ನಿರ್ದೇಶಕ ಎಸ್ಎಸ್ ರಾಜಮೌಳಿ (SS Rajamouli) ಅವರು ಸದ್ಯ ‘ಬಾಹುಬಲಿ: ಕ್ರೌನ್ ಆಫ್ ಬ್ಲಡ್’ ಅನಿಮೇಟೆಡ್ ಸೀರಿಸ್ನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಸುದ್ದಿಗೋಷ್ಠಿ ಇತ್ತಿಚೆಗೆ ನಡೆದಿದೆ. ಈ ವೇಳೆ ಅವರು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ. ‘ಬಾಹುಬಲಿ’ ಸಿನಿಮಾ ಪ್ರಚಾರಕ್ಕೆ ಯಾವುದೇ ಹಣ ಸುರಿದಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.
ರಾಜಮೌಳಿ ಅವರು ಸಿನಿಮಾ ಮಾಡುವುದರ ಜೊತೆಗೆ ಅದರ ಪ್ರಚಾರಕ್ಕೂ ಹೆಚ್ಚು ಒತ್ತು ನೀಡುತ್ತಾರೆ. ಸಾಕಷ್ಟು ಹಣ ಖರ್ಚು ಮಾಡಿ ಪ್ರಚಾರ ಮಾಡುತ್ತಾರೆ. ಇದಕ್ಕೆ ‘ಆರ್ಆರ್ಆರ್’ ಸಿನಿಮಾ ಉತ್ತಮ ಉದಾಹರಣೆ. ಅಷ್ಟೇ ಅಲ್ಲ, ಈ ಚಿತ್ರವನ್ನು ಆಸ್ಕರ್ ರೇಸ್ನಲ್ಲಿ ಇರಿಸಲು 5 ಕೋಟಿ ರೂಪಾಯಿಗೂ ಹೆಚ್ಚು ಹಣ ಖರ್ಚು ಮಾಡಿದ್ದರು. ಆದರೆ, ‘ಬಾಹುಬಲಿ’ ಚಿತ್ರಕ್ಕೆ ಮಾತ್ರ ಬಾಯಿ ಮಾತಿನ ಪ್ರಚಾರ ಸಿಕ್ಕಿತ್ತು. ಇದನ್ನು ಅವರು ರಿವೀಲ್ ಮಾಡಿದ್ದಾರೆ.
‘ನಾನು ನನ್ನ ಪ್ರಾಜೆಕ್ಟ್ಗಳ ಬಗ್ಗೆ ಹೆಚ್ಚು ನಿರೀಕ್ಷೆಯನ್ನೂ ಇಟ್ಟುಕೊಳ್ಳುವುದಿಲ್ಲ, ಅತೀ ಕಡಿಮೆ ನಿರೀಕ್ಷೆಯನ್ನು ಇಟ್ಟುಕೊಳ್ಳುವುದಿಲ್ಲ. ನನ್ನ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಎಲ್ಲರೂ ಅದಕ್ಕಾಗಿ ಕಾಯುತ್ತಿದ್ದಾರೆ ಎಂದು ನಾನು ಎಂದಿಗೂ ಭಾವಿಸುವುದಿಲ್ಲ. ನಾನೇನು ಅಲ್ಲ ಎಂದು ಕೂಡ ಯೋಚಿಸುವುದಿಲ್ಲ. ನಾನು ಯಾವಾಗಲೂ ಬ್ಯಾಲೆನ್ಸ್ ಆಗಿರಲು ಪ್ರಯತ್ನಿಸುತ್ತೇನೆ. ಹೊಸ ಪ್ರೇಕ್ಷಕರನ್ನು ಹೇಗೆ ಕರೆದು ತರಬೇಕು ಎಂಬ ಆಲೋಚನೆ ಮಾತ್ರ ಯಾವಾಗಲೂ ಇರುತ್ತದೆ’ ಎಂದಿದ್ದಾರೆ ಅವರು.
‘ಬಾಹುಬಲಿ ಸಿನಿಮಾ ಪ್ರಚಾರಕ್ಕೆ ನಾವು ಹಣ ಖರ್ಚಿ ಮಾಡಿಲ್ಲ. ಯಾವುದೇ ಪೇಪರ್ಗೆ, ವೆಬ್ಸೈಟ್ಗೆ ಹಣ ನೀಡಿಲ್ಲ. ಆದರೆ, ನಾವು ಸಾಕಷ್ಟು ಹೋಂ ವರ್ಕ್ ಮಾಡಿದೆವು. ನಾವು ಸಾಕಷ್ಟು ವಿಡಿಯೋಗಳನ್ನು ಮಾಡಿದೆವು. ಹಲವು ಪೋಸ್ಟರ್ಗಳನ್ನು ಸಿದ್ಧಪಡಿಸಿದೆವು. ಪಾತ್ರ ಪರಿಚಯ ಮಾಡಿದೆವು. ಮೇಕಿಂಗ್ ವಿಡಿಯೋ ಹರಿಬಿಟ್ಟೆವು. ಇದರಿಂದ ತಾನಾಗಿಯೇ ಪ್ರಚಾರ ಸಿಕ್ಕಿತು. ನಾವು ನಮ್ಮ ಬುದ್ಧಿ ಖರ್ಚು ಮಾಡಿದೆವು’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಬಾಹುಬಲಿ’ ಹೊಸ ಕಥೆ; ‘ಕ್ರೌನ್ ಆಫ್ ಬ್ಲಡ್’ ಟ್ರೇಲರ್ನಲ್ಲಿದೆ ಝಲಕ್
‘ಪ್ರತಿ ಸಿನಿಮಾ ಕೂಡ ಭಿನ್ನ. ಪ್ರತಿ ಪ್ರೊಡಕ್ಟ್ನ ಮಾರ್ಕೆಟಿಂಗ್ ಮೇಲೆ ಗಮನ ಹರಿಸುತ್ತೇವೆ. ಇದರ ಜೊತೆಗೆ ಹೊಸ ಪ್ರೇಕ್ಷಕರನ್ನು ಕರೆತರೋದು ಹೇಗೆ ಎನ್ನುವ ಬಗ್ಗೆ ಆಲೋಚಿಸುತ್ತೇವೆ’ ಎಂದಿದ್ದಾರೆ ಅವರು. ವಿಶೇಷ ಎಂದರೆ ಮೇ 10ರಂದು ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್ ಸಿನಿಮಾ ರೀ-ರಿಲೀಸ್ ಆಗುತ್ತಿದೆ. ಇದರ ಜೊತೆಗೆ ಅವರು ಮಹೇಶ್ ಬಾಬು ಸಿನಿಮಾ ಕೆಲಸಗ ಬಗ್ಗೆಯೂ ಗಮನ ಹರಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.