ತಮಿಳುನಾಡಿನಲ್ಲಿ ಚುನಾವಣಾ ಕಾವು ಜೋರಾಗಿದೆ. ಡಿಎಂಕೆ-ಎಐಡಿಎಂಕೆ ಪಕ್ಷಗಳು ಪರಸ್ಪರ ರಾಜಕೀಯ ಕೆಸರೆರೆಚಾಟದಲ್ಲಿ ತೊಡಗಿಕೊಂಡಿವೆ. ಬಿಜೆಪಿ-ಎಐಎಡಿಎಂಕೆ ಪರ ಪ್ರಚಾರ ಮಾಡುವಾಗ ಹಿರಿಯ ನಟ ಹಾಗೂ ರಾಜಕೀಯ ನಾಯಕ ರಾಧಾ ರವಿ ಅವರು ನಯನತಾರಾ ಬಗ್ಗೆ ಅಶ್ಲೀಲವಾಗಿ ಕಮೆಂಟ್ ಮಾಡಿದ್ದಾರೆ. ಈ ವಿಚಾರಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ನಯನತಾರ ಡಿಎಂಕೆಗೆ ಏನು ಸಂಬಂಧ ಇತ್ತು? ಅವರೇನು ಪಕ್ಷದ ಪಿಆರ್ಒ ಆಗಿದ್ದರಾ? ಒಂದೆರಡು ವರ್ಷಗಳ ಹಿಂದೆ ನಯನತಾರ ವಿರುದ್ಧ ಟೀಕೆ ಮಾಡಿದ್ದಕ್ಕಾಗಿ ಡಿಎಂಕೆಯ ಕೆಲವು ದೊಡ್ಡತಲೆಗಳು ನನ್ನನ್ನು ಪಕ್ಷದಿಂದ ಹೊರಹಾಕಲು ಪ್ರಯತ್ನಿಸಿದ್ದವು. ಉದಯನಿಧಿ ಸ್ಟಾಲಿನ್ ಅವರೊಂದಿಗೆ ನಯನತಾರಾ ಲಿವ್-ಇನ್ನಲ್ಲಿ ಇದ್ದರೆ ನಾನು ಏನು ಮಾಡಲು ಸಾಧ್ಯ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಅವರು ಮತ್ತೆ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಉದಯನಿಧಿ ಸ್ಟಾಲಿನ್ ಡಿಎಂಕೆ ನಾಯಕ ಸ್ಟಾಲಿನ್ ಅವರ ಮಗ. ಅವರು ಚಿತ್ರರಂಗದಲ್ಲೂ ತೊಡಗಿಕೊಂಡಿದ್ದಾರೆ. ನಯನತಾರಾ ಜತೆಗೆ ಸಿನಿಮಾ ಕೂಡ ಮಾಡಿದ್ದಾರೆ. ಈ ಕಾರಣಕ್ಕೆ ರಾಧ ರವಿ ಈ ರೀತಿ ಕಮೆಂಟ್ ಮಾಡಿದ್ದಾರೆ.
ನಯನತಾರಾ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಕಮಲ್ ಹಾಸನ್ ಸೇರಿದಂತೆ ಸಾಕಷ್ಟು ನಾಯಕರು ಸಿಟ್ಟಾಗಿದ್ದಾರೆ. ಚುನಾವಣೆಯಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಈ ರೀತಿ ಕಮೆಂಟ್ಗಳನ್ನು ಮಾಡೋದು ಸರಿಯಲ್ಲ ಎನ್ನುವ ಎಚ್ಚರಿಕೆ ನೀಡಿದ್ದಾರೆ.
ಡಿಎಂಕೆ ಅಭ್ಯರ್ಥಿ ದಿಂಡಿಗಲ್ ಲಿಯೋನಿ ಕೊಟ್ಟ ಹೇಳಿಕೆ ಕೂಡ ಟೀಕೆಗೆ ಒಳಗಾಗಿದೆ. ಮಹಿಳೆಯರನ್ನು ಹಸುಗಳಿಗೆ ಹೋಲಿಸಿದ್ದಲ್ಲದೆ, ವಿದೇಶಿ ಹಸುಗಳ ಹಾಲು ಕುಡಿದು ತಮ್ಮ ಆಕಾರವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು. ಪ್ರಚಾರಕ್ಕೆ ತೆರಳಿದ್ದ ವೇಳೆ, ಅಸಭ್ಯವಾಗಿ ಕೈಸನ್ನೆ ಮಾಡುತ್ತ, ಇತ್ತೀಚೆಗೆ ಮಹಿಳೆಯರು ವಿದೇಶಿ ಹಸುಗಳ ಹಾಲುಗಳನ್ನು ಕುಡಿಯುತ್ತಿರುವ ಕಾರಣ ಅವರ ತೂಕ ಹೆಚ್ಚಾಗುತ್ತಿದೆ. ಇದೇ ಕಾರಣದಿಂದ, ತೆಳ್ಳಗೆ ಇರಬೇಕಿದ್ದ ಅವರ ಸೊಂಟ ದಪ್ಪವಾಗುತ್ತಿದೆ. ಮೊದಲೆಲ್ಲ ಮಹಿಳೆಯರ ಆಕಾರ ಎಂಟರ ಆಕೃತಿಯಲ್ಲಿ ಇರುತ್ತಿತ್ತು. ಅಂದರೆ ಸೊಂಟ ತೆಳುವಾಗಿ ಇರುತ್ತಿತ್ತು. ಮಕ್ಕಳನ್ನು ಎತ್ತಿಕೊಂಡರೆ ಆ ಮಗು ತಾಯಿಯ ಸೊಂಟದ ಮೇಲೆ ಸರಿಯಾಗಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಈಗೀಗ ಮಹಿಳೆಯ ಸೊಂಟ ಪೀಪಾಯಿಯಂತೆ ದೊಡ್ಡದಾಗಿ ಇರುತ್ತದೆ. ಹಾಗಾಗಿ ಮಕ್ಕಳನ್ನು ಸೊಂಟದ ಮೇಲೆ ಎತ್ತಿಕೊಳ್ಳಲೂ ಅವರಿಗೆ ಆಗುವುದಿಲ್ಲ ಎಂದು ಟೀಕೆ ಮಾಡಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ‘
ಇದನ್ನೂ ಓದಿ: ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಸಾವಿಗೆ ನರೇಂದ್ರ ಮೋದಿಯವರ ಕಿರುಕುಳವೇ ಕಾರಣ: ಸ್ಟಾಲಿನ್ ಪುತ್ರ ಉದಯನಿಧಿ
Published On - 3:59 pm, Fri, 2 April 21