Yuva Rajkumar: ಯುವ ರಾಜ್ಕುಮಾರ್ ಮೊದಲ ಸಿನಿಮಾ ಟೈಟಲ್ ಬಿಡುಗಡೆಗೆ ಮುಹೂರ್ತ
ಯುವ ರಾಜ್ಕುಮಾರ್ ನಟನೆಯ ಮೊದಲ ಸಿನಿಮಾದ ಟೈಟಲ್ ಹಾಗೂ ಟೀಸರ್ ಬಿಡುಗಡೆ ಮಾರ್ಚ್ 3 ರಂದು ನಡೆಯಲಿದೆ.
ಅಪ್ಪು (Puneeth Rajkumar) ನಿಧನದ ಬಳಿಕ ಆ ಸ್ಥಾನವನ್ನು ತುಂಬುವ ನಟ ಯಾರೆಂಬ ಪ್ರಶ್ನೆ ಚಿತ್ರರಂಗ ಮತ್ತು ಅಪ್ಪು ಅಭಿಮಾನಿಗಳಲ್ಲಿದೆ. ರಾಘವೇಂದ್ರ ರಾಜ್ಕುಮಾರ್ ಪುತ್ರ ಯುವ ರಾಜ್ಕುಮಾರ್ (Yuva Rajkumar) ಅವರನ್ನು ಅಪ್ಪುಗೆ ಪರ್ಯಾಯವಾಗಿ ಚಿತ್ರರಂಗದಲ್ಲಿ ನೆಲೆ ಕಾಣಿಸಬೇಕೆಂಬ ಒತ್ತಾಯ ಅಭಿಮಾನಿಗಳಿಂದಲೇ ಸತತವಾಗಿ ಕೇಳಿ ಬರುತ್ತಿದೆ. ಇದಕ್ಕೆ ಮಣಿದು ಅಪ್ಪುಗೆ ಆಪ್ತವಾಗಿದ್ದ ನಿರ್ದೇಶಕ ಸಂತೋಶ್ ಆನಂದ್ರಾಮ್, ಯುವ ರಾಜ್ಕುಮಾರ್ಗಾಗಿ ಕತೆಯೊಂದನ್ನು ಹೆಣೆದಿದ್ದು, ಚಿತ್ರೀಕರಣ ಸಾಗುತ್ತಿದೆ. ಸಿನಿಮಾದ ಟೈಟಲ್ ಟೀಸರ್ ಮಾರ್ಚ್ 3 ರಂದು ಬಿಡುಗಡೆ ಆಗಲಿದೆ.
ಯುವ ರಾಜ್ಕುಮಾರ್ ಅವರ ಮೊದಲ ಸಿನಿಮಾದ ಹೆಸರು ಹಾಗೂ ಟೀಸರ್ (Teaser) ಅನ್ನು ಚಿತ್ರತಂಡ ಬೆಂಗಳೂರಿನ ಜೆಪಿ ನಗರದ ಸಿದ್ದಲಿಂಗೇಶ್ವರ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಿದೆ. ಈ ಬಗ್ಗೆ ಅಪ್ಪು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದು, ಟೈಟಲ್ ಟೀಸರ್ ಬಿಡುಗಡೆಯು ಮಾರ್ಚ್ 3ರ ಸಂಜೆ 6:30 ಕ್ಕೆ ನಡೆಯಲಿದೆ.
ಅಪ್ಪು ಅಭಿಮಾನಿಗಳು, ದೊಡ್ಮನೆ ಅಭಿಮಾನಿಗಳ ಸಮ್ಮುಖದಲ್ಲಿ ಟೈಟಲ್ ಅನಾವರಣ ಹಾಗೂ ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಕಾರ್ಯಕ್ರಮಕ್ಕೆ ಜಮಾಯಿಸುವ ಸಾಧ್ಯತೆ ಇದೆ. ಜೊತೆಗೆ ದೊಡ್ಮನೆಯ ಕೆಲವು ಗಣ್ಯರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
ಪುನೀತ್ ರಾಜ್ಕುಮಾರ್ ಅವರಿಗಾಗಿ ತಯಾರಿಸಲಾಗಿದ್ದ ಕತೆಯನ್ನೇ ತುಸು ಬದಲಾಯಿಸಿ ಯುವ ರಾಜ್ಕುಮಾರ್ ಅವರಿಗಾಗಿ ಸಂತೋಶ್ ಆನಂದ್ರಾಮ್ ಮಾರ್ಪಾಟು ಮಾಡಿದ್ದಾರೆ. ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡುತ್ತಿದೆ. ಪುನೀತ್ ಸಿನಿಮಾಗಳಿಂದಲೇ ಚಿತ್ರರಂಗಕ್ಕೆ ಕಾಲಿಟ್ಟ ಹೊಂಬಾಳೆ, ಇದೀಗ ಯುವ ರಾಜ್ಕುಮಾರ್ರ ಮೊದಲ ಸಿನಿಮಾ ನಿರ್ಮಿಸುತ್ತಿರುವುದು ವಿಶೇಷ.
ಬಾನ ದಾರಿಯಲ್ಲಿ, ಸಪ್ತ ಸಾಗರದಾಚೆ ಎಲ್ಲೊ, ಬೀರ್ಬಲ್ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ರುಕ್ಮಿಣಿ ವಸಂತನ್ ಈ ಸಿನಿಮಾದ ನಾಯಕಿ ಎನ್ನಲಾಗಿತ್ತು. ಆದರೆ ತಾವು ಈ ಸಿನಿಮಾದ ನಾಯಕಿಯಲ್ಲ ಎಂದು ರುಕ್ಮಿಣಿ ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಯುವ ರಾಜ್ಕುಮಾರ್ಗೆ ಯಾರು ನಾಯಕಿ ಎಂಬ ಕುತೂಹಲ ಮೂಡಿದೆ.
ಯುವ ರಾಜ್ಕುಮಾರ್ ಈ ಮೊದಲೇ ಚಿತ್ರರಂಗಕ್ಕೆ ಬರಲು ಸಜ್ಜಾಗಿದ್ದರು. ರಣಧೀರ ಕಂಠೀರವ ಸಿನಿಮಾದಲ್ಲಿ ಯುವ ರಾಜ್ಕುಮಾರ್ ನಟಿಸುವುದು ಪಕ್ಕಾ ಆಗಿತ್ತು. ಸಿನಿಮಾದ ಕ್ಯಾರೆಕ್ಟರ್ ಟೀಸರ್ ಮಾದರಿಯ ವಿಡಿಯೋ ಒಂದು ಬಿಡುಗಡೆ ಸಹ ಆಗಿತ್ತು. ಆದರೆ ಆ ಸಿನಿಮಾ ಸೆಟ್ಟೇರಲಿಲ್ಲ. ಬದಲಿಗೆ ಈಗ ಸಂತೋಶ್ ಆನಂದ್ರಾಮ್ ನಿರ್ದೇಶನದ ಸಿನಿಮಾ ಮೂಲಕ ಯುವ ರಾಜ್ಕುಮಾರ್ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:11 pm, Thu, 2 March 23