ನನ್ನ ಸಿನಿಮಾ ಕಥೆಗಳಿಗೆ ಊರು-ಯಕ್ಷಗಾನ ಪ್ರೇರಣೆ: ರಿಷಬ್ ಶೆಟ್ಟಿ

|

Updated on: Aug 18, 2024 | 9:30 AM

ನನ್ನ ಸಿನಿಮಾದ ಎಲ್ಲ ಕಥೆಗಳಿಗೂ ಕುಂದಾಪುರದ ನನ್ನೂರು ಕೆರಾಡಿಯೇ ಕಾರಣ, ನಾನು ಬೆಳೆದ ಪರಿಸರವೇ ಪ್ರೇರಣೆ. ಅದರಲ್ಲೂ ಓದದೆಯೇ ರಾಮಾಯಣ-ಮಹಾಭಾರತದ ಸಾರ ತಿಳಿಯಲು ಯಕ್ಷಗಾನ ಕಾರಣ ಎಂದು ನಟ, ನಿರ್ದೇಶಕ ರಿಷಬ್​ ಶೆಟ್ಟಿ ಹೇಳಿದರು.

ನನ್ನ ಸಿನಿಮಾ ಕಥೆಗಳಿಗೆ ಊರು-ಯಕ್ಷಗಾನ ಪ್ರೇರಣೆ: ರಿಷಬ್ ಶೆಟ್ಟಿ
ಕುಂದಾಪುರ ಕನ್ನಡ ಹಬ್ಬ ನಟ ರಿಷಬ್​ ಶೆಟ್ಟಿಗೆ ಸನ್ಮಾನ
Follow us on

ಬೆಂಗಳೂರು, ಆಗಸ್ಟ್​ 18: ನನ್ನ ಸಿನಿಮಾದ ಕಥೆಗಳಿಗೆ ನನ್ನ ಊರು ಮತ್ತು ಯಕ್ಷಗಾನವೇ (Yakashgana) ಪ್ರೇರಣೆ ಎಂದು ಖ್ಯಾತ ನಟ-ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಹೇಳಿದರು. ‘ಕುಂದಾಪ್ರ ಕನ್ನಡ ಪ್ರತಿಷ್ಠಾನ’ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ‘ಕುಂದಾಪುರ ಕನ್ನಡ ಹಬ್ಬ-2024’ರ (Kundapura Kannada Habba) ಮೊದಲ ದಿನವಾದ ಶನಿವಾರ ‘ಊರ ಗೌರವ’ ಸನ್ಮಾನ ಸ್ವೀಕರಿಸಿ ರಿಷಬ್ ಶೆಟ್ಟಿ ಮಾತನಾಡಿದರು.

ಎಲ್ಲಿಗೆ ಹೋದರೂ, ಏನೇ ಮಾಡಿದರೂ, ಎಲ್ಲಿಂದ ಬಂದಿದ್ದೇವೆ ಎನ್ನುವುದು ಮುಖ್ಯ. ಆ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನನ್ನ ಸಿನಿಮಾದ ಎಲ್ಲ ಕಥೆಗಳಿಗೂ ಕುಂದಾಪುರದ ನನ್ನೂರು ಕೆರಾಡಿಯೇ ಕಾರಣ, ನಾನು ಬೆಳೆದ ಪರಿಸರವೇ ಪ್ರೇರಣೆ. ಅದರಲ್ಲೂ ಓದದೆಯೇ ರಾಮಾಯಣ-ಮಹಾಭಾರತದ ಸಾರ ತಿಳಿಯಲು ಯಕ್ಷಗಾನ ಕಾರಣ. ‘ಕಾಂತಾರ’ ಸಿನಿಮಾ ಚಿತ್ರೀಕರಣ ಕೂಡ ಕುಂದಾಪುರ ಪರಿಸರದಲ್ಲೇ ಆಗಿರುವುದು ಎಂದು ರಿಷಬ್ ಹೇಳಿದರು.

ನಮ್ಮ ಭಾಷೆ ಸಂಸ್ಕೃತಿ ಮಕ್ಕಳಿಗೆ ಗೊತ್ತಾಗಬೇಕು. ಅದಕ್ಕಾಗಿ ಇಂಥ ಹಬ್ಬಗಳು ಅತ್ಯಗತ್ಯ. ತುಳಸಿ ಕಟ್ಟೆಗಳು ಅಪರೂಪ ಆಗಿರುವ ಈ ಕಾಲದಲ್ಲಿ, ಇಲ್ಲಿ ತುಳಸಿ ಕಟ್ಟೆ ಇಟ್ಟು ಉದ್ಘಾಟನೆ ನಡೆಸಿರುವುದು ಉತ್ತಮ ಸಂಗತಿ. ನಾನು‌ ಕೂಡ ನನ್ನ ಪ್ರತಿ ಸಿನಿಮಾದಲ್ಲೂ ಅಕ್ಕಿಮುಡಿ, ನೆಟ್ಟಿ ಮುಂತಾದವನ್ನು ತೋರಿಸುತ್ತಿರುತ್ತೇನೆ ಎಂದು ರಿಷಬ್ ಶೆಟ್ಟಿ ಹೇಳಿದರು. ರಿಷಬ್ ಶೆಟ್ಟಿ- ಪ್ರಗತಿ ಶೆಟ್ಟಿ ದಂಪತಿಗೆ ‘ಊರ ಗೌರವ’ದ ಸನ್ಮಾನ ಮಾಡಲಾಯಿತು.

ಇದನ್ನೂ ಓದಿ: ಕೇವಲ ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಮಾದರಿ ರಿಷಬ್ ಶೆಟ್ಟಿ

ಭಾಷೆಯ ಉಳಿವು ಬೆಳವಣಿಗೆ ದೃಷ್ಟಿಯಿಂದ ಈ ಕುಂದಾಪುರ ಕನ್ನಡ ಹಬ್ಬ ಉತ್ತಮ ಪ್ರಯೋಗ. ದಿನನಿತ್ಯದ ಬಳಕೆಯಲ್ಲಿ ಸಾಧ್ಯವಾದಷ್ಟೂ ಅಧಿಕ ಕುಂದಾಪುರ ಕನ್ನಡ ಬಳಕೆ ಆಗಲಿ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ತಿಳಿಸಿದರು.

ಸಂಗೀತ ನಿರ್ದೇಶಕ ರವಿ ಬಸ್ರೂರು, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಮಾರಣಕಟ್ಟೆ ಎಂ.ಎಸ್. ಮಂಜ ಚಾರಿಟಬಲ್ ಟ್ರಸ್ಟ್‌ನ ಕೃಷ್ಣಮೂರ್ತಿ ಮಂಜ, ಲೈಫ್‌ಲೈನ್ ಫೀಡ್ಸ್ ಪ್ರೈ.ಲಿ. ಎಂಡಿ ಕಿಶೋರ್ ಕುಮಾರ್ ಹೆಗ್ಡೆ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ, ಅಧ್ಯಕ್ಷ ಡಾ.ದೀಪಕ್ ಶೆಟ್ಟಿ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ ಮುಂತಾದವರು ಉಪಸ್ಥಿತರಿದ್ದರು.

ಹಬ್ಬಕ್ಕೆ ತಾರಾ ಮೆರುಗು

ಕುಂದಾಪುರ ಕನ್ನಡ ಹಬ್ಬದ ಭಾನುವಾರದ ಕಾರ್ಯಕ್ರಮಕ್ಕೆ ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ, ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್, ನಟ-ನಿರ್ಮಾಪಕ ಪ್ರಮೋದ್ ಶೆಟ್ಟಿ ಆಗಮಿಸಲಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಅವರನ್ನೂ ಆಹ್ವಾನಿಸಲಾಗಿದ್ದು, ಅವರೂ ಬರುವ ನಿರೀಕ್ಷೆ ಇದೆ. ಅಲ್ಲದೆ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಇದೇ ಮೊದಲು ಸಂಗೀತ ಸಂಜೆ ಕಾರ್ಯಕ್ರಮ ನೀಡುತ್ತಿದ್ದು, ಇದು ಭಾನುವಾರದ ಪ್ರಮುಖ ಆಕರ್ಷಣೆ ಆಗಿರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಕುಂದಾಪುರ ಕನ್ನಡ ಹಬ್ಬ ಆಗಸ್ಟ್ 18ರ ಕಾರ್ಯಕ್ರಮಗಳು

ಬೆಳಗ್ಗೆ 10: ಬಯಲಾಟ- ಗ್ರಾಮೀಣ ಉತ್ಸವ

ಬೆಳಗ್ಗೆ 10: ತಾರೆಯರ ಜೊತೆ ಮಾತುಕತೆ, ಕವಿತೆ.

ಬೆಳಗ್ಗೆ 11: ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ʼಡಾನ್ಸ್ ಕುಂದಾಪ್ರ ಡಾನ್ಸ್ʼ

ಬೆಳಗ್ಗೆ 11.15: ಕುಂದಾಪುರ ಭಾಷೆ ಬದುಕು ಬರಹ ಕುರಿತ ನುಡಿಚಾವಡಿ.

ಮಧ್ಯಾಹ್ನ 12: ಮನು ಹಂದಾಡಿ ಅವರಿಂದ ʼಹಂದಾಡ್ತಾ ನೆಗ್ಯಾಡಿʼ ಹಾಸ್ಯ ಕಾರ್ಯಕ್ರಮ.

ಮಧ್ಯಾಹ್ನ 1.30: ಚಂಡೆ-ಜಂಬೆ ಜುಗಲ್ಬಂದಿ ಕಾರ್ಯಕ್ರಮ ʼಪೆಟ್ ಒಂದೇ, ಸ್ವರ ಬೇರೆʼ

ಮಧ್ಯಾಹ್ನ 2.30: ಮಂದರ್ತಿ ಶ್ರೀ ದುರ್ಗಾಪರಮೇಶ್ವರಿಯ ನೃತ್ಯಗಾಥೆ ʼಮಂದಾರ್ತಿ ಮಾದೇವಿʼ

ಸಂಜೆ 4.30: ರಥೋತ್ಸವ

ರಾತ್ರಿ 7.30: ʼರವಿ ಬಸ್ರೂರ್ ನೈಟ್ಸ್ʼ ವಿಶೇಷ ಸಂಗೀತ ಸಂಜೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.