
ಯಶ್ ‘ಕೆಜಿಎಫ್ 2’ ಸಿನಿಮಾದ ಬಳಿಕ ನಾಲ್ಕು ವರ್ಷ ಸಮಯ ತೆಗೆದುಕೊಂಡು ‘ಟಾಕ್ಸಿಕ್’ ಸಿನಿಮಾ ಮಾಡಿದರು. ಇತ್ತೀಚೆಗಷ್ಟೆ ಬಿಡುಗಡೆ ಆದ ‘ಟಾಕ್ಸಿಕ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡಿದೆ. ಆದರೆ ಅದರ ಜೊತೆಗೆ ಮಿಶ್ರ ಪ್ರತಿಕ್ರಿಯೆಗಳನ್ನು ಸಹ ಪಡೆದುಕೊಂಡಿದೆ. ಕೆಲವರಿಗೆ ಸಿನಿಮಾ ಬಹಳ ಇಷ್ಟವಾದರೆ ಕೆಲವರಿಗೆ ಇಷ್ಟವಾಗಿಲ್ಲ. ಯಶ್ ಅಭಿಮಾನಿಗಳೂ ಸಹ ‘ಕೆಜಿಎಫ್’ ರೀತಿ ‘ಟಾಕ್ಸಿಕ್’ ಸಿನಿಮಾವನ್ನು ಸಂಭ್ರಮಿಸುತ್ತಿಲ್ಲ. ‘ಟಾಕ್ಸಿಕ್’ ಬಳಿಕ ಇದೇ ನವೆಂಬರ್ನಲ್ಲಿ ಯಶ್ ಅವರ ‘ರಾಮಾಯಣ’ ಬಿಡುಗಡೆ ಆಗುವುದು ಖಾತ್ರಿ ಆಗಿದೆ. ಆದರೆ ಅದು ಸಂಪೂರ್ಣವಾಗಿ ಯಶ್ ಸಿನಿಮಾ ಅಲ್ಲ. ಆದರೆ ಯಶ್ ತಮ್ಮ ಮುಂದಿನ ಸಿನಿಮಾಕ್ಕೆ ಈಗಾಗಲೇ ಕತೆ ಹುಡುಕಿಟ್ಟುಕೊಂಡಿದ್ದಾರೆ. ತಮಿಳು ನಿರ್ದೇಶಕರೊಬ್ಬರ ಕತೆಗೆ ಎಸ್ ಹೇಳಿದ್ದಾರಂತೆ ಯಶ್.
ತಮಿಳು ಸಿನಿಮಾ ನಿರ್ದೇಶಕ ಪಿಎಸ್ ಮಿತ್ರನ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ತಾವು ಯಶ್‌ಗೆ ಕತೆಯೊಂದನ್ನು ಹೇಳಿದ್ದು, ಯಶ್ ಅವರಿಗೆ ಸಹ ಕತೆ ಇಷ್ಟವಾಗಿದೆ. ‘ಟಾಕ್ಸಿಕ್’ ಬಳಿಕ ಸಿನಿಮಾ ಶುರು ಮಾಡುವುದಾಗಿ ಯಶ್ ಅವರೇ ಖುದ್ದು ಹೇಳಿದ್ದಾರೆ ಎಂದಿದ್ದಾರೆ. ಆ ಮೂಲಕ ತಾವೇ ಯಶ್ ಅವರ ಮುಂದಿನ ಸಿನಿಮಾದ ನಿರ್ದೇಶಕ ಎಂದು ಖಾತ್ರಿ ಪಡಿಸಿದ್ದಾರೆ.
ಪಿಎಸ್ ಮಿತ್ರನ್, ತಮಿಳಿನ ಸೂಪರ್ ಹಿಟ್ ಸಿನಿಮಾ ‘ಇರುಂಬು ತಿರಯ್’, ‘ಸರ್ದಾರ್’, ‘ಹೀರೋ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅವರೊಬ್ಬ ಒಳ್ಳೆಯ ನಿರ್ದೇಶಕ ಎಂಬುದನ್ನು ಅವರ ಹಿಂದಿನ ಸಿನಿಮಾಗಳು ಸಾರಿ ಹೇಳಿವೆ. ಇದೀಗ ಅವರ ನಿರ್ದೇಶನದ ‘ಸರ್ದಾರ್ 2’ ಸಿನಿಮಾ ಸೆಪ್ಟೆಂಬರ್ 10 ರಂದು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಕಾರ್ತಿ ಹಾಗೂ ಕನ್ನಡದ ಹುಡುಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ‘ಸರ್ದಾರ್ 2’ ಸಿನಿಮಾದ ಪ್ರಚಾರ ಸಂದರ್ಭದಲ್ಲಿ, ತಾವು ಯಶ್ ಅವರಿಗೆ ಕತೆ ಹೇಳಿರುವ ವಿಷಯವನ್ನು ಮಿತ್ರನ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:‘ರಾಮನಾಗಿ ರಣಬೀರ್ ಕಪೂರ್ ನನಗೆ ಸರಿ ಹೊಂದುತ್ತಿಲ್ಲ, ಯಶ್ ಬೆಸ್ಟ್’
ಸೂಪರ್‌ಸ್ಟಾರ್ ಯಶ್ ಜೊತೆ ಸಿನಿಮಾ ಮಾಡುವ ತಮ್ಮ ಯೋಜನೆಗಳು ಸದ್ಯಕ್ಕೆ ಮುಂದೂಡಲ್ಪಟ್ಟಿವೆ ಎಂದು ನಿರ್ದೇಶಕ ಪಿಎಸ್ ಮಿತ್ರನ್ ತಿಳಿಸಿದ್ದಾರೆ. ತಾವು ಯಶ್‌ಗಾಗಿ ಒಂದು ಆಸಕ್ತಿದಾಯಕ ಕಥೆಯನ್ನು ಸಿದ್ಧಪಡಿಸಿದ್ದು, ಆ ಕಥೆ ಯಶ್‌ಗೆ ತುಂಬಾ ಇಷ್ಟವಾಗಿತ್ತು ಎಂದೂ ಅವರು ಹೇಳಿದರು. ಆದರೆ, ಯಶ್ ತಮ್ಮ ದೊಡ್ಡ ಪ್ರಾಜೆಕ್ಟ್ ಆದ ‘ಟಾಕ್ಸಿಕ್’ ಸಿನಿಮಾದಲ್ಲಿ ನಿರತವಾಗಿದ್ದರು, ಹಾಗಾಗಿ ಆ ಸಿನಿಮಾ ವಿಳಂಬ ಆಯ್ತು’ ಎಂದು ಅವರು ಹೇಳಿದ್ದಾರೆ. 2023ರ ಫೆಬ್ರವರಿಯಲ್ಲೇ ಯಶ್ ಅವರು ‘ಟಾಕ್ಸಿಕ್’ ಸಿನಿಮಾಕ್ಕೆ ಕಮಿಟ್ ಆಗಿದ್ದರು. ಇದರಿಂದಾಗಿ, ಅವರು ‘ಟಾಕ್ಸಿಕ್’ ಚಿತ್ರೀಕರಣ ಮುಗಿದ ನಂತರವೇ ಮುಂದಿನ ಪ್ರಾಜೆಕ್ಟ್‌ಗಳಲ್ಲಿ ತೊಡಗಿಕೊಳ್ಳುವೆ ಎಂದು ಸ್ಪಷ್ಟವಾಗಿ ಹೇಳಿದ್ದರು ಎಂದಿದ್ದಾರೆ ಮಿತ್ರನ್.
ಯಶ್ ಅವರನ್ನು ನಾಯಕರಾಗಿ ‘ಇಂಡಿಯಾನಾ ಜೋನ್ಸ್’ ರೀತಿಯ ಸಾಹಸಮಯ ಕಥೆಯನ್ನು ಸಿದ್ಧಪಡಿಸಿಕೊಂಡಿದ್ದೇನೆ. ಅದು ನನ್ನ ಕನಸಿನ ಪ್ರಾಜೆಕ್ಟ್. ಯಶ್‌ಗೆ ಕತೆ ಇಷ್ಟವಾಯಿತು, ಆದರೆ ಸಮಯದ ಮಿತಿಗಳಿಂದಾಗಿ ಸ್ವಲ್ಪ ವಿಳಂಬವಾಗುತ್ತಿದೆ. ‘ಟಾಕ್ಸಿಕ್’ ಮುಗಿದ ನಂತರ ಪ್ರಾರಂಭಿಸೋಣ ಎಂದು ಯಶ್ ಹೇಳಿದ್ದರು’ ಎಂದು ಮಿತ್ರನ್ ತಿಳಿಸಿದ್ದಾರೆ. ಅಲ್ಲಿಗೆ ಯಶ್ ಅವರು ಪಿಎಸ್ ಮಿತ್ರನ್ ಅವರೊಟ್ಟಿಗೆ ಸಿನಿಮಾ ಮಾಡುವ ಭರವಸೆ ನೀಡಿದ್ದಾರೆ ಎಂಬುದು ಖಾತ್ರಿ ಆಗಿದೆ. ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Tue, 8 September 26