2.60 ಲಕ್ಷ ಟಿಕೆಟ್ ಮುಂಗಡವಾಗಿ ಮಾರಾಟ ಮಾಡಿದ ‘ಟಾಕ್ಸಿಕ್’ ಎಲ್ಲೆಲ್ಲಿ, ಎಷ್ಟೆಷ್ಟು?

Toxic movie: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26 ಕ್ಕೆ ರಿಲೀಸ್ ಆಗಲಿದ್ದು, ನಿನ್ನೆಯಷ್ಟೆ (ಆಗಸ್ಟ್ 21) ಸಿನಿಮಾದ ಟಿಕೆಟ್​​ಗಳ ಮುಂಗಡ ಬುಕಿಂಗ್ ಆರಂಭವಾಗಿದೆ. ‘ಟಾಕ್ಸಿಕ್’ ಸಿನಿಮಾದ ಟಿಕೆಟ್​​ಗಳ ಮುಂಗಡ ಬುಕಿಂಗ್ ದಾಖಲೆ ಮೊತ್ತದಲ್ಲಿ ನಡೆಯುತ್ತಿದೆ. ಕೇವಲ ಒಂದೇ ದಿನದಲ್ಲಿ ಲಕ್ಷಾಂತರ ಟಿಕೆಟ್​ಗಳನ್ನು ಮಾರಾಟ ಮಾಡಲಾಗಿದೆ. ಎಲ್ಲೆಲ್ಲಿ ಎಷ್ಟೆಷ್ಟು ಟಿಕೆಟ್ ಮಾರಾಟ ಮಾಡಲಾಗಿದೆ? ಮಾಹಿತಿ ಇಲ್ಲಿದೆ...

2.60 ಲಕ್ಷ ಟಿಕೆಟ್ ಮುಂಗಡವಾಗಿ ಮಾರಾಟ ಮಾಡಿದ ‘ಟಾಕ್ಸಿಕ್’ ಎಲ್ಲೆಲ್ಲಿ, ಎಷ್ಟೆಷ್ಟು?
Toxic Movie

Updated on: Aug 22, 2026 | 6:05 PM

ಯಶ್ (Yash) ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಇನ್ನೆರಡು ದಿನಗಳಷ್ಟೆ ಬಾಕಿ ಇದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ನಿನ್ನೆ (ಆಗಸ್ಟ್ 22) ಓಪನ್ ಆಗಿದ್ದು, ಬುಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಸಾವಿರಾರು ಟಿಕೆಟ್​​ಗಳು ಮಾರಾಟ ಆಗಿದ್ದವು. ಇದೀಗ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿ 24 ಗಂಟೆಗಳಿಗೂ ಹೆಚ್ಚು ಸಮಯ ಆಗಿದ್ದು, ಭಾರಿ ದೊಡ್ಡ ಸಂಖ್ಯೆಯ ಟಿಕೆಟ್​​ಗಳನ್ನು ಮುಂಚಿತವಾಗಿ ಮಾರಾಟ ಮಾಡಲಾಗಿದೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರದ ಅಡ್ವಾನ್ಸ್ ಬುಕಿಂಗ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಭಿಮಾನಿಗಳು ಟಿಕೆಟ್‌ಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ.

‘ಸ್ಯಾಕ್ನಿಲ್ಕ್’ ವರದಿಯ ಪ್ರಕಾರ, ‘ಟಾಕ್ಸಿಕ್’ ಚಿತ್ರವು ಭಾರತದಲ್ಲಿ ಮೊದಲ ದಿನವೇ ಮುಂಗಡ ಟಿಕೆಟ್​​ ಬುಕಿಂಗ್​​ನಲ್ಲಿ 2.60 ಲಕ್ಷ ಟಿಕೆಟ್​​ಗಳನ್ನು ಮಾರಾಟ ಮಾಡಿದೆ. ಕನ್ನಡ ಆವೃತ್ತಿಯು ಮಾರಾಟದಲ್ಲಿ ಮುಂಚೂಣಿಯಲ್ಲಿದ್ದರೆ, ಹಿಂದಿ ಆವೃತ್ತಿಯು ಸಹ ಗಣನೀಯ ಕೊಡುಗೆ ನೀಡಿದೆ. ಭಾಷಾವಾರು ಅಂಕಿಅಂಶಗಳ ಪ್ರಕಾರ, ಕನ್ನಡದಲ್ಲಿ ಸುಮಾರು 7.72 ಕೋಟಿ ರೂ. ಮತ್ತು ಹಿಂದಿಯಲ್ಲಿ 3.86 ಕೋಟಿ ರೂ. ಮೌಲ್ಯದ ಟಿಕೆಟ್​ಗಳು ಮುಂಗಡವಾಗಿ ಮಾರಾಟ ಮಾಡಲಾಗಿದೆ. ತಮಿಳು, ತೆಲುಗು ಮತ್ತು ಮಲಯಾಳಂ ಆವೃತ್ತಿಗಳು ಉಳಿದ ಮೊತ್ತವನ್ನು ಗಳಿಸಿವೆ. ಬ್ಲಾಕ್ ಮಾಡಲಾದ ಸೀಟುಗಳನ್ನು ಸೇರಿಸಿದರೆ, ಈ ವರೆಗೆ 20 ಕೋಟಿಗೂ ಹೆಚ್ಚು ಮೌಲ್ಯದ ಟಿಕೆಟ್​​ಗಳನ್ನು ಮುಂಗಡವಾಗಿ ಮಾರಾಟ ಮಾಡಲಾಗಿದೆ.

‘ಟಾಕ್ಸಿಕ್’ ಚಿತ್ರದ ಮೊದಲ ದಿನದ ಮುಂಗಡ ಬುಕಿಂಗ್‌ನಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ ಮತ್ತು ಇದು ಚಿತ್ರದ ಅತಿದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ನಟ ಯಶ್ ಅವರ ತವರು ರಾಜ್ಯದಲ್ಲೇ ಮೊದಲ ದಿನವೇ ಲಕ್ಷಾಂತರ ಟಿಕೆಟ್​​ಗಳು ಮುಂಗಡವಾಗಿ ಮಾರಾಟ ಆಗಿವೆ. ಚಿತ್ರ ಬಿಡುಗಡೆಗೆ ಇನ್ನೂ ಕೆಲವು ದಿನಗಳಿರುವಾಗಲೇ, ಕರ್ನಾಟಕದಲ್ಲಿ ಒಟ್ಟು 1.6 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ. ಮುಂಬೈ, ದೆಹಲಿಯಲ್ಲಿಯೂ ದೊಡ್ಡ ಸಂಖ್ಯೆಯಲ್ಲಿ ಟಿಕೆಟ್​​ಗಳು ಮಾರಾಟ ಆಗಿವೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾ ಮೂಲಕ ರಾಧಿಕಾ ಪಂಡಿತ್ ಆಸೆ ಈಡೇರಿಸಿದ ಯಶ್

‘ಟಾಕ್ಸಿಕ್’ ಸಿನಿಮಾ ಸೆನ್ಸಾರ್ ಪ್ರಕ್ರಿಯೆ ಎಲ್ಲ ಪೂರ್ಣವಾಗಿದ್ದು, ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ನೀಡಲಾಗಿದೆ. ಯಾವುದೇ ಕಟ್ ಇಲ್ಲದೆ ‘ಎ’ ಪ್ರಮಾಣ ಪತ್ರ ನೀಡಿರುವುದು ಕುತೂಹಲ ಹೆಚ್ಚಿಸಿದೆ. ಸಿನಿಮಾದ ಅವಧಿ 3 ಗಂಟೆ 14 ನಿಮಿಷಗಳು ಇವೆ ಎನ್ನಲಾಗಿದೆ.

ಯುಕೆನಲ್ಲಿ ಬ್ರಿಟಿಷ್ ಸೆನ್ಸಾರ್ ಮಂಡಳಿಯು (BBFC) ಚಿತ್ರಕ್ಕೆ ‘ಎ’ ರೇಟಿಂಗ್ ನೀಡಿದೆ. ಬ್ರಿಟಿಷ್ ಸೆನ್ಸಾರ್ ಮಂಡಳಿಯು ಬೆದರಿಕೆ, ಮಾದಕವಸ್ತು, ಲೈಂಗಿಕ ಹಿಂಸೆ ಮತ್ತು ಸ್ವಯಂ ಹಾನಿಗೆ ಸಂಬಂಧಿಸಿದ ಅಂಶಗಳನ್ನು ಗುರುತಿಸಿದೆ ಎಂದು ವರದಿಯಾಗಿದೆ. ಹಿಂಸಾಚಾರ, ಲೈಂಗಿಕತೆ ಮತ್ತು ಗಾಯದ ವಿವರಗಳಿಗೆ ಅತಿ ಹೆಚ್ಚು ಕಂಟೆಂಟ್ ರೇಟಿಂಗ್ ನೀಡಲಾಗಿದೆ. ಗೀತೂ ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಆಗಸ್ಟ್ 26 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us