗೆ ಹತ್ತಿರವಾಗುವಂತೆ ನೋಡಿಕೊಳ್ಳುತ್ತೇನೆ’ ಎಂದಿದ್ದಾರೆ.
‘ನನ್ನ ಮೇಲೆ ವಿಶ್ವಾಸವಿಟ್ಟ ನಿರ್ಮಾಪಕರು, ವಿತರಕರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಹಾಗೆಯೇ ನನ್ನ ಸಹನಟರು, ನಿರ್ದೇಶಕರು, ಬರಹಗಾರರಿಗೆ ಸಹ ಧನ್ಯವಾದ. ಇವರೆಲ್ಲ ನನಗೆ ಬೆಂಬಲವಾಗಿ ನಿಂತು ನನ್ನ ಏಳ್ಗೆಗೆ ಸಹಕಾರ ನೀಡಿದ್ದಾರೆ. ನೀವು ಮಾಡಿರುವ ರಚನಾತ್ಮಕ ವಿಮರ್ಶೆಗೆ ಧನ್ಯವಾದ. ಶೀಘ್ರವೇ ಇನ್ನೊಂದು ಗಟ್ಟಿಯಾದ ಕತೆಯ ಮೂಲಕ ನಿಮ್ಮೆದುರು ಬರುತ್ತೇನೆ. ನನ್ನ ಕೆಟ್ಟ ಮತ್ತು ಒಳ್ಳೆಯ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ನನ್ನ ಧನ್ಯವಾದ’ ಎಂದಿದ್ದಾರೆ ವಿಶ್ವಕ್ ಸೇನ್.
‘ಹಿಟ್’, ‘ಈ ನಗರಾನಿಕಿ ಏಮಯ್ಯಿಂದಿ’, ‘ಫಲಕ್ನಾಮ್ ದಾಸ್’, ‘ಗ್ಯಾಂಗ್ಸ್ ಆಫ್ ಗೋಧಾವರಿ’ ಇನ್ನೂ ಕೆಲವು ಒಳ್ಳೆಯ ಸಿನಿಮಾಗಳನ್ನು ವಿಶ್ವಕ್ ಸೇನ್ ನೀಡಿದ್ದಾರೆ. ಆದರೆ ಇತ್ತೀಚೆಗೆ ಬಿಡುಗಡೆ ಆದ ‘ಲೈಲಾ’ ಸಿನಿಮಾ ವಿಶ್ವಕ್ ಸೇನ್ರ ವೃತ್ತಿ ಜೀವನದ ಅತ್ಯಂತ ಕೆಟ್ಟ ಸಿನಿಮಾ. ಆ ಸಿನಿಮಾದ ಕಾರಣಕ್ಕೆ ಎಲ್ಲರಿಗೂ ಕ್ಷಮೆ ಕೋರಿದ್ದಾರೆ ವಿಶ್ವಕ್ ಸೇನ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ