ವೇವ್ಸ್ ಸಮಿಟ್ನಲ್ಲಿ ಚಿತ್ರರಂಗದ ದಿಗ್ಗಜರ ಅಂಚೆ ಚೀಟಿ ಬಿಡುಗಡೆ; ಮೋದಿಗೆ ನಾಗಾರ್ಜುನ ಧನ್ಯವಾದ
ಭಾರತೀಯ ಚಿತ್ರರಂಗದ ದಿಗ್ಗಜರಾದ ಗುರುದತ್, ರಿತ್ವಿಕ್ ಘಟಕ್, ಸಲೀಲ್ ಚೌಧರಿ, ರಾಜ್ ಖೋಸ್ಲಾ ಅವರ ಅಂಚೆ ಚೀಟಿ ಬಿಡುಗಡೆ ಮಾಡಲಾಗಿದೆ. ಈ ರೀತಿ ಗೌರವ ಸಲ್ಲಿಸಿದ್ದಕ್ಕಾಗಿ ನಟ ನಾಗಾರ್ಜುನ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದರು. ಮುಂಬೈನಲ್ಲಿ 4 ದಿನಗಳ ಕಾಲ ವೇವ್ಸ್ ಸಮಿಟ್ ನಡೆಯುತ್ತಿದೆ.

ವರ್ಲ್ಡ್ ಆಡಿಯೋ ವಿಶ್ಯುವಲ್ ಎಂಟರ್ಟೇನ್ಮೆಂಟ್ ಸಮಿಟ್ (WAVES 2025) ಇಂದು (ಮೇ 1) ಪ್ರಾರಂಭವಾಯಿತು. ಈ ವೇಳೆ ಭಾರತೀಯ ಚಿತ್ರರಂಗದ ದಿಗ್ಗಜರಿಗೆ ಗೌರವ ಸಲ್ಲಿಸಲಾಯಿತು. ಹೈದರಾಬಾದ್‌ನಿಂದ ಮುಂಬೈಗೆ ಬಂದು ಈ ಕಾರ್ಯಕ್ರಮದಲ್ಲಿ ಭಾಗಿಯಾದ ಟಾಲಿವುಡ್ ನಟ ನಾಗಾರ್ಜುನ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರನ್ನು ವೇದಿಕೆಗೆ ಸ್ವಾಗತಿಸಿದರು. ಚಲನಚಿತ್ರ ನಿರ್ಮಾಪಕರಾದ ಗುರುದತ್, ಋತ್ವಿಕ್ ಘಟಕ್, ರಾಜ್ ಖೋಸ್ಲಾ, ಸಂಗೀತ ಸಂಯೋಜಕ, ಸಾಹಿತಿ ಸಲೀಲ್ ಚೌಧರಿ ಹಾಗೂ ನಟಿ ಪಿ. ಭಾನುಮತಿ ಅವರ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಭಾರತ ಸರ್ಕಾರದ ಅಂಚೆ ಇಲಾಖೆ ಬಿಡುಗಡೆ ಮಾಡಲಿದೆ ಎಂದು ನಾಗಾರ್ಜುನ (Nagarjuna) ತಿಳಿಸಿದರು. ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ವ್ಯಕ್ತಿಗಳನ್ನು ಗೌರವಿಸುವ ಸಲುವಾಗಿ ಅಂಚೆ ಚೀಟಿ ಬಿಡುಗಡೆಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ನಾಲ್ಕು ದಿನಗಳ ಈ ಶೃಂಗಸಭೆಯು, ಭಾರತದ ಸೃಜನಶೀಲ ರಂಗವನ್ನು ಜಾಗತಿಕ ಪ್ರೇಕ್ಷಕರಿಗೆ ಪರಿಚಯಿಸುವ ಗುರಿಯನ್ನು ಹೊಂದಿದೆ. ನಾಗಾರ್ಜುನ ಅವರು ವೇದಿಕೆಯಲ್ಲಿ ಮಾತನಾಡಿ, ‘ಈ ಶೃಂಗಸಭೆಯು ಭಾರತದ ಶಕ್ತಿಯನ್ನು ಸೆಲೆಬ್ರೇಟ್ ಮಾಡುತ್ತದೆ. ನಮ್ಮ ದೇಶದ ಕಥೆಗಳು ಕೇವಲ ಸಿನಿಮಾವನ್ನು ರೂಪಿಸಿಲ್ಲ. ಬದಲಿಗೆ, ಹಲವು ತಲೆಮಾರುಗಳನ್ನು ರೂಪಿಸಿದೆ’ ಎಂದು ಹೇಳಿದರು.
‘55ನೇ ಭಾರತೀಯ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಚಿತ್ರರಂಗದ ದಿಗ್ಗಜರಾದ ರಾಜ್ ಕಪೂರ್, ಮೊಹಮ್ಮದ್ ರಫಿ, ತಾಪನ್ ಸಿನ್ಹಾ, ಅಕ್ಕಿನೇನಿ ನಾಗೇಶ್ವರ ರಾವ್ ಅವರನ್ನು ಗೌರವಿಸುವ ಸಲುವಾಗಿ ಅಂಚೆ ಚೀಟಿ ಬಿಡುಗಡೆ ಮಾಡಲಾಗಿತ್ತು. ಈಗ ಈ ಜಾಗತಿಕ ವೇದಿಕೆಯಲ್ಲಿ ಇನ್ನೊಂದು ಐತಿಹಾಸಿಕ ಕ್ಷಣಕ್ಕೆ ನಾವು ಸಾಕ್ಷಿ ಆಗುತ್ತಿದ್ದೇವೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಎಂದು ನಾಗಾರ್ಜುನ ಹೇಳಿದರು.
ಇದನ್ನೂ ಓದಿ: ಅಲ್ಲು ಅರ್ಜುನ್ ಜೊತೆ ಎಕ್ಸ್ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪ್ರಧಾನಿ ನರೇಂದ್ರ ಮೋದಿ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ಡಾ. ಎಲ್. ಮುರುಗನ್ ಅವರು ವೇದಿಕೆಯಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಿದರು. ಭಾರತೀಯ ಸಿನಿಮಾ, ಸಂಗೀತ ಮುಂತಾದ ಮನರಂಜನಾ ಕ್ಷೇತ್ರದ ಅನೇಕರು ಈ ಸಮಿಟ್ನಲ್ಲಿ ಭಾಗಿ ಆಗಿದ್ದಾರೆ. ರಜನಿಕಾಂತ್, ಮೋಹನ್ಲಾಲ್, ಶಾರುಖ್ ಖಾನ್, ಅಮಿರ್ ಖಾನ್, ರಣಬೀರ್ ಕಪೂರ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಸಾರಾ ಅಲಿ ಖಾನ್, ವಿಕ್ಕಿ ಕೌಶಲ್, ಶೋಭಿತಾ ಧುಲಿಪಾಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








